ADVERTISEMENT

ಎಂ.ಜಿ.ರಸ್ತೆ: ನ.1ರಿಂದ ವಾಹನಗಳ ನಿಲುಗಡೆಗೆ ಶುಲ್ಕ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 16:10 IST
Last Updated 27 ಅಕ್ಟೋಬರ್ 2021, 16:10 IST
ಚಿಕ್ಕಮಗಳೂರಿನ ನಗರಸಭೆಯಲ್ಲಿ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಆಯುಕ್ತ ಬಸವರಾಜ್ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್, ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಇದ್ದರು.
ಚಿಕ್ಕಮಗಳೂರಿನ ನಗರಸಭೆಯಲ್ಲಿ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಆಯುಕ್ತ ಬಸವರಾಜ್ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್, ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಇದ್ದರು.   

ಚಿಕ್ಕಮಗಳೂರು: ನಗರದ ಎಂ.ಜಿ.ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ನವೆಂಬರ್ 1ರಿಂದ ಶುಲ್ಕ ಪಡೆಯಲಾಗುವುದು ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಹೇಳಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಾಹನಗಳ ಶುಲ್ಕ ವಸೂಲು ಟೆಂಡರ್‌ ಪ್ರಕ್ರಿಯೆಯಲ್ಲಿ ಮಾತನಾಡಿದರು.

ದ್ವಿಚಕ್ರ ವಾಹನಗಳು, ಸರ್ಕಾರಿ ವಾಹನಗಳು, ಶಾಲಾವಾಹನಗಳ ನಿಲುಗಡೆಗೆ ಶುಲ್ಕ ಪಡೆಯುವುದಿಲ್ಲ. ಬೇರೆ ಎಲ್ಲಾ ವಾಹನಗಳಿಗೆ ಪ್ರತಿ ಗಂಟೆಗೆ ₹10, ಎರಡು ಗಂಟೆಗೂ ಹೆಚ್ಚು ಕಾಲ ನಿಲುಗಡೆ ಮಾಡಿದಲ್ಲಿ, ಹೆಚ್ಚುವರಿಯಾಗಿ ₹5 ಪಾವತಿಸಬೇಕು. ಸ್ಥಳೀಯರು ₹1500 ಪಾವತಿಸಿ, ಮಾಸಿಕ ಪಾಸ್ ಪಡೆಯಬಹುದು ಎಂದರು.

ADVERTISEMENT

ಎಂ.ಜಿ.ರಸ್ತೆಯಲ್ಲಿನ ಸಾಧಕ–ಬಾದಕಗಳನ್ನು ಗಮನಿಸಿ, ನಂತರದ ದಿನಗಳಲ್ಲಿ ಮಾರ್ಕೆಟ್‌ ರಸ್ತೆ, ಐ.ಜಿ.ರಸ್ತೆ, ವಿಜಯಪುರ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ಶುಲ್ಕ ಪಡೆಯಲು ಕ್ರಮವಹಿಸಲಾಗುವುದು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್‌ ಮಾತನಾಡಿ, ‘ಪೇ ಅಂಡ್ ಪಾರ್ಕ್ ವ್ಯವಸ್ಥೆಯಿಂದ ಎಂ.ಜಿ.ರಸ್ತೆಯಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗುತ್ತದೆ. ವಾಹನ ಸವಾರರ ಮನವೊಲಿಸಿ, ಶುಲ್ಕ ಪಡೆಯಬೇಕು. ಅನಗತ್ಯ ವಾಗ್ವಾದಗಳಿಗೆ ಎಡೆ ಮಾಡಿಕೊಡಬಾರದು ಎಂದರು.

ನಗರಸಭೆ ಕಂದಾಯಾಧಿಕಾರಿ ಬಸವರಾಜ್, ಎಂಜಿನಿಯರ್ ಚಂದನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.