ADVERTISEMENT

ಚಿಕ್ಕಮಗಳೂರು: ಕಿರುವಿಮಾನ ನಿಲ್ದಾಣ ಯೋಜನೆ ನನೆಗುದಿಗೆ

ಆರಂಭವೇ ಆಗದ ಭೂ ಸ್ವಾಧೀನ ಪ್ರಕ್ರಿಯೆ: ಅನುದಾನಕ್ಕೆ ಕಾದಿರುವ ಅಧಿಕಾರಿಗಳು

ವಿಜಯಕುಮಾರ್ ಎಸ್.ಕೆ.
Published 13 ಜೂನ್ 2024, 6:26 IST
Last Updated 13 ಜೂನ್ 2024, 6:26 IST
ಚಿಕ್ಕಮಗಳೂರು ಹೊರ ವಲಯದಲ್ಲಿ ಕಿರು ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಿರುವ ಜಾಗ
ಚಿಕ್ಕಮಗಳೂರು ಹೊರ ವಲಯದಲ್ಲಿ ಕಿರು ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಿರುವ ಜಾಗ   

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ವಿಮಾನ ಹಾರಾಟದ ಕನಸು ಸದ್ಯಕ್ಕೆ ನನಸಾಗುವ ಲಕ್ಷಣ ಕಾಣಿಸುತ್ತಿಲ್ಲ. ಅಗತ್ಯ ಇರುವ ಭೂಸ್ವಾಧೀನಕ್ಕೆ ಪ್ರಕ್ರಿಯೆಯೇ ಇನ್ನೂ ಆರಂಭವಾಗದೆ ಯೋಜನೆ ನನೆಗುದಿಗೆ ಬಿದ್ದಿದೆ.

2023–24ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಈ ಯೋಜನೆಯನ್ನು ಘೋಷಣೆ ಮಾಡಿದೆ. ವಿಮಾನ ನಿಲ್ದಾಣಕ್ಕೆ ಜಿಲ್ಲಾಡಳಿತ 120 ಎಕರೆ ಜಾಗವನ್ನೂ ಮೀಸಲಿರಿಸಿದ್ದು, ಹೆಚ್ಚುವರಿಯಾಗಿ ಅಗತ್ಯ ಇರುವ 17 ಎಕರೆ ಮಾತ್ರ ಸ್ವಾಧೀನ ಆಗಬೇಕಿದೆ. 

2023ರ ಸೆಪ್ಟೆಂಬರ್‌ನಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ(ಕೆಎಸ್‌ಐಐಡಿಸಿ) ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ರವಿ ಅವರು, ‘ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡರೆ 15 ತಿಂಗಳಲ್ಲಿ ಚಿಕ್ಕಮಗಳೂರಿನಲ್ಲಿ ವಿಮಾನ ಇಳಿಯಲಿವೆ’ ಎಂದು ತಿಳಿಸಿದ್ದರು.

ADVERTISEMENT

ಅಂಬಳೆ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ 120 ಎಕರೆ ಜಾಗದಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶ ಇದೆ. ಅಕ್ಕಪಕ್ಕದ ರೈತರ ಮನವೊಲಿಸಿ ಇನ್ನೂ 17 ಎಕರೆ ಜಾಗ ಸ್ವಾಧೀನ ಮಾಡಿಕೊಳ್ಳಬೇಕಿದೆ. ನೇರವಾಗಿ ರೈತರಿಂದ ಖರೀದಿ ಮಾಡಲು ಅಧಿಕಾರಿಗಳು ಪ್ರಯತ್ನಿಸಿದ್ದು, ಅದು ಸಫಲ ಆಗಿಲ್ಲ. ಕೆಲ ರೈತರು ಸಮ್ಮತಿಸಿದರೆ, ಹಲವರು ಒಪ್ಪಿಗೆ ಸೂಚಿಸುತ್ತಿಲ್ಲ. ಇನ್ನೂ ಕೆಲವರು ಹೆಚ್ಚಿನ ದರಕ್ಕೆ ಬೇಡಿಕೆ ಇಡುತ್ತಿದ್ದಾರೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಮೂಲಕವೇ ಜಾಗ ಪಡೆದುಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದ್ದು, ಅಗತ್ಯ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಈ ಹಿಂದೆ 19 ಎಕರೆ ಬೇಕಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ 17 ಎಕರೆ 1 ಗುಂಟೆ ಜಾಗ ಸಾಕು ಎಂದು ತೀರ್ಮಾನಿಸಲಾಗಿದೆ. ಒಟ್ಟಾರೆ ₹24 ಕೋಟಿ ಬೇಕಾಗಲಿದೆ ಎಂದು ಉಪವಿಭಾಗಾಧಿಕಾರಿ ಅಂದಾಜಿಸಿದ್ದಾರೆ. ಕೆಎಸ್‌ಐಐಡಿಸಿ ಈಗಾಗಲೇ ₹7 ಕೋಟಿ ನೀಡಿದ್ದು, ಇನ್ನೂ ₹17 ಕೋಟಿ ಅನುದಾನ ಬೇಕಾಗಲಿದೆ. ಅಷ್ಟು ಅನುದಾನಕ್ಕೆ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯನ್ನು ಕೋರಲಾಗಿದೆ. ಅನುದಾನ ದೊರೆತ ಕೂಡಲೇ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಜಿಲ್ಲಾಡಳಿತದ ಅಧಿಕಾರಿಗಳು ಹೇಳುತ್ತಾರೆ.

ಕಿರು ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ ಹೆಲಿಪೋರ್ಟ್‌ ನಿರ್ಮಾಣಕ್ಕೂ ಯೋಜನೆ ಸಿದ್ಧವಿದೆ. ಅದಕ್ಕೆ 5 ಎಕರೆ ಜಾಗ ಸಾಕಾಗಲಿದ್ದು, ಪ್ರಯಾಣಿಕರಿಗೂ ಅನುಕೂಲ ಆಗಲಿದೆ. ಎರಡೂ ಒಂದೆಡೆಯೇ ಇರುವ ಮೊದಲ ಜಿಲ್ಲೆ ಚಿಕ್ಕಮಗಳೂರು ಎಂಬ ಹೆಗ್ಗಳಿಕೆಯೂ ಆಗಲಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ಅನುದಾನ ಬಿಡುಗಡೆ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನು ಸಾಕಷ್ಟು ಕಾಲಾವಕಾಶ ಬೇಕಾಗಲಿದೆ. ಬಳಿಕ ವಿಮಾನ ನಿಲ್ದಾಣ ಕಾಮಗಾರಿಗೆ ಕಾರ್ಯಸಾಧ್ಯತಾ ವರದಿ ಮತ್ತು ವಿಸ್ತೃತ ಯೋಜನಾ ವರದಿಯನ್ನು(ಡಿಪಿಆರ್‌) ಕೆಎಸ್‌ಐಐಡಿಸಿ ಸಿದ್ಧಪಡಿಸಲಿದೆ. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಚಿಕ್ಕಮಗಳೂರಿನಲ್ಲಿ ವಿಮಾನ ಇಳಿಯಲು ಇನ್ನು ಹಲವು ವರ್ಷಗಳೇ ಬೇಕಾಗಲಿದೆ. ಎಲ್ಲಾ ಪ್ರಕ್ರಿಯೆಗಳೂ ಆದಷ್ಟು ಬೇಗ ಪೂರ್ಣಗೊಳಿಸಬೇಕು. ಚಿಕ್ಕಮಗಳೂರಿನಲ್ಲಿ ವಿಮಾನ ಇಳಿಯುವಂತಾದರೆ ಪ್ರವಾಸೋದ್ಯಮಕ್ಕೆ ಇನ್ನಷ್ಟು ಅನುಕೂಲ ಆಗಲಿದೆ ಎನ್ನುತ್ತಾರೆ ಸ್ಥಳೀಯರು. 

12 ಆಸನ ಸಾಮರ್ಥ್ಯದ ವಿಮಾನ
ಕಿರು ವಿಮಾಣ ನಿಲ್ದಾಣದಲ್ಲಿ 12 ಆಸನ ಸಾಮರ್ಥ್ಯದ ಸಣ್ಣ ವಿಮಾನಗಳನ್ನು ಇಳಿಸಲು ಮಾತ್ರ ಸಾಧ್ಯವಾಗಲಿದೆ. ಲಭ್ಯವಾಗುವ 137 ಎಕರೆ ಜಾಗದಲ್ಲಿ 1200 ಮೀಟರ್ ಉದ್ದದ ರನ್‌ ವೇ ನಿರ್ಮಿಸಲಷ್ಟೇ ಸಾಧ್ಯ. 20 ಆಸನ ಅಥವಾ ಅದಕ್ಕಿಂತ ದೊಡ್ಡ ವಿಮಾನ ಇಳಿಸಲು ಕನಿಷ್ಠ 400 ಎಕರೆ ಜಾಗ ಬೇಕಾಗಲಿದೆ. ಆದ್ದರಿಂದ 12 ಆಸನ ಸಾಮರ್ಥ್ಯದ ವಿಮಾನ ಇಳಿಸಲು ಸಾಧ್ಯವಾಗುವ ರನ್‌ವೇ ನಿರ್ಮಿಸಲಾಗುವುದು ಅಧಿಕಾರಿಗಳು ಹೇಳುತ್ತಾರೆ. ದೊಡ್ಡ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ವೇಳಾಪಟ್ಟಿಯಂತೆ ವಿಮಾನಗಳು ಕಾರ್ಯಾಚರಣೆ ಮಾಡುವುದಿಲ್ಲ. 12 ಆಸನ ಸಾಮರ್ಥ್ಯದ ವಿಮಾನ ಇದ್ದವರು ಅಥವಾ ಬಾಡಿಗೆಗೆ ಪಡೆದವರು ವಿಮಾನ ಇಳಿಸಬಹುದು. ವಿಮಾನ ಇಳಿಸಿ ನಿಲ್ಲಿಸಲು ಬಾಡಿಗೆ ನೀಡಬೇಕಾಗುತ್ತದೆ. ಜಿಲ್ಲೆಯ ಪ್ರವಾಸೋದ್ಯಮ ಮತ್ತು ಕೈಗಾರಿಕೆಗೆ ಅನುಕೂಲ ಆಗಲಿದೆ ಎಂದು ಅವರು ವಿವರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.