ಆಲ್ದೂರು: ಆವತಿ ಹೋಬಳಿ ಮಲ್ಲಂದೂರು ಬ್ಯಾರವಳ್ಳಿ ಪಂಚಾಯಿತಿ ಗ್ರಾಮದ ರಾಧಮ್ಮ, ದಿ.ಮುನಿಸ್ವಾಮಿ ದಂಪತಿಯ ಪುತ್ರ ಎಂ.ಎಂ. ಕುಮಾರ್ ಅವರು ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಉದ್ಘೋಷಕರಾಗಿ ಕಾರ್ಯನಿರ್ವಹಿಸುವ ಮೂಲಕ ಮನೆ ಮಾತಾಗಿದ್ದಾರೆ.
ಎಂ.ಎಂ.ಕುಮಾರ್ ಅವರು, 1987ರಲ್ಲಿ ತಂದೆ ಮುನಿಸ್ವಾಮಿ ಅವರು ಶಬರಿಮಲೆಗೆ ಹೊರಟಾಗ ಅವರೊಂದಿಗೆ ಯಾತ್ರೆಗೆ ಹೋಗಬೇಕೆನ್ನುವ ಹಂಬಲವಿತ್ತು, ಆದರೆ ಬಡತನದಿಂದ ಅದು ಸಾಧ್ಯವಾಗಿರಲಿಲ್ಲ. 1993ರಲ್ಲಿ ಚಿಕ್ಕಮಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪಾಲಕ್ಕಾಡ್ ಮೂಲದ ಗೋಪಾಲ್ ಎಂಬುವವರು ಕುಮಾರ್ ಅವರನ್ನು ಶಬರಿಮಲೆ ಯಾತ್ರೆಗೆ ಕರೆದೊಯ್ದರು.
‘ಪ್ರತಿ ವರ್ಷ ಸಂಕ್ರಮಣ ಸಂದರ್ಭದಲ್ಲಿ ಸುಮಾರು ಎರಡು ತಿಂಗಳು ಉದ್ಘೋಷಕನಾಗಿ ಅಲ್ಲಿ ಕೆಲಸ ಮಾಡುತ್ತಿದ್ದೇನೆ. 2000ರಲ್ಲಿ ಪಂಪಾ ಕನ್ನಿಮೂಲ ಗಣಪತಿ ಸನ್ನಿಧಾನದಲ್ಲಿ ಉದ್ಘೋಷಕನಾಗಿ ಕಾರ್ಯ ಆರಂಭಿಸಿ, 19 ವರ್ಷ ಸೇವೆ ಸಲ್ಲಿಸಿದೆ. ನಂತರ ನೀಲಕ್ಕಲ್ ಶಿವನ ದೇವಸ್ಥಾನದಲ್ಲಿ 4ವರ್ಷ ಸೇವೆ ಸಲ್ಲಿಸಲು ಅವಕಾಶ ದೊರೆಯಿತು. ಕನ್ನಡ, ಮಲಯಾಳಂ, ತಮಿಳು, ತೆಲುಗು, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಘೋಷಣೆ ಮಾಡುತ್ತಿದ್ದು, ಆರಂಭದ 8 ವರ್ಷ ಉಚಿತವಾಗಿ ಸೇವೆ ಸಲ್ಲಿಸಿದೆ’ ಎನ್ನುತ್ತಾರೆ ಅವರು.
‘2023–24ನೇ ಸಾಲಿನಲ್ಲಿ ಶಬರಿಮಲೆ ಅಯ್ಯಪ್ಪನ ಸನ್ನಿಧಾನದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದ್ದು, ಈಗ ದಿನಕ್ಕೆ ₹750 ಸಂಭಾವನೆ ಪಡೆಯುತ್ತಿದ್ದೇನೆ. ಸಂಭಾವನೆಯ ಹಣದ ಅವಶ್ಯಕತೆ ಇರುವ ಮಾಲಾಧಾರಿಗಳಿಗೆ ಮತ್ತು ಉಳಿದ ಹಣವನ್ನು ನಮ್ಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ನಡೆಯುವ ಮಕ್ಕಳ ಕಾರ್ಯಕ್ರಮಗಳಿಗೆ, ಅನ್ನದಾನಕ್ಕೆ ಬಳಕೆ ಮಾಡುತ್ತಿದ್ದೇನೆ’ ಎಂದು 50 ವರ್ಷ ವಯಸ್ಸಿನ ಅವರು ವಹೇಳುತ್ತಾರೆ.
ಎಂ.ಎಂ.ಕುಮಾರ್ ಆರಂಭದಲ್ಲಿ ಹೋಟೆಲ್, ನಂತರ ತನ್ನ ತಂದೆ ನಿರ್ವಹಿಸುತ್ತಿದ್ದ ಕಾಫಿ ತೋಟಗಳಿಗೆ ಕೂಲಿ ಕಾರ್ಮಿಕರನ್ನು ಒದಗಿಸುವುದು, ಮೇಸ್ತ್ರಿ ಕೆಲಸ, ಆಟೊ ನಿರ್ವಹಣೆ ಹೀಗೆ ಹಲವು ವೃತ್ತಿಯನ್ನು ನಿಭಾಯಿಸಿದ್ದಾರೆ. ಪತ್ನಿ ಜಯಂತಿ ಕುಮಾರ್ ಬ್ಯಾರವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು, 2020ರಿಂದ ಕುಮಾರ್ ಅವರು ಕೂಡ ಅದೇ ಪಂಚಾಯಿತಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕುಮಾರ್ ಅವರು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬ್ಯಾರವಳ್ಳಿ ಪಂಚಾಯಿತಿ ಪಿಡಿಒ ಎನ್ಎಸ್ ಜಗನ್ನಾಥ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.