ಚಿಕ್ಕಮಗಳೂರು: ಈ ಊರುಗಳನ್ನು ‘ಊರು’ ಎಂದು ಕರೆಯುವಂತೆಯೇ ಇಲ್ಲ.ಜನರು ಮನೆ ಕಟ್ಟಿಕೊಂಡು
ವಾಸಿಸುತ್ತಿದ್ದಾರೆ ಎಂಬುದನ್ನು ಬಿಟ್ಟರೆ, ಊರು ಎನ್ನಲು ಬೇಕಾದ ಯಾವ ಲಕ್ಷಣವೂ ಇಲ್ಲಿ ಕಾಣಿಸುವುದಿಲ್ಲ. ಚಿಕ್ಕ ಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗಡಿ ಗ್ರಾಮಗಳಾದ ಯಡಗುಂದ–ಕಡೆಗುಂಡಿ ಅರಣ್ಯದ ಒಳಗಿನ ನಡುಗಡ್ಡೆಗಳು.
ಕುದುರೆಮುಖ ರಾಷ್ಟ್ರೀಯ ಉದ್ಯಾನ ಮತ್ತು ಮೀಸಲು ಅರಣ್ಯಗಳ ನಡುವಲ್ಲಿ ಈ ವಸತಿ ಪ್ರದೇಶಗಳು ಇವೆ. ಇಲ್ಲಿಗೆ ಹೊರಗಿನ ಸಂಪರ್ಕ ಕಷ್ಟ. ಮೂಲಸೌಕರ್ಯವಂತೂ ಇಲ್ಲವೇ ಇಲ್ಲ. ಕಾಡೊಳಗೆ ವಾಸಿಸುತ್ತಿರುವ ಜನರ ಗೋಳು ಅರಣ್ಯರೋದನ.
ಈ ಊರಿನಲ್ಲಿ ಶಾಲೆ ಇಲ್ಲ. ಶಾಲೆಗೆ ಸೇರಬೇಕಿದ್ದರೆಜಯಪುರ, ಬಾಳೆಹೊನ್ನೂರು, ಶೃಂಗೇರಿಗೆ ಹೋಗಬೇಕು.ಮಕ್ಕಳು ಒಂದನೇ ತರಗತಿಯಿಂದಲೇ ಬೇರೆ ಊರಿನ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಓದಬೇಕು. ಹೀಗಾಗಿ, ಮಕ್ಕಳಿಗೆ ಶಿಕ್ಷಣ ಕೊಡಿಸು ವುದು ಹೆತ್ತವರಿಗೆ ದೊಡ್ಡ ಸವಾಲು.
ಸಮೀಪದ ಕಿತ್ಲೆಗೊಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಚ್ಚಿ ಹಲವು ವರ್ಷಗಳಾಗಿವೆ. ಈ ಕಟ್ಟಡ ಪಾಳು ಬಿದ್ದಿದೆ. ವಿದ್ಯುತ್ ಸಂಪರ್ಕ, ಸಾರಿಗೆ ವ್ಯವಸ್ಥೆ, ರಸ್ತೆ, ಅಂಗಡಿ ಯಾವುವೂ ಇಲ್ಲಿ ಇಲ್ಲ. ಮನೆಗಳು ಕೂಡ ಅಲ್ಲೊಂದು– ಇಲ್ಲೊಂದು ಎಂಬಂತೆ ಬಿಡಿಬಿಡಿಯಾಗಿ ಇವೆ.ಮೊಬೈಲ್ ಫೋನ್ ಕರೆನ್ಸಿ, ದಿನಸಿ, ಅಗತ್ಯ ವಸ್ತು ಎಲ್ಲದಕ್ಕೂ ದೂರದ ಪೇಟೆಗೆ ಹೋಗಬೇಕು. ಕೆಲ ತಿಂಗಳಿಗಾಗುವಷ್ಟು ಒಮ್ಮೆಲೇ ಒಯ್ಯುವ ಪರಿಪಾಟ ಇದೆ.
ಪರಿಶಿಷ್ಟ ಪಂಗಡದ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಈ ಕುಟುಂಬಗಳು ಬಹಳ ವರ್ಷಗಳಿಂದ ಪ್ರಕೃತಿಯೊಂದಿಗೆ ಬದುಕು ಕಟ್ಟಿಕೊಂಡಿವೆ. ಮನೆಗಳಲ್ಲಿ ಟಿ.ವಿ, ದೂರವಾಣಿ, ಪತ್ರಿಕೆ ಯಾವುದೂ ಇಲ್ಲ. ಕೃಷಿ, ಕೂಲಿ ಕೆಲಸ ಬದುಕಿಗೆ ಆಧಾರ. ಇಲ್ಲಿನ ಹಲವು ಮನೆಗಳಲ್ಲಿ ಸೌದೆ ಒಲೆಯಲ್ಲೇ ಅಡುಗೆ ಮಾಡುತ್ತಾರೆ. ಅಡುಗೆ ಅನಿಲ ಸೌಲಭ್ಯ ಸಿಕ್ಕಿಲ್ಲ.
ಹರಳೆಣ್ಣೆ ದೀಪವೇ ಗತಿ: ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಜನರು ಕತ್ತಲೆ ಕಳೆಯಲು ಸೀಮೆಎಣ್ಣೆ ಚಿಮಣಿ, ಹರಳೆಣ್ಣೆ ದೀಪ, ಸೌರ ದೀಪಗಳನ್ನು ಆಶ್ರಯಿಸುತ್ತಿದ್ದಾರೆ. ಸಂಜೆ ಏಳು ಗಂಟೆ ಹೊತ್ತಿಗೆ ಮಲಗುವುದನ್ನು ಇಲ್ಲಿನವರು ಅಭ್ಯಾಸ ಮಾಡಿಕೊಂಡಿದ್ದಾರೆ.
ಕೆಲ ಮನೆಗಳಲ್ಲಿ ಸೋಲಾರ್ ವ್ಯವಸ್ಥೆ ಇದೆ. ಆದರೆ, ಅದು ಮಳೆಗಾಲದಲ್ಲಿ ಉಪಯೋಗಕ್ಕೆ ಬರಲ್ಲ ಎಂಬ ದೂರುಗಳು ಇವೆ. ಮೊಬೈಲ್ ಫೋನ್ ಚಾರ್ಜ್ ಮಾಡಲು ಸೌರ ವಿದ್ಯುತ್ ಇರುವ ಮನೆಯವರನ್ನು ಆಶ್ರಯಿಸಬೇಕಾದ, ಇಲ್ಲವೇ ಪೇಟೆಗೆ ಹೋದಾಗ ಚಾರ್ಜ್ ಮಾಡಿಸಬೇಕಾದ ಸಂಕಷ್ಟ ಇದೆ.
ಹಳ್ಳಕ್ಕೆ ‘ಟರ್ಬೈನ್’ ಅಳವಡಿಸಿ ಇಲ್ಲಿನ ಮನೆಗಳಿಗೆ ವಿದ್ಯುತ್ ಒದಗಿಸುವ ಯೋಜನೆ ಸಫಲವಾಗಿಲ್ಲ. ಗ್ರಾಮಕ್ಕೆ ಏರಿಯಲ್ ಬಂಚ್ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಸ್ತಾವ ಕಡತದಲ್ಲೇ ಉಳಿದಿದೆ ಎನ್ನುತ್ತಾರೆ ಗ್ರಾಮಸ್ಥರು.
ದುರ್ಗಮ ಹಾದಿ: ಈ ಪ್ರದೇಶಕ್ಕೆ ಸಾರಿಗೆ ಸೌಕರ್ಯ ಗಗನ ಕುಸುಮವಾಗಿದೆ. ಸಾರಿಗೆ ವ್ಯವಸ್ಥೆ ಇರುವ ಹತ್ತಿರದ ಊರು ಮೇಗೂರು. ಇಲ್ಲಿಗೆ ಹೋಗಲು ಎಂಟು ಕಿಲೋ ಮೀಟರ್ ಕಾಲ್ನಡಿಗೆಯಲ್ಲೇ ಸಾಗಬೇಕು. ಇಲ್ಲವೇ ಆಟೊ ರಿಕ್ಷಾ ಬಾಡಿಗೆಗೆ ಹಿಡಿದು ಸಂಚರಿಸಬೇಕು. ಆಟೊದವರು ₹ 300 ಬಾಡಿಗೆ ಕೇಳು ತ್ತಾರೆ. ಇಲ್ಲಿರುವುದು ಎರಡೇ ಆಟೊ.
ಮೇಗೂರಿಗೆ ಹೋಗುವ ಹಾದಿ ದುರ್ಗಮ. ಕಲ್ಲುಮಣ್ಣಿನ ಈ ದಾರಿಯಲ್ಲಿ ಸಾಗಲು ಹರಸಾಹಸಪಡಬೇಕು.
ಹಾದಿಯುದ್ದಕ್ಕೂ ಗುಂಡಿಗಳದ್ದೇ ದರ್ಬಾರು. ‘ಬಿದ್ದೀರಾ ಜೋಕೆ’ ಎಂಬ ಎಚ್ಚರಿಕೆಯಲ್ಲೇ ಓಡಾಡಬೇಕು. ವರ್ಷಗಳಿಂದ ಊರಿನಿಂದ ಹೊರಕ್ಕೆ ಹೋಗದ ವೃದ್ಧರು, ಅಶಕ್ತರು, ಗೃಹಿಣಿಯರು ಇಲ್ಲಿ ಇದ್ದಾರೆ.
ಕಡಿದಾದ ದಿಬ್ಬ, ಇಳಿಜಾರುಗಳು ಇವೆ. ಮೂರ್ನಾಲ್ಕು ಕಡೆ ಸೇತುವೆಗಳು, ಹಳ್ಳಗಳು ಇವೆ. ಈ ದಾರಿಯ ದುಃಸ್ಥಿತಿ ನೋಡಿ ವಾಹನಗಳವರು ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಾರೆ. ಕಾಡುಪ್ರಾಣಿಗಳ ಭಯವೂ ಇದೆ. ಮಳೆಗಾಲದಲ್ಲಿ ಈ ಜನವಸತಿಗಳು ದ್ವೀಪಗಳಾಂತಾಗುತ್ತವೆ. ಹಾದಿ ಕೆಸರುಮಯವಾಗುತ್ತದೆ. ನೆಟ್‌ವರ್ಕ್ ಸಮಸ್ಯೆಯೂ ವಿಪರೀತ. ಬಹಳಷ್ಟು ಕಡೆಗಳಲ್ಲಿ ಮೊಬೈಲ್ ಫೋನ್ ಸಂಪರ್ಕ ಸಿಗುವುದಿಲ್ಲ. ಗರ್ಭಿಣಿಯರು, ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವುದು ಸಾಹಸದ ಕೆಲಸ. ಕೆಲವೊಮ್ಮೆ ಆಟೋ ರಿಕ್ಷಾಗಳೂ ಲಭ್ಯವಿರುವುದಿಲ್ಲ. ತುರ್ತು ಸಂದರ್ಭಗಳಲ್ಲಿ (ಹೆರಿಗೆ, ಕಾಡುಪ್ರಾಣಿ ದಾಳಿ, ಹಾವು ಕಡಿತ...) ಕಂಬಳಿ ಜೋಳಿಗೆಯಲ್ಲೇ ಹೊತ್ತೊಯ್ಯಬೇಕು ಎಂದು ಗ್ರಾಮಸ್ಥರು ಸಂಕಟ ತೋಡಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.