ADVERTISEMENT

ಚಾರ್ಮಾಡಿ: ತಂಪುಮನೆಯ ಚಾವಣಿ ಶಿಥಿಲ

ಮಾಸಿದ ಮಲಯ ಮಾರುತ ಅತಿಥಿಗೃಹದ ಬಣ್ಣ, ಪಾಚಿಯ ಹೊದಿಕೆ

ಅನಿಲ್ ಮೊಂತೆರೊ
Published 26 ಅಕ್ಟೋಬರ್ 2024, 7:23 IST
Last Updated 26 ಅಕ್ಟೋಬರ್ 2024, 7:23 IST
ಮಲಯ ಮಾರುತ ಅತಿಥಿಗೃಹ ಪಾಚಿ ಹಿಡಿದಿರುವುದು
ಮಲಯ ಮಾರುತ ಅತಿಥಿಗೃಹ ಪಾಚಿ ಹಿಡಿದಿರುವುದು   

ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿ ಪ್ರವೇಶ ದ್ವಾರದಲ್ಲಿ ಸಿಗುವುದು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಅರಣ್ಯ ಇಲಾಖೆಯ  ಮಲಯ ಮಾರುತ ಅತಿಥಿಗೃಹ ಈಗ ನವೀಕರಣಕ್ಕೆ ಕಾದಿದೆ.

ಚಾರ್ಮಾಡಿ ಘಾಟಿಯಲ್ಲಿ ಉಳಿದು ಸೌಂದರ್ಯ ಸವಿಯಲು ‘ಮಲಯ ಮಾರುತ’ ವಸತಿ ಗೃಹ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣ. ಮೂರು ದಶಕದ ಹಿಂದೆ ಉಪಅರಣ್ಯ ಸಂರಕ್ಷಣಾಧಿಕಾರಿ ಆಗಿದ್ದ ಜಿ.ಎನ್.ಶ್ರೀಕಂಠಯ್ಯ ಅವರ ಪರಿಕಲ್ಪನೆಯಲ್ಲಿ ಈ ಅತಿಥಿಗೃಹ ನಿರ್ಮಾಣಗೊಂಡಿದೆ. ಹಸಿರ ಮಡಿಲಿನಲ್ಲಿ ಕಲಾಕೃತಿಯ ರೂಪದಲ್ಲಿ ಈ ಅತಿಥಿ ಗೃಹ ತಲೆ ಎತ್ತಿತು. ಎಂತಹ ಬೇಸಿಗೆಯಲ್ಲೂ ತಂಪುಮನೆಯಾಗಿ ಆಕರ್ಷಣೆಯ ಕೇಂದ್ರವಾಗಿತ್ತು. 

ಈ ಕಟ್ಟಡವೀಗ ಪಾಚಿಕಟ್ಟಿ ನಲುಗುತ್ತಿದೆ. ಮೇಲ್ಛಾವಣಿ ಶಿಥಿಲಗೊಂಡು ಒಳಕೋಣೆ ಕೂಡ ನೀರಿನಿಂದ ಸೋರುತ್ತಿದೆ. ಪ್ರಾಂಗಣದಲ್ಲಿ ಸುತ್ತುವರಿದ ಮರದ ಪಕಾಸುಗಳು ಕೂಡ ಶಿಥಿಲಗೊಂಡಿವೆ.

ADVERTISEMENT

1993ರಲ್ಲಿ ಉದ್ಘಾಟನೆಯಾದಾಗ ಈ ಅತಿಥಿಗೃಹ ಕೆಂಪು ಹಾಗೂ ಬಿಳಿ ಬಣ್ಣದಲ್ಲಿ ಕಂಗೊಳಿಸಿತ್ತು. ನಂತರ ಅದಕ್ಕೆ ತಿಳಿ ಹಸಿರು ಬಣ್ಣ ಬಳಿದಿದ್ದರಿಂದ ಅದರ ಅಂದ ಮಾಯವಾಯಿತು. ಈಗ ಪಾಚಿ ಹಿಡಿದು ಸೌಂದರ್ಯವೇ ಮಾಸಿ ಹೋದಂತಾಗಿದೆ.

ಪ್ರವಾಸಿಗರಿಗೆ ತಂಗಿ ಪರಿಸರ ವೀಕ್ಷಿಸಬೇಕಿದ್ದ ತಂಪುಮನೆ ಈಗ ಮಸುಕಾಗಿದೆ. ಒಳಕೋಣೆಯಲ್ಲಿ ಮೇಲ್ಛಾವಣಿ ಶಿಥಿಲಾವಸ್ಥೆ ತಲುಪಿವೆ. ಕಳೆದ ವರ್ಷ ಮೇಲ್ಛಾವಣಿ ದುರಸ್ತಿ ಮಾಡಿದ್ದರೂ ಹಳೆಯ ಮರಮಟ್ಟುಗಳನ್ನೇ ಉಳಿಸಿರುವುದರಿಂದ ಮತ್ತೆ ಶಿಥಿಲಗೊಂಡಿದೆ. ಅರಣ್ಯ ಇಲಾಖೆಗೆ ಆದಾಯ ವರಮಾನವನ್ನೂ ತಂದುಕೊಡುತ್ತಿದ್ದ ಈ ಅಥಿತಿಗೃಹ ಶಿಥಿಲಾವಸ್ಥೆಯಲ್ಲಿ ಇರುವುದರಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾತ್ರ ಸೀಮಿತವಾಗಿದೆ.

ಈ ತಂಪು ಮನೆಯ ಮೇಲೇರಿ ನಿಂತರೆ ಚಾರ್ಮಾಡಿ ಘಾಟಿಯ ವಿಹಂಗಮ ನೋಟ, ಕಣಿವೆಯ ದೃಶ್ಯ ಸಂಪೂರ್ಣ ವೀಕ್ಷಿಸಲು ಸಾಧ್ಯವಾಗುತ್ತದೆ. ಇಂತಹ ಪ್ರದೇಶದ ‘ಮಲಯ ಮಾರುತ’ ಅತಿಥಿಗೃಹವನ್ನು ನವೀಕರಿಸಿ ನಿರ್ವಹಣೆ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯ.

ಹಸಿರ ಬೆಟ್ಟದ ನಡುವೆ ಮಸುಕಾಗಿ ಕಾಣುತ್ತಿರುವ ದೃಶ್ಯ
ಪ್ರಾಂಗಣದ ಮೇಲ್ಛಾವಣಿಯ ಹಾಳಾಗಿರುವುದು
ಮಲಯ ಮಾರುತದ ಒಳ ಕೋಣೆಯ ಮೇಲ್ಛಾವಣಿಯಲ್ಲಿ ಶಿಥಿಲವಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.