ADVERTISEMENT

ತರೀಕೆರೆ: ತಾಲ್ಲೂಕು ಕಚೇರಿಗೆ ಶಾಸಕ ಜಿ.ಎಚ್. ಶ್ರೀನಿವಾಸ್‍ ದಿಢೀರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 16:03 IST
Last Updated 24 ಜೂನ್ 2024, 16:03 IST
ಶಾಸಕ ಜಿ.ಎಚ್. ಶ್ರೀನಿವಾಸ್‍ ಸೋಮವಾರ ತಾಲ್ಲೂಕು  ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಶಾಸಕ ಜಿ.ಎಚ್. ಶ್ರೀನಿವಾಸ್‍ ಸೋಮವಾರ ತಾಲ್ಲೂಕು  ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ತರೀಕೆರೆ: ತಾಲ್ಲೂಕು ಕಚೇರಿ ಕಾರ್ಯನಿರ್ವಹಣೆ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ  ಜಿ.ಎಚ್‌. ಶ್ರೀನಿವಾಸ್‌ ತಾಲ್ಲೂಕು ಕಚೇರಿಗೆ ಸೋಮವಾರ ಬೆಳಿಗ್ಗೆ ದಿಢೀರ್‌ ಭೇಟಿ ನೀಡಿ, ಅಧಿಕಾರಿಗಳ ಕಾರ್ಯ ವೈಖರಿ ಪರಿಶೀಲಿಸಿದರು.

ಅಕ್ರಮ –ಸಕ್ರಮ ಯೋಜನೆಯಡಿ 2019ರಲ್ಲಿ ತಾಲ್ಲೂಕಿನಲ್ಲಿ ಹಲವು ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು ಕೆಲವರಿಗೆ ಮಾತ್ರ ಹಕ್ಕು ಪತ್ರ ಕೊಡಲಾಗಿದೆ. ಸಾಕಷ್ಟು ಜನರಿಗೆ ಇನ್ನೂ ಹಕ್ಕುಪತ್ರ ವಿತರಣೆಯಾಗಿಲ್ಲ ಎಂದು ಫಲಾನುಭವಿಗಳು ಶಾಸಕರಿಗೆ ದೂರು ಸಲ್ಲಿಸಿದ್ದರು.

ಲಿಂಗದಹಳ್ಳಿ ಹೋಬಳಿಯ ತಿಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೈಪುರ, ಮಂಚೆತೆವರು, ವರ್ತೆಗುಂಡಿ ಕಲ್ಲತ್ತಿಪುರ, ಲಕ್ಕವಳ್ಳಿ ಹೋಬಳಿಯ ಗುರುಪುರ, ಅರಸೀಕೆರೆ ಕಾಲೋನಿ ಹಾಗೂ ಅಮೃತಾಪುರ ಹೋಬಳಿಯ ಸಂತೆದಿಬ್ಬದ ಕಾಲೋನಿ ವ್ಯಾಪ್ತಿಯಲ್ಲಿನ ಫಲಾನುಭವಿಗಳ ಕಡತಗಳು ನೆನೆಗುದಿಗೆ ಬಿದ್ದಿದ್ದನ್ನು ಗಮನಿಸಿದ ಶಾಸಕರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಇನ್ನೆರಡು ದಿನಗಳಲ್ಲಿ ಹಕ್ಕುಪತ್ರ ನೀಡುವಂತೆ ಸೂಚಿಸಿದರು.

ADVERTISEMENT

ಲಿಂಗದಹಳ್ಳಿ ಹೋಬಳಿಯ ನಂದಿಬಟ್ಟಲು ಕೆರೆ ಜಾಗವನ್ನು  ಸರ್ಕಾರಿ ಬೀಳು ಎಂದು ತಪ್ಪಾಗಿ ನಮೂದಿಸಿದ್ದು, ಅದನ್ನು ಕೆರೆಯನ್ನಾಗಿ ಬದಲಾಯಿಸಬೇಕೆಂದು ಹಲವು ಬಾರಿ ಸೂಚಿಸಿದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳದಿರುವುದನ್ನು ತಿಗಡ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್‍ ಶಾಸಕರ ಗಮನ ಸೆಳೆದರು. ಈ ಬಗ್ಗೆ ವಿಚಾರಿಸಿದಾಗ ತಹಶೀಲ್ದಾರ್ ರಾಜೀವ್ ತಕ್ಷಣವೇ ಪರಿಹರಿಸುವುದಾಗಿ ಹೇಳಿದರು.

ಅಜ್ಜಂಪುರ ಮತ್ತು ತರೀಕೆರೆ ತಾಲ್ಲೂಕಿನ ಬಗರ್‌ಹುಕುಂ ಸಮಿತಿಗಳು ರಚನೆಯಾಗಿ ಆರು ತಿಂಗಳು ಕಳೆದಿದ್ದರೂ ಯಾವುದೇ ಸಭೆಗಳನ್ನು ನಡೆಸದಿರುವುದನ್ನು ಸಮಿತಿ ಸದಸ್ಯರು ಶಾಸಕರ ಗಮನ ತಂದರು. ತಕ್ಷಣವೇ ಎರಡೂ ತಾಲ್ಲೂಕಿನ ಸಮಿತಿಗಳ ಸಭೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.