ADVERTISEMENT

ಮಾಸ್ಟರ್‌ ಹಿರಣ್ಣಯ್ಯ ಕಾಫಿನಾಡಿನ ಬೇಸುಗೆ

​ಪ್ರಜಾವಾಣಿ ವಾರ್ತೆ
Published 2 ಮೇ 2019, 15:39 IST
Last Updated 2 ಮೇ 2019, 15:39 IST
ಹಿರೇಮಗಳೂರಿನ ಕೋದಂಡರಾಮಚಂದ್ರಸ್ವಾಮಿ ದೇಗುಲ ಆವರಣದಲ್ಲಿ ಹಿರೇಮಗಳೂರು ಕಣ್ಣನ್‌ ಅವರು ಮಾಸ್ಟರ್‌ ಹಿರಣ್ಣಯ್ಯ ಅವರನ್ನು ಅಭಿನಂದಿಸಿದ್ದರು.
ಹಿರೇಮಗಳೂರಿನ ಕೋದಂಡರಾಮಚಂದ್ರಸ್ವಾಮಿ ದೇಗುಲ ಆವರಣದಲ್ಲಿ ಹಿರೇಮಗಳೂರು ಕಣ್ಣನ್‌ ಅವರು ಮಾಸ್ಟರ್‌ ಹಿರಣ್ಣಯ್ಯ ಅವರನ್ನು ಅಭಿನಂದಿಸಿದ್ದರು.   

ಚಿಕ್ಕಮಗಳೂರು: ರಂಗಕರ್ಮಿ ಮಾಸ್ಟರ್‌ ಹಿರಣ್ಣಯ್ಯ ಅವರಿಗೂ ಕಾಫಿನಾಡಿಗೂ ಅವಿನಾಭಾವ ನಂಟು ಇತ್ತು, ಅವರ ತಾಯಿ ತವರೂರು ಸಖರಾಯಪಟ್ಟಣ. ಜಿಲ್ಲೆಯಲ್ಲಿ ನಾಟಕ ಪ್ರದರ್ಶನ, ಕಲಾವಿದರ ಒಡನಾಟದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.

ಸಖರಾಯಪಟ್ಟಣದ ನಿವೃತ್ತ ಉಪನ್ಯಾಸಕ ಚಂದ್ರಮೌಳಿ, ಹಾರ್ಮೋನಿಯಂ ಮಾಸ್ಟರ್‌ ಶಾಮಣ್ಣ, ಹಿರೇಮಗಳೂರಿನ ಕಣ್ಣನ್‌, ಚಿಕ್ಕಮಗಳೂರಿನ ಕಲಾಸೇವಾಸಂಘದ ಮೋಹನ್‌ ಮೊದಲಾದವರ ಒಡನಾಡಿಯಾಗಿದ್ದರು. ‘ಲಂಚಾವತಾರ’, ‘ಭ್ರಷ್ಟಾಚಾರ’, ‘ನಡುಬೀದಿ ನಾರಾಯಣ’, ‘ಮಕ್ಮಲ್‌ ಟೋಪಿ’ ಮೊದಲಾದ ನಾಟಕಗಳು ಇಲ್ಲಿ ಪ್ರದರ್ಶನವಾಗಿವೆ. ಹಾಸ್ಯದ ಹೊನಲಿನಲ್ಲಿ ಜನರನ್ನು ರಂಜಿಸಿದ್ದಾರೆ.

ಒಡನಾಡಿ ಚಂದ್ರಮೌಳಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಸಖರಾಯಪಟ್ಟಣದ ಹಾರ್ಮೋನಿಯಂ ಮಾಸ್ಟರ್‌ ಮತ್ತು ಕಲಾವಿದ ಶಾಮಣ್ಣ (92) ಅವರು ಮಾಸ್ಟರ್‌ ಹಿರಣ್ಣಯ್ಯ ಅವರ ಕಂಪನಿಯಲ್ಲಿ ಇದ್ದರು. ಹಾರ್ಮೋನಿಯಂ ನುಡಿಸುವುದಷ್ಟೇ ಅಲ್ಲ, ಅವರು ಪಾತ್ರಗಳನ್ನು ಮಾಡಿದ್ದಾರೆ. ಬಹಳಷ್ಟು ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಿದರು’ ಎಂದು ನೆನಪಿಸಿಕೊಂಡರು.

ADVERTISEMENT

‘ರಾಜು ಸಖರಾಯಪಟ್ಟಣ ಎಂದೇ ಖ್ಯಾತರಾಗಿದ್ದ ಕಲಾವಿದ ಬಸವರಾಜು ಅವರನ್ನೂ ಬೆಳೆಸಿದ್ದೂ ಮಾಸ್ಟರ್‌ ಹಿರಣ್ಣಯ್ಯ ಅವರೇ. ರಾಜು ಅವರು ಕೆಲವರ್ಷಗಳ ಹಿಂದೆ ತೀರಿಕೊಂಡರು’ ಎಂದರು.

‘ಚಿಕ್ಕಮಗಳೂರಿನಲ್ಲಿ ಸುಮಾರು 18ವರ್ಷಗಳ ಹಿಂದೆ ಕಲಾಮಂದಿರದಲ್ಲಿ ‘ಭ್ರಷ್ಟಾಚಾರ’ ನಾಟಕವಾಡಿದ್ದರು. ಸಖರಾಯಪಟ್ಟಣದಲ್ಲಿ 2004ರಲ್ಲಿ ‘ಲಂಚಾವತಾರ’ ನಾಟಕ ಪ್ರದರ್ಶಿಸಿದ್ದರು. ಕಡೂರು ತಾಲ್ಲೂಕಿನ ಚಟ್ನಳ್ಳಿ, ಬೀರೂರು ಇತರ ಕಡೆಗಳಲ್ಲಿಯೂ ನಾಟಕ ಪ್ರದರ್ಶಿಸಿದ್ದರು. ಹಾಸ್ಯದ ಹೊನಲಿನ ಮೂಲಕ ಎಚ್ಚರಿಕೆಯ ಸಂದೇಶವನ್ನು ನೀಡುತ್ತಿದ್ದರು’ ಎಂದು ಸ್ಮರಿಸಿಕೊಂಡರು.

‘ಸಖರಾಯಪಟ್ಟಣಕ್ಕೆ ಬಂದಾಗ ತಪ್ಪದೇ ನಮ್ಮ ಮನೆಗೆ ಬರುತ್ತಿದ್ದರು. ಆತ್ಮೀಯರಾಗಿದ್ದರು. ಆಗ್ಗಾಗ್ಗೆ ಶುಭಾಶಯ ಪತ್ರಗಳನ್ನು ಕಳಿಸುತ್ತಿದ್ದರು’ ಎಂದು ನೆನಪಿಸಿಕೊಂಡರು.

‘ಶ್ರೀಕೋದಂಡರಾಮಚಂದ್ರಸ್ವಾಮಿ ನೋಡಲು ಬನ್ನಿ ಎಂದು ಮಾಸ್ಟರ್‌ ಹಿರಣ್ಣಯ್ಯ ಅವರಿಗೆ ಪತ್ರಿಸಿದ್ದೆ. 2015ರಲ್ಲಿ ಪುರಂದರ ಜಯಂತ್ಯುತ್ಸವಕ್ಕೆ ಬಂದಿದ್ದರು. ಕುವೆಂಪು ಅವರ ಸರಸ್ವತಿ ಕುರಿತ ಶೃಂಗೇರಿ ಸ್ತೋತ್ರವನ್ನು ಬಹುವಾಗಿ ಮಚ್ಚಿಕೊಂಡಿದ್ದರು’ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ನೆನಪಿಸಿಕೊಂಡರು.

**

‘ಮಾಸ್ಟರ್‌ ಹಿರಣ್ಣಯ್ಯ ತಾಯಿ ತವರೂರು ಸಖರಾಯಪಟ್ಟಣ’
‘ಮಾಸ್ಟರ್‌ ಹಿರಣ್ಣಯ್ಯ ತಾಯಿ ಶಾರದಮ್ಮ ಅವರ ತವರೂರು ಸಖರಾಯಪಟ್ಟಣ. ಹೀಗಾಗಿ, ಅವರಿಗೆ ಈ ಊರಿನ ಸೆಳೆತ ಆಪಾರ ಇತ್ತು’ ಎಂದು ನಿವೃತ್ತ ಉಪನ್ಯಾಸಕ ಚಂದ್ರಮೌಳಿ ತಿಳಿಸಿದರು.

‘ಶಾರದಮ್ಮ ಅವರು ಸಖರಾಯಪಟ್ಟಣದ ಶಾನುಭೋಗರ ಪುತ್ರಿ. ಗುಬ್ಬಿ ವೀರಣ್ಣ ನಾಟಕದ ಕಂಪನಿಯವರು ಕಡೂರಿನಲ್ಲಿ ಕ್ಯಾಂಪ್‌ ಹಾಕಿದ್ದರು. ಕ್ಯಾಂಪಿನಲ್ಲಿ ಕಲಾವಿದ ಕೆ.ಹಿರಣ್ಣಯ್ಯ (ಮಾಸ್ಟರ್‌ ಹಿರಣ್ಣಯ್ಯ ಅವರ ತಂದೆ) ಇದ್ದರು. ಆ ಸಂದರ್ಭದಲ್ಲಿ ವಿವಾಹ ವಿಚಾರ ಪ್ರಸ್ತಾಪವಾಗಿ ಶಾರದಮ್ಮ ಅವರೊಂದಿಗೆ ಮದುವೆಯಾಯಿತು. ಆ ಕಾಲದಲ್ಲಿ ನಾಟಕದವರಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದರು. ಶಾನುಭೋಗರು ಕಲಾವಿದನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದ್ದರು’ ಎಂದರು.

‘ಸಖರಾಯಪಟ್ಟಣದ ಗ್ರಾಮದೇವತೆ ಅಂತರಘಟ್ಟಮ್ಮ ದೇಗುಲದ ಆವರಣದಲ್ಲಿ ಕೆ.ಹಿರಣ್ಣಯ್ಯ ಅವರು ‘ದೇವದಾಸಿ’ ನಾಟಕ ರಚಿಸಿದ್ದರು. ಆ ನಾಟಕ ತುಂಬಾ ಪ್ರಸಿದ್ಧಿಯಾಗಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.