ADVERTISEMENT

ಗ್ರಾಮೀಣ ಭಾಗದಲ್ಲಿ ಜನಜೀವನ ಸ್ತಬ್ಧ

ವಾರದಿಂದ ಕಣ್ಮರೆಯಾದ ವಿದ್ಯುತ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 10:53 IST
Last Updated 18 ಜುಲೈ 2018, 10:53 IST
ಮೂಡಿಗೆರೆ ತಾಲ್ಲೂಕಿನ ಮತ್ತಿಕಟ್ಟೆ ಗ್ರಾಮದ ಬಳಿ ವಿದ್ಯುತ್‌ ಕಂಬ ಧರೆಗುರುಳಿದ್ದು, ನಾಲ್ಕು ದಿನಗಳಿಂದ ವಿದ್ಯುತ್‌ ಇಲ್ಲದೇ ಪರದಾಡುವಂತಾಗಿದೆ.
ಮೂಡಿಗೆರೆ ತಾಲ್ಲೂಕಿನ ಮತ್ತಿಕಟ್ಟೆ ಗ್ರಾಮದ ಬಳಿ ವಿದ್ಯುತ್‌ ಕಂಬ ಧರೆಗುರುಳಿದ್ದು, ನಾಲ್ಕು ದಿನಗಳಿಂದ ವಿದ್ಯುತ್‌ ಇಲ್ಲದೇ ಪರದಾಡುವಂತಾಗಿದೆ.   

ಮೂಡಿಗೆರೆ: ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ವಾರದಿಂದ ವಿದ್ಯುತ್ ಪೂರೈಕೆ ಸ್ಥಗಿತವಾಗಿದ್ದು, ಜನಜೀವನ ಅಕ್ಷರಶಃ ಸ್ತಬ್ಧವಾಗಿದೆ.

ಕಳೆದ ಹದಿನೈದು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಾಗೂ ಮಳೆಯೊಂದಿಗೆ ಬೀಸುತ್ತಿರುವ ಗಾಳಿ ವಿದ್ಯುತ್‌ ಪೂರೈಕೆಗೆ ಅಡಚಣೆಯಾಗಿದ್ದು, ಗ್ರಾಮೀಣ ಭಾಗದ ಜನರನ್ನು ನರಕಕ್ಕೆ ತಳ್ಳಿದಂತಾಗಿದೆ.

ತಾಲ್ಲೂಕಿನ ಕೂವೆ, ನಿಡುವಾಳೆ, ಮತ್ತಿಕಟ್ಟೆ, ಹೆಗ್ಗುಡ್ಲು, ತರುವೆ, ಕೊಟ್ಟಿಗೆಹಾರ, ಗುತ್ತಿ, ಮೂಲರಹಳ್ಳಿ, ದೇವರಮನೆ, ಭೈರಾಪುರ, ದೇವರುಂದ ಮೇಕನಗದ್ದೆ, ಜಿ. ಹೊಸಳ್ಳಿ, ಬಾನಳ್ಳಿ, ಭಾರತೀಬೈಲು, ಕುಂದೂರು ಸೇರಿದಂತೆ ಬಹುತೇಕ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್‌ ಕಣ್ಮರೆಯಾಗಿ ಒಂದು ವಾರ ಕಳೆದರೂ ದುರಸ್ತಿ ಕಾರ್ಯಗಳು ನಡೆಯದೇ ಈ ಭಾಗದ ಜನರು ಇನ್ನಷ್ಟು ದಿನಗಳು ಕತ್ತಲೆಯಲ್ಲಿಯೇ ಕಳೆಯುವಂತಹ ಪರಿಸ್ಥಿತಿ ಬಂದೊದಗಿದೆ.

ADVERTISEMENT

ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆಯವರೆಗೂ ಸುಮಾರು 232 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಎಂಟು ವಿದ್ಯುತ್ ಪರಿವರ್ತಕಗಳು ಹಾನಿಯಾಗಿವೆ. ಬಹುತೇಕ ವಿದ್ಯುತ್ ಕಂಬಗಳು ಮುರಿಯಲು ವಿದ್ಯುತ್ ಮಾರ್ಗದ ಮೇಲೆ ಮರದ ಕೊಂಬೆಗಳು ಮುರಿದು ಬಿದ್ದಿರುವುದು ಕಾರಣವಾಗಿದ್ದು, ಗಾಳಿಯ ಪ್ರಮಾಣ ಹೆಚ್ಚಾದರೆ ಇನ್ನಷ್ಟು ಹಾನಿಯಾಗುವ ಸಂಕಷ್ಟ ಎದುರಾಗಿದೆ.

ವಿದ್ಯುತ್ ಸ್ಥಗಿತದ ಕೊರತೆಯಿಂದ ದಿನ ನಿತ್ಯದ ಬದುಕು ದುಸ್ತರವಾಗಿದ್ದು, ಮನೆಗಳಲ್ಲಿ ವಿದ್ಯುತ್ ಇಲ್ಲದೇ ಮಹಿಳೆಯರಿಗೆ ಅಡುಗೆ ತಯಾರಿ ಸಂಕಷ್ಟ ಮಾತ್ರವಲ್ಲದೇ ಮೊಬೈಲ್‌ಗಳನ್ನು ಚಾರ್ಜ್ ಮಾಡಿಕೊಳ್ಳಲು ಸಾಧ್ಯವಾಗದೇ ಸಂಪರ್ಕ, ಸಂವಹನ ಕೂಡ ಕಡಿತವಾಗಿದ್ದು, ಗ್ರಾಮೀಣ ಜನರು ಸಂಕಷ್ಟ ಎದುರಿಸುವಂತಾಗಿದೆ.

ಸರ್ಕಾರಿ ಕೆಲಸಗಳು ಸ್ಥಗಿತ:ವಿದ್ಯುತ್ ಕೈಕೊಟ್ಟಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿರುವ ಬ್ಯಾಂಕ್, ಗ್ರಾಮ ಪಂಚಾಯಿತಿ ಕಚೇರಿ, ನಾಡಕಚೇರಿಗಳಲ್ಲಿ ಕೆಲಸ ಕಾರ್ಯಗಳು ಸ್ಥಗಿತವಾಗಿದ್ದು, ಸವಲತ್ತುಗಳಿಗಾಗಿ ಅರ್ಜಿ ಹಾಕಿದ್ದ ಫಲಾನುಭವಿಗಳು ಪರದಾಡುವಂತಾಗಿದೆ. ನಾಡಕಚೇರಿಗಳಲ್ಲಿ ಪಹಣಿ, ವಾಸಸ್ಥಳ ದೃಢೀಕರಣ ಸೇರಿದಂತೆ ವಿವಿಧ ಅರ್ಜಿಗಳನ್ನು ಮುದ್ರಿಸಲು ವಿದ್ಯುತ್ ಇಲ್ಲದೇ ಸಮಸ್ಯೆ ಉಲ್ಬಣಿಸಿದ್ದು, ಅರ್ಜಿದಾರರಿಗೂ ಉತ್ತರಿಸಲಾಗದೇ ನೌಕರರು ಹೆಣಗಾಡುತ್ತಿದ್ದಾರೆ.

ಕೈಗಾರಿಕೆಗಳು ಸ್ಥಗಿತ:ವಿದ್ಯುತ್ ಪೂರೈಕೆ ಸ್ಥಗಿತವು ನೇರವಾಗಿ ಗ್ರಾಮೀಣ ಭಾಗದ ಗುಡಿಕೈಗಾರಿಕೆಗಳ ಮೇಲೆ ಪರಿಣಾಮ ಬೀರಿದ್ದು ಹಿಟ್ಟಿನ ಗಿರಣಿಗಳು, ಭತ್ತದ ಗಿರಣಿಗಳು, ಡ್ರೈಕ್ಲೀನಿಂಗ್‌ಗಳು ಹಾಗೂ ಕೂಲಿ ಕಾರ್ಮಿಕರು ದುಡಿಮೆಯಿಲ್ಲದೇ ವಾರದ ಪಡಿತರಕ್ಕೆ ಪರದಾಡುವಂತಾಗಿದೆ.

ನೆಲಕ್ಕುರುಳಿರುವ ವಿದ್ಯುತ್‌ ಕಂಬಗಳನ್ನು ದುರಸ್ತಿಗೊಳಿಸದೇ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲದ ಕಾರಣ, ಮೆಸ್ಕಾಂ ಇಲಾಖೆಯು ಕೂಡಲೇ ಹೆಚ್ಚುವರಿ ಮಾರ್ಗದಾಳುಗಳನ್ನು ನೇಮಿಸಿಕೊಂಡು ವಿದ್ಯುತ್ ಮಾರ್ಗಗಳನ್ನು ದುರಸ್ತಿ ಪಡಿಸಿ ವಿದ್ಯುತ್ ಪೂರೈಕೆಗೆ ಮುಂದಾಗಬೇಕು ಎಂದು ಜನತೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.