ADVERTISEMENT

ಮುಳ್ಳಯ್ಯನಗಿರಿ ಪ್ರವಾಸಿಗರಿಗೆ ಆನ್‌ಲೈನ್‌ ನೋಂದಣಿ ಕಡ್ಡಾಯ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 14:26 IST
Last Updated 5 ಜುಲೈ 2024, 14:26 IST
ಗೌಸ್ ಮೊಹಿಯುದ್ದೀನ್‌
ಗೌಸ್ ಮೊಹಿಯುದ್ದೀನ್‌   

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಪ್ರದೇಶದ ತಾಣಗಳಿಗೆ ಬರುವ ಪ್ರವಾಸಿಗರಿಗೆ ಕಡ್ಡಾಯ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಜಿಲ್ಲಾಡಳಿತದ ಏಕಪಕ್ಷಿಯ ನಿರ್ಧಾರ. ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ‘ಸಂವಿಧಾನ ಉಳಿವಿಗಾಗಿ ಕರ್ನಾಟಕ’ ಸಮಿತಿ ರಾಜ್ಯ ಸಂಚಾಲಕ ಗೌಸ್‌ ಮೊಹಿಯುದ್ದೀನ್ ಒತ್ತಾಯಿಸಿದರು.

ಜಿಲ್ಲೆಯ ಗಿರಿಭಾಗದಲ್ಲಿ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಸೀತಾಳಯ್ಯನಗಿರಿ, ಬಿಸಗ್ನಿಮಠ, ಗಾಳಿಕೆರೆ, ಕೆಂಚರಾಯಸ್ವಾಮಿ ದೇವಾಲಯ ಸಹಿತ ಹಲವು ಧಾರ್ಮಿಕ ಸ್ಥಳಗಳಿವೆ. ರಾಜ್ಯ ಸೇರಿದಂತೆ ವಿವಿಧೆಡೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಈ ಪೈಕಿ ಭಾಷೆ ಅರಿಯದವರು, ಅನಕ್ಷರಸ್ಥರು ಇರುತ್ತಾರೆ. ಈ ಬಗ್ಗೆ ಸ್ಥಳೀಯ ಸಂಘ– ಸಂಸ್ಥೆಗಳ ಮುಖಂಡರ ಯಾವುದೇ ಅಭಿಪ್ರಾಯ, ಸಲಹೆ ಸಂಗ್ರಹಿಸದೆ ಆನ್‌ಲೈನ್ ನೋಂದಣಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯ ತಾಣಗಳಿಗೆ ಬರುವ ಪ್ರವಾಸಿಗರಿಂದ ಮುಜರಾಯಿ ಇಲಾಖೆ ದೇವಾಲಯಗಳಿಂದಲೂ ಸಾಕಷ್ಟು ಹಣ ಸಂಗ್ರಹವಾಗುತ್ತಿದೆ. ಅದರ ಸದ್ವಿವಿನಿಯೋಗದಿಂದ ಬರುವ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ ಸಹಿತ ಮೂಲಸೌಕರ್ಯ ಕಲ್ಪಿಸುವುದು ಜಿಲ್ಲಾಡಳಿತದ ಹೊಣೆ. ಬದಲಾಗಿ ಬರುವ ಪ್ರವಾಸಿಗರನ್ನು ಕಡ್ಡಾಯ ಆನ್‌ಲೈನ್ ಮೂಲಕ ಮಿತಿಗೊಳಿಸಿ ನಿರ್ಬಂಧ ಹೇರುವುದು ಸರಿಯಲ್ಲ. ಈ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು. ರಾಜಕೀಯ ಪಕ್ಷಗಳು, ಸಂಘ–ಸಂಸ್ಥೆಗಳ ಮುಖಂಡರ ಸಭೆ ಕರೆದು ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಲಾಡ್ಜ್‌, ರೆಸ್ಟೋರೆಂಟ್, ಹೋಟೆಲ್‌, ಹೊಂಸ್ಟೇಗಳಲ್ಲಿ ಹಣ ಸಂಗ್ರಹಿಸಲಾಗುತ್ತಿದೆ. ಅದನ್ನು ಅಗತ್ಯ ಸೌಕರ್ಯಕ್ಕೆ ಬಳಸಿಕೊಳ್ಳಬೇಕು. ಜಿಲ್ಲಾಡಳಿತದ ನಿರ್ಧಾರದಿಂದ ಸ್ಥಳೀಯರಿಗೂ ಆನ್‌ಲೈನ್‌ ನೊಂದಣಿ ಎಂಬ ಗೊಂದಲವಿದ್ದು, ಇದರಿಂದ ವಿನಾಯಿತಿ ಕಲ್ಪಿಸಬೇಕು ಎಂದು ಕೋರಿದರು.

‌ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ, ಪುಟ್ಟಸ್ವಾಮಿ ಹಾದಿಹಳ್ಳಿ, ಕಬ್ಬಿಕೆರೆ ಮೋಹನಕುಮಾರ್, ಹಸನಬ್ಬ, ಗಣೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.