ನರಸಿಂಹರಾಜಪುರ: ತಾಲ್ಲೂಕಿನ ಹೊನ್ನೇಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನಿಗೆ ಬೇಸಿಗೆ ಹಂಗಾಮಿನಲ್ಲಿ ನೀರಾವರಿ ಸೌಲಭ್ಯ ಒದಗಿಸುವ ಹೊನ್ನೆಕೂಡಿಗೆ ಏತ ನೀರಾವರಿ ಯೋಜನೆ ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದು, ಈ ಬಾರಿಯಾದರೂ ಕನಸು ನನಸಾಗುವುದೇ ಎಂದು ಗ್ರಾಮಸ್ಥರು ಕಾದು ಕುಳಿತಿದ್ದಾರೆ.
ಬಯಲು ಸೀಮೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಲಕ್ಕವಳ್ಳಿಯಲ್ಲಿ 1958ರಲ್ಲಿ ಭದ್ರಾಜಲಾಶಯ ನಿರ್ಮಾಣ ಮಾಡಿದ್ದರಿಂದ ಗ್ರಾಮದ ವ್ಯಾಪ್ತಿಯ ಬಹುತೇಕ ಜಮೀನು ಭದ್ರಾಹಿನ್ನೀರಿನಲ್ಲಿ ಮುಳುಗಡೆಯಾದವು. ಹೊನ್ನೇಕೂಡಿಗೆ, ಹಂದೂರು, ಬಿಳಾಲುಕೊಪ್ಪ, ಸಾಲೂರು ಮತ್ತು ವರ್ಕಾಟೆ ಗ್ರಾಮಗಳ ಮೂಲನಿವಾಸಿಗಳು ಮುಳುಗಡೆ ಪ್ರದೇಶದ ಸ್ವಲ್ಪ ದೂರದಲ್ಲಿ ಅಲ್ಪಸ್ವಲ್ಪ ಜಮೀನು ಹಿಡಿದುಕೊಂಡು ವ್ಯವಸಾಯ ಮಾಡಲು ಆರಂಭಿಸಿದರು. ಬಹುತೇಕ ಮಳೆಯನ್ನೇ ಆಶ್ರಯಿಸಿದ್ದ ಈ ಜಮೀನಿಗೆ ನೀರಾವರಿ ಸೌಲಭ್ಯ ಒಗದಗಿಸಲು ಈ ನೀರಾವರಿ ಯೋಜನೆ ರೂಪುಗೊಂಡಿತ್ತು.
ಗ್ರಾಮದಿಂದ 2ಕಿ.ಮೀ ದೂರದಲ್ಲಿರುವ ಭದ್ರಾಹಿನ್ನೀರಿನಿಂದ ಗ್ರಾಮದ ಜಮೀನಿಗೆ ನೀರು ಬಳಸಿಕೊಂಡರೆ ಜಮೀನಿನ ಜತೆಗೆ ಕೆರೆಗಳಲ್ಲೂ ನೀರು ತುಂಬಿಸಬಹುದು ಎಂದು ಅಂದಿನ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿದ್ದ ಎಚ್.ಎಸ್.ಕೃಷ್ಣಯ್ಯ ಅವರು ಅಂದು ರಾಜ್ಯ ಸಣ್ಣ ನೀರಾವರಿ ಖಾತೆ ಸಚಿವರಾಗಿದ್ದ ಡಿ.ಬಿ.ಚಂದ್ರೇಗೌಡ ಅವರಿಗೆ 1979ರ ಜ.27ರಂದು ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಿದ್ದರು. 1988–89ರಲ್ಲಿ ಅಂದಿನ ನೀರಾವರಿ ಸಚಿವ ಎಚ್.ಡಿ.ದೇವೇಗೌಡ ಅವರು ಹಾವೇರಿ ಜಲಾನಯನ ಯೋಜನೆಯಲ್ಲಿ ಮಂಜೂರು ಮಾಡಿಸಿದ್ದರು. 1989ರಲ್ಲಿ ಕಾವೇರಿ ಜಲಾನಯನ ಯೋಜನೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಏತನೀರಾವರಿ ಯೋಜನೆಯಿಂದ 850ರಿಂದ 1ಸಾವಿರ ಎಕರೆಗೆ ನೀರಾವರಿ ಸೌಲಭ್ಯವಾಗುತ್ತದೆ. ಯೋಜನೆ ನಿರ್ಮಾಣಕ್ಕೆ ₹ 1.4ಕೋಟಿ ವೆಚ್ಚ ಆಗಬಹುದು ಎಂದು ಅಂದಾಜಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದರು.
1990–91ರಲ್ಲಿ ಸರ್ಕಾರ ಬಜೆಟ್‌ನಲ್ಲಿ ಯೋಜನೆ ಸೇರಿಸಿ 1992ರಲ್ಲಿ ಕಾಮಗಾರಿಗೆ ಟೆಂಡರ್ ಕರೆಯಲಾಯಿತು. ಆದರೆ, ಭದ್ರಾ ಹಿನ್ನೀರು ಬಳಸಿಕೊಳ್ಳಲು ಅನುಮತಿ ದೊರೆಯಲಿಲ್ಲ. 1994ರಲ್ಲಿ ಮುಖ್ಯ ಎಂಜಿನಿಯರ್ ಅವರಿಂದ ನೀರೆತ್ತಲು ಅನುಮತಿ ದೊರೆಯಿತು. ಈ ನಡುವೆ ಕಾವೇರಿ ಮಿಷನ್ ರದ್ದಾಯಿತು. 1998ರಲ್ಲಿ ವಿಶ್ವಬ್ಯಾಂಕ್ ಸಣ್ಣ ನೀರಾವರಿ ಯೋಜನೆಗೆ ಹಣನೀಡಿದ್ದರಿಂದ ಅಂದು ಸಚಿವರಾಗಿದ್ದ ಡಿ.ಬಿ.ಚಂದ್ರೇಗೌಡ ಅವರ ಕಾಲದಲ್ಲಿ ಮತ್ತೆ ಚಾಲನೆ ಸಿಕ್ಕಿತು. ಆದರೆ, ಅರಣ್ಯ ಇಲಾಖೆ ಅನುಮತಿ ಸಿಗಲಿಲ್ಲ. ಏತನೀರಾವತಿ ಯೋಜನೆ ಕಾರ್ಯಗತಗೊಳಿಸಲು ಎಚ್.ಎಸ್.ಕೃಷ್ಣಯ್ಯ ಸೇರಿದಂತೆ ಗ್ರಾಮದ ರೈತರು ಪ್ರಯತ್ನ ಮುಂದುವರಿಸಿದ್ದರು. 2008ರಲ್ಲಿ ಶಾಸಕ ಡಿ.ಎನ್. ಜೀವರಾಜ್ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಹೊನ್ನೇಕೂಡಿಗೆ ಏತನೀರಾವರಿ ಯೋಜನೆಗೆ ಈಗಾಗಲೇ 22 ಅಡಿ ಅಗಲ, 70ಅಡಿ ಆಳದ ಜಾಕ್‌ವೆಲ್ ನಿರ್ಮಿಸಿದ್ದು, ಪಂಪ್‌ಹೌಸ್ ಕಾಮಗಾರಿ ಪೂರ್ಣಗೊಂಡಿದೆ. ಈ ಜಾಕ್‌ವೆಲ್ ಗೆ 200 ಅಡಿ ದೂರದ ಭದ್ರಾನದಿಯಿಂದ ನೀರನ್ನು 300 ಎಚ್.ಪಿ. ಸಾಮರ್ಥ್ಯದ ಮೋಟಾರ್‌ನಲ್ಲಿ ಎತ್ತಿ ಓವರ್ ಹೆಡ್ ಟ್ಯಾಂಕ್‌ನಲ್ಲಿ ಸಂಗ್ರಹಿಸಿ ಅಲ್ಲಿಂದ ಕೊಳವೆ ಮೂಲಕ ಹೊನ್ನೇಕೂಡಿಗೆ, ಹಂದೂರು, ಬಿಳಾಲುಕೊಪ್ಪ ಸಾಲೂರು ಮತ್ತು ವರ್ಕಾಟೆ ಗ್ರಾಮದ ವ್ಯಾಪ್ತಿಯ 60ಕೆರೆಗಳಿಗೆ ತುಂಬಿಸಿ ಕೆರೆಗಳಿಂದ ಜಮೀನಿಗೆ ನೀರು ಹಾಯಿಸುವುದು ಯೋಜನೆಯ ಉದ್ದೇಶ.
ಏತನೀರಾವರಿ ಯೋಜನೆಯ ಪಂಪ್‌ಹೌಸ್‌ನಿಂದ ಓವರ್ ಹೆಡ್ ಟ್ಯಾಂಕ್‌ಗೆ ನೀರು ಹರಿಸಲು ಕೊಳವೆ ಅಳವಡಿಸಬೇಕಿದ್ದು, 1.50 ಕಿ.ಮೀ ಮಾರ್ಗ ಅರಣ್ಯ ಇಲಾಖೆ ಜಾಗದಲ್ಲಿ ಹಾದು ಹೋಗಲಿದ್ದು, ಇಲಾಖೆ ಅನುಮತಿ ನೀಡದಿರುವುದು ಕಾಮಗಾರಿ ಮಂದಗತಿಯಲ್ಲಿ ಸಾಗಲು ಕಾರಣವಾಗಿದೆ.
ಹೊನ್ನೇಕೂಡಿಗೆ ಏತನೀರಾವರಿ ಯೋಜನೆಗೆ ಅರಣ್ಯ ಇಲಾಖೆಯ ಅನುಮತಿ ಪಡೆಯಲು ವರದಿ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಅನುಮತಿ ದೊರೆಯುವ ನಿರೀಕ್ಷೆಯಿದೆ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಹೊನ್ನೇಕೂಡಿಗೆ ಏತನೀರಾವರಿ ಯೋಜನೆ ಪೂರ್ಣಗೊಳಿಸಲು ಅರಣ್ಯ ಇಲಾಖೆ ಅನುಮತಿ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದೆ. ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಹೊನ್ನೇಕೂಡಿಗೆ ಏತನೀರಾವರಿ ಯೋಜನೆಗೆ 1978ರಿಂದಲೂ ಹೋರಾಟ ಮಾಡಲಾಗುತ್ತಿದೆ. ಯೋಜನೆ ಕಾರ್ಯಗತಗೊಂಡರೆ 1.100 ಎಕರೆಗೆ ಅನುಕೂಲವಾಗಲಿದೆ. ಸರ್ಕಾರ ಶೀಘ್ರವಾಗಿ ಯೋಜನೆ ಪೂರ್ಣಗೊಳಿಸಬೇಕು ಎಂದು ತಾಲ್ಲೂಕು ಅಭಿವೃದ್ಧಿ ಮಂಡಳಿ ಮಾಜಿ ಸದಸ್ಯ ಎಚ್.ಎಸ್.ಕೃಷ್ಣಯ್ಯ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.