ಮೂಡಿಗೆರೆ: ತಾಲ್ಲೂಕಿನಾದ್ಯಂತ ಶುಕ್ರವಾರ ಮಹಾಶಿವರಾತ್ರಿ ಹಬ್ಬವನ್ನು ಶಿವನಾಮ ಸ್ಮರಣೆಯೊಂದಿಗೆ ಆಚರಿಸಲಾಯಿತು.
ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ, ಮುಂಜಾನೆಯೇ ಬಿಲ್ವಪತ್ರೆ, ತುಂಬೆ ಹೂವುಗಳೊಂದಿಗೆ ಶಿವನಾಮ ಸ್ಮರಣೆ ಮಾಡಿ ಈಶ್ವರನಿಗೆ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಗಂಗಾಧೇಶ್ವರ ದೇವಾಲಯ, ಮೇಗಲಪೇಟೆಯ ಬಸವೇಶ್ವರ ದೇವಾಲಯಗಳಲ್ಲಿ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಹೋಮನಡೆಸಿ, ಈಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧಡೆಯಿಂದ ಇಡೀ ದಿನ ಭಕ್ತರು ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದರು.
ತಾಲ್ಲೂಕಿನ ದೇವರುಂದ ಗ್ರಾಮದಲ್ಲಿರುವ ಪ್ರಸನ್ನ ರಾಮೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಮೇಶ್ವರ ಸ್ವಾಮಿಗೆ ಹೂವಿನ ಅಲಂಕಾರ ಮಾಡಿ, ದೇವಾಲಯದಲ್ಲಿ ರುದ್ರಾಭಿಷೇಕ, ಹೋಮ ನಡೆಸಲಾಯಿತು. ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಾಗರಣೆ ನಡೆಯಿತು. ಭೈರಾಪುರದ ನಾಣ್ಯ ಭೈರವೇಶ್ವರ, ಫಲ್ಗುಣಿ ಕಲಾನಾಥೇಶ್ವರ, ದೇವರಮನೆಯ ಕಾಲಭೈರವೇಶ್ವರ, ಕುಂದೂರು ಈಶ್ವರ, ತಳವಾರ ಈಶ್ವರ, ಕಾಲಭೈರವೇಶ್ವರ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನಡೆದವು. ಪಟ್ಟಣದ ಶನೇಶ್ವರ ದೇವಾಲಯ, ಅಯ್ಯಪ್ಪಸ್ವಾಮಿ ದೇವಾಲಯ, ವೇಣುಗೋಪಾಲಸ್ವಾಮಿ ದೇವಾಲಯಗಳಲ್ಲಿಯೂ ಹಬ್ಬದ ಅಂಗವಾಗಿ ವಿಶೇಷ ಪೂಜೆ ನಡಯಿತು. ದೇವಾಲಯಗಳಲ್ಲಿ ಭಕ್ತರಿಗೆ ಪಾನಕ, ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪಟ್ಟಣದ ಮೇಗಲಪೇಟೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದಲ್ಲಿ ಶಿವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಬೆಳಿಗ್ಗೆಯೇ ಕೇಂದ್ರಕ್ಕೆ ಬಂದ ಭಕ್ತರು ಶಿವನಾಮ ಸ್ಮರಣೆ ಮಾಡಿದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.