ADVERTISEMENT

ಆಲ್ದೂರು | ಮಳೆ ಹಾನಿ ಪ್ರದೇಶಕ್ಕೆ ಭೇಟಿ: ಸಂತ್ರಸ್ತರ ಅಹವಾಲು ಆಲಿಸಿದ ಜಾರ್ಜ್‌

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 13:23 IST
Last Updated 28 ಜುಲೈ 2024, 13:23 IST
<div class="paragraphs"><p>ಅರೇನೂರು ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭಾನುವಾರ ಸಚಿವ ಕೆ.ಜೆ ಜಾರ್ಜ್ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು </p></div>

ಅರೇನೂರು ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭಾನುವಾರ ಸಚಿವ ಕೆ.ಜೆ ಜಾರ್ಜ್ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು

   

ಆಲ್ದೂರು: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಕೆ.ಜೆ ಜಾರ್ಜ್‌ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿದರು.

ಆಲ್ದೂರು ಹೋಬಳಿ ವ್ಯಾಪ್ತಿಯ ಚಂಡಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಕುಸಿದಿದ್ದನ್ನು, ಶಿಥಿಲಾವಸ್ಥೆ ತಲುಪಿರುವ ಸರ್ಕಾರಿ ಪ್ರೌಢಶಾಲೆಯ ಕಟ್ಟಡವನ್ನು ಸಚಿವರು ಪರಿಶೀಲಿಸಿದರು. ವಗರ್ ರಸ್ತೆಯ ರಾಮಕೃಷ್ಣ ಪಳನಿ ಎಂಬುವರ ಮನೆಗೆ ಭೇಟಿ ನೀಡಿದರು.

ADVERTISEMENT

ಆವತಿ ಹೋಬಳಿ ಬಸರವಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಹಿಂದೆ ಮಳೆ ಹಾನಿಯಿಂದ ಸಂತ್ರಸ್ತರಾಗಿ ಇನ್ನೂ ಪುನರ್ವಸತಿ ದೊರೆಯದೆ ಈ ಬಾರಿಯೂ ಮಳೆಯ ಅಬ್ಬರಕ್ಕೆ ತತ್ತರಿಸಿ ಅರೇನೂರು ಸರ್ಕಾರಿ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಆರು ಸಂತ್ರಸ್ತ ಕುಟುಂಬಗಳ ಸದಸ್ಯರ ಜತೆಗೆ ಸಚಿವರು ಚರ್ಚೆ ನಡೆಸಿದರು. ಸಾಮಾಜಿಕ ಕಾರ್ಯಕರ್ತ ಅರೇನೂರು ಸುಪ್ರೀತ್ ಸಂತ್ರಸ್ತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು.

‘ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಈಗಾಗಲೇ ಜಾಗವನ್ನು ಗುರುತಿಸಲಾಗಿದ್ದು, ಅರಣ್ಯ ಇಲಾಖೆಗೆ ಜಮೀನಿನ ಮಾಹಿತಿಯನ್ನು ಕಳುಹಿಸಿಕೊಡಲಾಗಿದೆ’ ಎಂದು ತಹಸೀಲ್ದಾರ್ ಸುಮಂತ್ ಹೇಳಿದರು. ‘ಪುನರ್ವಸತಿ ಕಲ್ಪಿಸಲು ಅರಣ್ಯ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಈಗಾಗಲೇ ಚರ್ಚಿಸಲಾಗಿದೆ’ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು. ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.

ತುಂಬಳ್ಳಿಪುರ ಕಲ್ಗಂಡಿ ಹಳ್ಳದಲ್ಲಿ ಕಾಲು ಜಾರಿ ಬಿದ್ದು, ಮೃತಪಟ್ಟಿದ್ದ ಕುಮಾರ್ ಎಂಬುವವರ ಪತ್ನಿ ರೇಣುಕಾ ಅವರ ಮನವಿಗೆ ಸ್ಪಂದಿಸಿದ ಸಚಿವ ಜಾರ್ಜ್ ಹಾಗೂ ಶಾಸಕಿ ನಯನಾ ಮೋಟಮ್ಮ ಪರಿಹಾರದ ಭರವಸೆ ನೀಡಿದರು. ಅಧಿಕಾರಿಗಳು ಮಳೆಹಾನಿ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ತ್ವರಿತವಾಗಿ ಸ್ಪಂದಿಸಬೇಕು ಎಂದು ಕಾಂಗ್ರೆಸ್ ಮುಖಂಡ  ಬಿ.ಬಿ.ನಿಂಗಯ್ಯ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್, ಸಿಇಓ ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಮ್ಟೆ, ಕಾರ್ಯನಿರ್ವಹಣಾಧಿಕಾರಿ ತಾರಾನಾಥ್, ಬ್ಲಾಕ್ ಅಧ್ಯಕ್ಷ ಮುದಾಬಿರ್, ಹೋಬಳಿ ಅಧ್ಯಕ್ಷ ಪೂರ್ಣೇಶ್, ಜಿಲ್ಲಾ ಕಿಸಾನ್ ಮಹಾ ಕಾರ್ಯದರ್ಶಿ ಉಮೇಶ್ ದೇವರಹಳ್ಳಿ, ಬಸರವಳ್ಳಿ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಮುಖಂಡರಾದ ಆದಿತ್ಯ ಬೆರಣಗೋಡು, ರವಿಚಂದ್ರ, ಆಲ್ದೂರು ಪಂಚಾಯಿತಿ ಉಪಾಧ್ಯಕ್ಷ ಎಸ್‍.ಕೆ ಲಿಂಗೇಗೌಡ, ಬ್ಯಾರಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎ.ಯು,ಇಬ್ರಾಹಿಂ, ಗ್ರಾಮ ಲೆಕ್ಕಾಧಿಕಾರಿ ಶಾಶ್ವತ್, ಸರ್ಕಲ್ ಇನ್‌ಸ್ಪೆಕ್ಟರ್‌ ಸತ್ಯನಾರಾಯಣ, ಆಲ್ದೂರು ಪಂಚಾಯಿತಿ ಪಿಡಿಒ ಶಂಶೂನ್ ನಹರ್, ಬಸರವಳ್ಳಿ ಪಂಚಾಯಿತಿ ಪಿಡಿಒ ಕುಲದೀಪ್, ಗ್ರಾಮಸ್ಥರು  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.