ADVERTISEMENT

ಅಭಿವೃದ್ಧಿ ಕಾರ್ಯಗಳೇ ಟೀಕೆಗೆ ಉತ್ತರ: ಶಾಸಕ ಕೆ.ಎಸ್.ಆನಂದ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 14:07 IST
Last Updated 17 ನವೆಂಬರ್ 2024, 14:07 IST
ಕಡೂರು ತಾಲ್ಲೂಕಿನ ಅಂಚೇಚೋಮನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಿಂದ ಬಾಪೂಜಿ ಕಾಲೊನಿವರೆಗಿನ ರಸ್ತೆ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭಾನುವಾರ ಚಾಲನೆ ನೀಡಿದರು
ಕಡೂರು ತಾಲ್ಲೂಕಿನ ಅಂಚೇಚೋಮನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಿಂದ ಬಾಪೂಜಿ ಕಾಲೊನಿವರೆಗಿನ ರಸ್ತೆ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭಾನುವಾರ ಚಾಲನೆ ನೀಡಿದರು   

ಕಡೂರು: ‘ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕವೇ ವಿರೋಧಿಗಳ ಟೀಕೆಗಳಿಗೆ ಉತ್ತರ ನೀಡುತ್ತೇನೆ’ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ತಾಲ್ಲೂಕಿನ ಅಂಚೇಚೋಮನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಿಂದ ಬಾಪೂಜಿ ಕಾಲೊನಿವರೆಗೆ ₹50 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಶಾಲೆ ಇಲ್ಲದ್ದನ್ನು ಮನಗಂಡು ₹16 ಲಕ್ಷ ವೆಚ್ಚದಲ್ಲಿ ವಿವೇಕ ಶಾಲೆ ನಿರ್ಮಾಣ ಮಾಡಲು ಕ್ರಮಕೈಗೊಂಡೆ. ಇದೀಗ ಗ್ರಾಮಕ್ಕೆ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇನ್ನು ಮುಂದೆ ಹಂತ ಹಂತವಾಗಿ ಅಗತ್ಯ ಮೂಲಸವಲತ್ತು ಕಲ್ಪಿಸಲಾಗುವುದು’ ಎಂದರು.

ADVERTISEMENT

‘ಕ್ಷೇತ್ರದಾದ್ಯಂತ ರಸ್ತೆಗಳ ಸುಧಾರಣೆಗೆ ಆದ್ಯತೆ ನೀಡಲಾಗಿದ್ದು, ಈಗಾಗಲೇ ಕಡೂರು- ಮರವಂಜಿ ರಾಜ್ಯ ಹೆದ್ದಾರಿಗೆ ₹6 ಕೋಟಿ ವೆಚ್ಚದಲ್ಲಿ ಮರುಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಸಂಪರ್ಕ ರಸ್ತೆಯೇ ಇಲ್ಲದಿದ್ದ ಲಿಂಗ್ಲಾಪುರಕ್ಕೆ ₹55 ಲಕ್ಷ ವೆಚ್ಚದಲ್ಲಿ, ಸೇವಾಪುರಕ್ಕೆ ₹50 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಿದೆ. ನಂಜಪ್ಪನ ಹಳ್ಳಿಗೆ ₹50 ಲಕ್ಷ ಅನುದಾನ ನೀಡಲಾಗಿದ್ದು, ವಿವಿಧ ದೇವಸ್ಥಾನಗಳಿಗೆ ಸುಮಾರು ₹20 ಲಕ್ಷ ಅನುದಾನ ನೀಡಿದ್ದೇನೆ’ ಎಂದರು.

‘ಭದ್ರಾ ಉಪಕಣಿವೆ ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸರ್ಕಾರದಲ್ಲಿ ಹಣವಿಲ್ಲ ಎನ್ನುತ್ತಿರುವ ವಿರೋಧ ಪಕ್ಷಗಳು ಹಿಂದೆ ಗ್ರಾಮೀಣ ಭಾಗದಲ್ಲಿ ಇಷ್ಟು ಕಾಮಗಾರಿಗಳು ನಡೆದಿದ್ದವೇ ಎಂಬುದನ್ನು ಗಮನಿಸಬೇಕು. ವಿರೋಧಿಗಳ ಮಾತುಗಳಿಗೆ ಗಮನ ಕೊಡದೆ ಕ್ಷೇತ್ರಾಭಿವೃದ್ಧಿಯತ್ತ ಮಾತ್ರ ಗಮನ ಹರಿಸಿ, ಕೆಲಸಗಳ ಮೂಲಕ ಉತ್ತರಿಸುವೆ’ ಎಂದರು.

ಕೆರೆಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿನಾಯಕ್, ಸದಸ್ಯರಾದ ರೇಣುಕಾ ಮಂಜುನಾಥ್, ಸವಿತಾ ಪ್ರಸನ್ನ, ಕೆ.ಆರ್.ಐ.ಡಿ.ಬಿ. ಎಇಇ ಅಶ್ವಿನಿ‌ ಭಾಗವಹಿಸಿದ್ದರು.

ತಾಲ್ಲೂಕಿನ ವೈ.ಮಲ್ಲಾಪುರದಲ್ಲಿ ಅಂಬೇಡ್ಕರ್ ನಗರ ಕಾಲೊನಿ ಸಂಪರ್ಕಿಸುವ, ₹25 ಲಕ್ಷ ವೆಚ್ಚದ ಸಿ.ಸಿ.ರಸ್ತೆ ನಿರ್ಮಾಣಕ್ಕೂ ಚಾಲನೆ ನೀಡಿದರು. ಗ್ರಾಮದ ಮುಖಂಡರಾದ ಎಂ.ಆರ್.ಟಿ.ಸುರೇಶ್, ತಮ್ಮಯ್ಯ ಭಾಗವಹಿಸಿದ್ದರು.

ಮದ್ಯದಂಗಡಿ ತೆರವು

ಬಾಪೂಜಿ ಕಾಲೊನಿ ಎಂಬ ಹೆಸರಿನ ಗ್ರಾಮದಲ್ಲಿ ಮದ್ಯದಂಗಡಿ ಇದ್ದದ್ದು ಮಹಾನ್ ಚೇತನಕ್ಕೆ ಮಾಡಿದ ಅಪಚಾರವಾಗಿತ್ತು. ಶಾಸಕನಾದ ಕೂಡಲೇ ಮದ್ಯದಂಗಡಿ ತೆರವು ಮಾಡಿಸಿದ್ದೇನೆ. ಬಳಿಕ, ಬಾಪೂಜಿ ಕಾಲೊನಿ ಮಹಿಳೆಯರು ಸ್ವತಃ ವೆಚ್ಚದಿಂದ ಬಹುದೊಡ್ಡ ಕಾರ್ಯಕ್ರಮ ಆಯೋಜಿಸಿ ಗೌರವಿಸಿದ್ದನ್ನು ಮರೆಯಲಾಗದು. ಕೆರೆಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಶಾಸಕ ಕೆ.ಎಸ್‌.ಆನ್ಂದ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.