ADVERTISEMENT

ಮುದ್ರಾ ಯೋಜನೆ ಸದ್ಬಳಕೆಗೆ ಶಾಸಕ ಸಿ.ಟಿ.ರವಿ ಸಲಹೆ

ಮಿನಿ ಉದ್ಯೋಗ ಮೇಳ ಉದ್ಘಾಟನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 14:03 IST
Last Updated 31 ಜನವರಿ 2019, 14:03 IST
ಉದ್ಘಾಟನೆಯಲ್ಲಿ ಕೌಶಲಾಭಿವೃದ್ಧಿ ಅಧಿಕಾರಿ ರವೀಂದ್ರನಾಥ್‌, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಶಾಸಕ ಸಿ.ಟಿ.ರವಿ, ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್‌ ಪಾಲ್ಗೊಂಡಿದ್ದರು.
ಉದ್ಘಾಟನೆಯಲ್ಲಿ ಕೌಶಲಾಭಿವೃದ್ಧಿ ಅಧಿಕಾರಿ ರವೀಂದ್ರನಾಥ್‌, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಶಾಸಕ ಸಿ.ಟಿ.ರವಿ, ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್‌ ಪಾಲ್ಗೊಂಡಿದ್ದರು.   

ಚಿಕ್ಕಮಗಳೂರು: ಮುದ್ರಾ ಸಾಲ ಯೋಜನೆ ಸದುಪಯೋಗಕ್ಕೆ ಶಾಸಕ ಸಿ.ಟಿ.ರವಿ ಯುವಕರಿಗೆ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮತ್ತು ಕೌಶಲಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಮಿನಿ ಉದ್ಯೋಗ ಮೇಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ ಮುದ್ರಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ 5 ಸಾವಿರದಿಂದ ₹ 1 ಕೋಟಿ ವರೆಗೆ ಶೂರಿಟಿ ಇಲ್ಲದೆ ಪ್ರಾಜೆಕ್ಟ್‌ ಆಧರಿಸಿ ಸಾಲ ಪಡೆಯಬಹುದು. ಯುವಜನರು ಕೌಶಲಾಭಿವೃದ್ಧಿ ತರಬೇತಿ ಪಡೆದು ಸ್ವಂತಉದ್ದಿಮೆ ಆರಂಭಿಸಬಹುದು ಎಂದರು.

ADVERTISEMENT

ದೇಶದಲ್ಲಿ 65ಕೋಟಿಗೂ ಹೆಚ್ಚು ಯುವಜನರು ಇದ್ದಾರೆ. ಈ ಯುವಜನರಿಗೆ ಕೌಶಲಾಭಿವೃದ್ಧಿ ಇಲಾಖೆ ಮೂಲಕ ತರಬೇತಿ ನೀಡಿ, ಉದ್ಯೋಗ ಕಲ್ಪಿಸಿದರೆ ದೇಶದ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಇದಕ್ಕಾಗಿ ದೇಶದ ಉದ್ದಗಲಕ್ಕೂ 4800ಕ್ಕೂ ಹೆಚ್ಚು ಕೌಶಲ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳನ್ನು ಯುವ ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉದ್ಯೊಗ ಮೇಳ ಆಯೋಜನೆ ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳ ಮುಖಾಮುಖಿಗೆ ಅನುಕೂಲ ಕಲ್ಪಿಸುತ್ತದೆ. ಉದ್ಯೋಗ ಪಡೆದು ಕೌಶಲ ಬಳಸುವುದರಿಂದ ದೇಶದ ಅಭಿವೃದ್ಧಿ ಹೆಚ್ಚುತ್ತದೆ ಎಂದರು.

ಉದ್ಯೋಗ ಸಿಗದಿದ್ದರೆ ಅವಕಾಶಗಳ ಬಾಗಿಲು ಮುಚ್ಚಿತು ಎಂದು ನಿರಾಶರಾಗಬಾರದು. ಒಂದು ಬಾಗಿಲು ಮುಚ್ಚಿದರೆ 10 ಬಾಗಿಲು ತೆರೆದಿರುತ್ತವೆ. ತರಬೇತಿ ಪಡೆದು ಪ್ರಯತ್ನ ಮಾಡಿ ಯಶಸ್ವಿಯಾಗಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ ಪ್ರತಿಯೊಬ್ಬರಿಗೂ ಸರ್ಕಾರಿ ಕೆಲಸ ಸಿಗುವುದು ಕಷ್ಟ. ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸಿ ಸಿಗದಿದ್ದಾಗ ತಮ್ಮ ಜೀವನವೇ ಮುಗಿಯಿತು ಎಂದು ನಿರಾಶರಾಗಬಾರದು. ಗ್ರಾಮೀಣ ಪ್ರದೇಶದ ಮಕ್ಕಳು ಉತ್ತಮ ಅಂಕಗಳನ್ನು ಗಳಿಸಿರುತ್ತಾರೆ, ಆದರೆ ತಮ್ಮಲ್ಲಿರುವ ಕೌಶಲವನ್ನು ಕಂಪನಿಗಳ ಮುಂದೆ ತೋರಿಸಲು ವಿಫಲರಾಗುತ್ತಾರೆ. ಇದಕ್ಕಾಗಿ ಅವರಿಗೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೌಶಲಾಭಿವೃದ್ಧಿ ಇಲಾಖೆ ತೆರೆದು ಕೌಶಲ ತರಬೇತಿಗೆ ಅವಕಾಶ ಕಲ್ಪಿಸಿವೆ. ಯುವಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ನಗರಸಭೆ ಅಧ್ಯಕ್ಷೆ ಶಿಲ್ಪರಾಜಶೇಖರ್ ಮಾತನಾಡಿದರು. ಜಿಲ್ಲಾ ಉದ್ಯೋಗಾಧಿಕಾರಿ ಕೆ.ಮಂಜುನಾಥ್ ಇದ್ದರು.

120 ಮಂದಿ ಆಯ್ಕೆ

ಮೇಳದಲ್ಲಿ ವಿವಿಧ ಕಂಪೆನಿಗಳವರು120 ಮಂದಿಯನ್ನು ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಿದ್ದಾರೆ ಎಂದು ಉದ್ಯೋಗಾಧಿಕಾರಿ ಕೆ.ಮಂಜುನಾಥ್‌ ತಿಳಿಸಿದ್ದಾರೆ.

ಜಿಲ್ಲೆಯ ವಿವಿಧೆಡೆಗಳಿಂದ ಒಟ್ಟು 710 ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಂಡಿದ್ದರು. ಎಲ್‌ಐಸಿ, ಎಸ್‌ಬಿಐ ಇನ್‌ಶ್ಯೂರೆನ್ಸ್‌, ಎಕ್ಸೈಡ್‌, ಟೆಕ್‌ ಮಹೀಂದ್ರ ಕಾಲ್‌ ಸೆಂಟರ್‌, ಗ್ರಂಥಾಲಯ, ಬಿಎಸ್‌ಎನ್‌ ಇಂಡಿಯಾ ಸಹಿತ 31 ವಿವಿಧ ಕಂಪನಿಗಳು ಭಾಗವಹಿಸಿದ್ದವು. ಉದ್ಯೋಗಾಕಾಂಕ್ಷಿಗಳ ವಿದ್ಯಾರ್ಹತೆ, ಕೌಶಲ ಆಧರಿಸಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗಿದೆ. ಎಂದು ತಿಳಿಸಿದ್ದಾರೆ.

ಮಾರುಕಟ್ಟೆ ವ್ಯವಸ್ಥಾಪಕ, ವಿಮಾ ಪ್ರತಿನಿಧಿ, ಗ್ರಾಹಕ ವ್ಯವಹಾರ ಸೇವೆ, ಎಕ್ಸಿಕ್ಯೂಟಿವ್‌ ಇತರ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.