ಚಿಕ್ಕಮಗಳೂರು: ಜಿಲ್ಲೆಯ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದವರು ಇಬ್ಬರೇ ಸಂಸದರು. ಮೊದಲ ಸಂಸದ ಎಚ್.ಸಿದ್ದನಂಜಪ್ಪ ಅವರು ಮೊದಲನೇ ಹ್ಯಾಟ್ರಿಕ್ ಸಾಧನೆ ಮಾಡಿದ್ದರೆ, ಎರಡನೇ ಹ್ಯಾಟ್ರಿಕ್ ಸಂಸದ ಎಂದರೆ ಡಿ.ಸಿ.ಶ್ರೀಕಂಠಪ್ಪ.
1991ರ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಶ್ರೀಕಂಠಪ್ಪ ಸ್ಪರ್ಧೆ ಮಾಡಿದ್ದರು. ಆದರೆ, ಆ ಚುನಾವಣೆಯಲ್ಲಿ ಅವರು ಸೋಲು ಕಂಡಿದ್ದರು. ನಂತರ 1998ರ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ದೊರಕುತ್ತದೆ. ಶ್ರೀಕಂಠಪ್ಪ ಅವರು 3,16,137 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಎಂ.ವೀರಪ್ಪ ಮೊಯ್ಲಿ 2,63,641 ಮತಗಳನ್ನು ಪಡೆದಿದ್ದರು. 52,496 ಮತಗಳ ಅಂತರದಿಂದ ಶ್ರೀಕಂಠಪ್ಪ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದ್ದರು.
ರಾಜಕೀಯ ಮೇಲಾಟದಲ್ಲಿ ಕೇಂದ್ರ ಸರ್ಕಾರ ಉರುಳಿದ್ದರಿಂದ 1999ರಲ್ಲಿ ಮತ್ತೊಮ್ಮೆ ಲೋಕಸಭೆ ಚುನಾವಣೆ ಎದುರಾಗುತ್ತದೆ. ಆ ಚುನಾವಣೆಯಲ್ಲಿ ಶ್ರೀಕಂಠಪ್ಪ ಅವರಿಗೆ ಮತ್ತೊಮ್ಮೆ ಬಿಜೆಪಿಯಿಂದ ಟಿಕೆಟ್ ದೊರೆಯುತ್ತದೆ. ಅವರು 3,24,470 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಿ.ಎಂ. ಪುಟ್ಟೇಗೌಡ 2.94,193 ಮತಗಳನ್ನು ಪಡೆಯುತ್ತಾರೆ. 45,731 ಮತಗಳ ಅಂತರದಲ್ಲಿ ಶ್ರೀಕಂಠಪ್ಪ ಎರಡನೇ ಬಾರಿ ಗೆಲ್ಲುತ್ತಾರೆ.
ಐದು ವರ್ಷಗಳ ಕಾಲ ಸಂಸದರಾಗಿ ಜಿಲ್ಲೆಯನ್ನು ಪ್ರತಿನಿಧಿಸುತ್ತಾರೆ. 2004ರಲ್ಲಿ ನಡೆದ ಚುನಾವಣೆಯಲ್ಲೂ ಶ್ರೀಕಂಠಪ್ಪ ಅವರಿಗೇ ಬಿಜೆಪಿಯಿಂದ ಅವಕಾಶ ದೊರಕುತ್ತದೆ. ಆ ಚುನಾವಣೆಯಲ್ಲಿ 3,39,924 ಮತಗಳನ್ನು ಶ್ರೀಕಂಠಪ್ಪ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಎಲ್. ಶಂಕರ್ 2,67,294 ಮತಗಳನ್ನು ಪಡೆಯುತ್ತಾರೆ. 72,630 ಮತಗಳ ಅಂತರದಿಂದ ಮೂರನೇ ಬಾರಿಗೆ ಗೆಲುವು ಸಾಧಿಸುತ್ತಾರೆ.
ಜಿಲ್ಲೆಯನ್ನು ಸಂಸತ್ತಿನಲ್ಲಿ ಮೂರು ಬಾರಿ ಪ್ರತಿನಿಧಿಸಿದ ಎರಡನೇ ಸಂಸದ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.