ಕಡೂರು: ಪಟ್ಟಣದಲ್ಲಿ ಮರಳು, ಎಂಸ್ಯಾಂಡ್, ಜಲ್ಲಿ ಪುಡಿಯನ್ನು ಟ್ರ್ಯಾಕ್ಟರ್, ಲಾರಿಗಳಲ್ಲಿ ಮುಚ್ಚದೆ (ಟಾರ್ಪಾಲ್ ಹೊದಿಸದೆ) ಸಾಗಿಸಲಾಗುತ್ತಿದ್ದು, ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ದೂಳಿನಿಂದ ಗಂಭೀರ ಸಮಸ್ಯೆ ಅನುಭವಿಸುತ್ತಿದ್ದಾರೆ.
ಪಟ್ಟಣದಲ್ಲಿ ಬೈ ಪಾಸ್ ಮತ್ತಿತರ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿಗೆ ಬೇಕಾದ ಎಂಸ್ಯಾಂಡ್, ಕಾಂಕ್ರೀಟ್ ಮಿಕ್ಸ್ ಜಲ್ಲಿಯನ್ನು ಟ್ರ್ಯಾಕ್ಟರ್ ಲಾರಿಗಳಲ್ಲಿ ನಿಯಮ ಉಲ್ಲಂಘಿಸಿ ಸಾಗಿಸಲಾಗುತ್ತದೆ. ಮಲ್ಲೇಶ್ವರ, ಗೆದ್ಲೆಹಳ್ಳಿ, ಸೇವಾಪುರ ಮುಂತಾದೆಡೆ ಕ್ರಷರ್‌ಗಳಿಂದ ಇವುಗಳನ್ನು ಕಾಮಗಾರಿ ನಡೆಯುವ ಸ್ಥಳಗಳಿಗೆ ಸಾಗಿಸಲಾಗುತ್ತದೆ. ನೀರು ಚಿಮುಕಿಸಿ, ಟಾರ್ಪಾಲ್‌ನಿಂದ ಮುಚ್ಚಿ ಜಲ್ಲಿಪುಡಿ, ಎಂಸ್ಯಾಂಡ್ ಸಾಗಿಸಬೇಕೆಂಬ ನಿಯಮವಿದ್ದರೂ ವಾಹನಗಳ ಚಾಲಕರು ಈ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ರಸ್ತೆ ನಡುವೆ ವೇಗವಾಗಿ ಸಾಗುವ ಇಂತಹ ವಾಹನಗಳಿಂದ ಹೊರ ಹೊಮ್ಮುವ ದೂಳು ದ್ವಿಚಕ್ರ ಸವಾರರಿಗೆ ಅಪಾಯಕಾರಿಯಾಗಿದೆ. ರಸ್ತೆ ಉಬ್ಬು ಇರುವೆಡೆ ಲಾರಿಯಿಂದ ಎಂಸ್ಯಾಂಡ್ ದೂಳು ದಟ್ಟವಾಗಿ ಹಬ್ಬುವುದರಿಂದ ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ಕತ್ತಲು ಕವಿದಂತಾಗಿ, ಎದುರಿನಿಂದ ಬರುವ ವಾಹನಗಳು ಕಾಣದೆ ಅಪಘಾತಗಳು ಸಂಭವಿಸುತ್ತಿವೆ. ಮರವಂಜಿ ರಸ್ತೆಯ ಮಲ್ಲೇಶ್ವರ ಬೈ ಪಾಸ್ ಮೇಲುಸೇತುವೆ ಬಳಿ ಎಂ ಸ್ಯಾಂಡ್ ಸಾಗಿಸುವ ವಾಹನಗಳು ಹೆಚ್ಚಿದ್ದು, ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಿದೆ.
ಎಂಸ್ಯಾಂಡ್ ಸಾಗಿಸುವ ವಾಹನಗಳು ನಿಯಮ ಪಾಲಿಸುವಂತೆ ಸಾಕಷ್ಟು ಬಾರಿ ಸೂಚಿಸಿದ್ದರೂ ಅದೇ ಚಾಳಿ ಮುಂದುವರಿದಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆಪವನ್ ಕುಮಾರ್ ಪಿಎಸ್‌ಐ
ಎಂಸ್ಯಾಂಡ್ ಸಾಗಿಸುವ ವಾಹನಗಳಿಂದಾಗಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದು ಕಷ್ಟಕರವಾಗಿದೆ. ದೂಳು ಕಣ್ಣಿಗೆ ನುಗ್ಗುತ್ತದೆ-ಹನುಮಂತಪ್ಪ, ಮಚ್ಚೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.