ಘಟ್ಟದ ಕೆಳಗಿನ ಉಡುಪಿಯ ಕಡಲ ಕಿನಾರೆಯಿಂದ ಹೊರಟು ಮೇಲ್ಮುಖವಾಗಿ ಬಟ್ಟ ಬಯಲುಸೀಮೆ ಅಜ್ಜಂಪುರದವರೆಗೂ ಒಂದೇ ಗತಿಯಲ್ಲಿ ಬೀಸುತ್ತಿರುವಂತೆ ಭಾಸವಾಗುವ ಚುಂಬಕ ಗಾಳಿಯು ಇಲ್ಲಿ ಉಸುರುತ್ತಿರುವ ಪದವೊಂದೇ... ಮೋದಿ, ಮೋದಿ, ಮೋದಿ... ಹೀಗೇಕೆಂದು ಕೇಳಿದರೆ ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಹುತೇಕರು ಹೆಸರಿಸುವುದು ಬಾಲಾಕೋಟ್ ವಾಯುದಾಳಿಯನ್ನು. ಸ್ಥಳೀಯ ಜ್ವಲಂತ ಸಮಸ್ಯೆಗಳು, ಆಗಬೇಕಾದ ಬಹುತೇಕ ಅಭಿವೃದ್ಧಿ ಕಾರ್ಯಗಳೆಲ್ಲವೂ ಪುಲ್ವಾಮಾ ದಾಳಿಗೆ ಗುರಿಯಾದ ಯೋಧರಂತೆಯೇ ಇಲ್ಲಿ ನಿರ್ಜೀವವಾಗಿವೆ.
ಇದನ್ನೂ ಓದಿ: ಕ್ಷೇತ್ರನೋಟ– ಶೋಭಾ,ಪ್ರಮೋದ್ ಹಣಾಹಣಿ
ಈ ಪರಿಯ ಮೋದಿ ಆರಾಧಕರಲ್ಲಿ ಹೆಚ್ಚಿನವರಿಗೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಬಗ್ಗೆ ಒಲವಿಲ್ಲ. ಹೀಗಾಗಿ, ಬಿಜೆಪಿಯಲ್ಲಿ ಹುಮ್ಮಸ್ಸಿಲ್ಲ. ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್ ಕಣದಲ್ಲಿದ್ದಾರೆ. ಆದರೆ, ಅಲ್ಲಿರುವುದು ಜೆಡಿಎಸ್ ಚಿಹ್ನೆ. ಇದರಿಂದ, ಇಲ್ಲಿ ಅಭ್ಯರ್ಥಿ ಬಗ್ಗೆ ಒಲವಿದ್ದರೂ ಮಿತ್ರ ಪಕ್ಷಗಳಲ್ಲಿ ಹುರುಪಿಲ್ಲ. ಚುನಾವಣಾ ಕಣ ರಂಗೇರಿಲ್ಲ.
‘ಗೋ ಬ್ಯಾಕ್ ಶೋಭಾ’ ಹೆಸರಿನಲ್ಲಿ ಬಿಜೆಪಿಯಲ್ಲಿ ಭುಗಿಲೆದ್ದಿದ್ದ ಆಂತರಿಕ ಭಿನ್ನಮತ ಮೇಲ್ನೋಟಕ್ಕೆ ತಣ್ಣಗಾದಂತಿದೆ. ಕಾಂಗ್ರೆಸ್– ಜೆಡಿಎಸ್ ಮೈತ್ರಿಯು ಕಾರ್ಯಕರ್ತರವರೆಗೂ ಬಾರದೆ ಮೇಲ್ಮಟ್ಟದಲ್ಲಷ್ಟೇ ಉಳಿದುಹೋಗಿದೆ.
‘ಇಷ್ಟೊತ್ತಿಗೆ ಜಾತಿ ಸಮೀಕರಣ, ಮೈತ್ರಿ ಸಮೀಕರಣ ಎಲ್ಲವೂ ಆಗಬೇಕಿತ್ತು. ಹೋಟೆಲ್‌ಗಳಲ್ಲಿ, ಬೀದಿಬೀದಿಗಳಲ್ಲಿ ಜನ ಚರ್ಚೆಗೆ ಮುಖಾಮುಖಿ ಆಗುತ್ತಿದ್ದರು. ಈ ಸಲ ಮಾತ್ರ ಅಂಥ ಯಾವ್ದೂ ಕಾಣ್ತಿಲ್ಲ. ಜನಕ್ಕೆ ಹನುಮಾನ್ ಚಾಳೀಸ, ಪಂಚಾಂಗ ಗೊತ್ತು. ಸಂವಿಧಾನ, ಜನತಂತ್ರ ವ್ಯವಸ್ಥೆ ಬಗ್ಗೆ ಚರ್ಚೆ ಬೇಕಿಲ್ಲ. ವೈಚಾರಿಕ ನೆಲೆಗಟ್ಟಂತೂ ಇಲ್ಲವೇ ಇಲ್ಲ’ ಎಂದು ವಿಶ್ಲೇಷಿಸುತ್ತಾರೆ ತರೀಕೆರೆಯ ಕೃಷಿಕ ಮೋಹನ್ ಕುಮಾರ್.
‘ಯುವಕರ ಚಟುವಟಿಕೆಗೆ, ಅವರ ಆರ್ಭಟಕ್ಕೆ ಒಂದು ವೇದಿಕೆ ಬೇಕು. ಬಿಜೆಪಿ ಜೊತೆಗೆ ಎಬಿವಿಪಿ, ಬಜರಂಗದಳದಂಥ ಸಂಘಟನೆಗಳಿವೆ. ಕಾಂಗ್ರೆಸ್‌ನಲ್ಲಿ ಎನ್‌ಎಸ್‌ಯುಐಗೆ ಬಲವಿಲ್ಲ. ರಕ್ಷಣಾ ವೇದಿಕೆಯವ್ರೇ ಅಷ್ಟೊಂದು ಜನರನ್ನ ಒಟ್ಟಾಕ್ತಾರೆ. ಕಾಂಗ್ರೆಸ್‌ಗೆ ಯಾಕೆ ಅದು ಸಾಧ್ಯವಾಗ್ತಿಲ್ಲ’ ಎಂದು ಪ್ರಶ್ನಿಸುತ್ತಾರೆ ಕೊಪ್ಪದ ಜಿನೇಶ್ ಇರ್ವತ್ತೂರು.
‘ಶೋಭಕ್ಕ ಅಭಿವೃದ್ಧಿ ಕೆಲಸದಲ್ಲಿ ನಿಲ್. ಇದ್ದವ್ರಿಗೆ ತೊಂದರೆ ಕೊಡಲು, ಗಲಾಟೆ ಎಬ್ಬಿಸಲಷ್ಟೇ ಅವರು ಇಲ್ಲಿಗೆ ಬರೋದು’ ಎಂದು ಸಿಡಿಮಿಡಿಗುಟ್ಟಿದವರು ಕಾರ್ಕಳದ ವಿವೇಕ್ ರೈ ಮತ್ತು ಕೊಪ್ಪದ ಶಂಕರಪ್ಪ.
‘ಬಿಜೆಪಿಯವ್ರು ಕಷ್ಟಪಟ್ಟು ಉತ್ತು ಬಿತ್ತಿ ನಂತ್ರ ಫಲ ಅಪೇಕ್ಷಿಸ್ತಾರೆ. ಆದರೆ ಕಾಂಗ್ರೆಸ್‌ನವ್ರು ಉತ್ತಿ ಬಿತ್ತಲು ತಯಾರಿಲ್ಲ. ಅವರದೇನಿದ್ದರೂ ಫಲ ಉಣ್ಣುವ ಕಾತರ’ ಎನ್ನುವ ಅರುಣ್ ಬಾಳಗಡಿಯ ಮಾತಿನಲ್ಲಿ, ಮೈತ್ರಿ ನಿರೀಕ್ಷಿತ ಫಲ ನೀಡದಿದ್ದರೆ ಎಂಬ ಆತಂಕ ಇಣುಕುತ್ತಿತ್ತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತರೀಕೆರೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗೆ ಬಂದದ್ದು 25,000 ಮತ. ಅವರೊಟ್ಟಿಗೆ ಸ್ಪರ್ಧಿಸಿದ್ದ ಉಳಿದ ನಾಲ್ವರು ಪ್ರಮುಖ ಅಭ್ಯರ್ಥಿಗಳು ಒಟ್ಟು 1.25 ಲಕ್ಷ ಮತಗಳನ್ನು ಬಗಲಿಗೆ ಹಾಕಿಕೊಂಡಿದ್ದರು. ಈಗ ಈ ನಾಲ್ವರೂ ಮಿತ್ರ ಪಕ್ಷಗಳಲ್ಲಿದ್ದಾರೆ. ಆದರೆ ಈ ಅವಕಾಶವನ್ನು ಮತಗಳಾಗಿ ಪರಿವರ್ತಿಸುವ ಸರಿಯಾದ ಪ್ರಯತ್ನ ಮುಖಂಡರಿಂದ ಆಗುತ್ತಿಲ್ಲ ಎನ್ನುವ ಕೊರಗು ಕಾಂಗ್ರೆಸ್– ಜೆಡಿಎಸ್ ಕಾರ್ಯಕರ್ತರಲ್ಲಿದೆ.
‘ಮೈತ್ರಿ ಬಗ್ಗೆ ಪ್ರಥಮ ಹಂತದಿಂದಲೇ ಮನಸ್ಸು ಒಗ್ಗೂಡಿಲ್ಲ. ಸಭೆ, ಸಮಾರಂಭಗಳನ್ನು ಮಾಡಿದ್ರೆ ಆಟೊಮ್ಯಾಟಿಕ್ ಆಗಿ ಕಾರ್ಯಕರ್ತರಲ್ಲಿ ಬದಲಾವಣೆ ಆಗಿರೋದು. ಅವರು ದುಡ್ಡು ಬಿಚ್ಚಲಿ ಅಂತ ಇವರು, ಇವರು ಬಿಚ್ಚಲಿ ಅಂತ ಅವರು, ಕಡೆಗೆ ಯಾರೂ ಬಿಚ್ಚದೆ ಪ್ರಚಾರಕ್ಕೆ ಹಿನ್ನಡೆಯಾಗುತ್ತಿದೆ. ಒಂದು ವೇಳೆ ಪ್ರಮೋದ್ ಕಾಂಗ್ರೆಸ್‌ನಿಂದ ನಿಂತಿದ್ರೆ ಅಥವಾ ಅವರ ಬದಲು ಜಯಪ್ರಕಾಶ್ ಹೆಗ್ಡೆ ಅವರೇನಾದ್ರೂ ನಿಂತಿದ್ರೆ ಅದ್ರ ಕತೆಯೇ ಬೇರೆ ಆಗಿರ್‌ತಿತ್ತು’ ಎನ್ನುತ್ತಾರೆ ದಲಿತ ಸಂಘರ್ಷ ಸಮಿತಿಯ ಕೆ.ನಾಗರಾಜ್.
ಹೆಬ್ರಿಯಲ್ಲಿ ಮಾತಿಗೆಸಿಕ್ಕ ಅಮೃತಭಾರತಿ ಕಾಲೇಜಿನ ಹದಿಹರೆಯದ ಯುವಕರಿಗೆ, ಇನ್ನೂ ವೋಟ್ ಹಾಕುವ ಹಕ್ಕು ಪಡೆಯುವಷ್ಟು ವಯಸ್ಸಾಗಿಲ್ಲ. ‘ಒಂದು ವೇಳೆ ವೋಟ್ ಹಾಕುವಂತಿದ್ದರೆ ನಿಮ್ಮ ಆಯ್ಕೆ ಯಾರದಿರುತ್ತಿತ್ತು’ ಎಂದಾಗ ಥಟ್ಟನೆ ಅವರೆಲ್ಲರೂ ಹೇಳಿದ್ದು ‘ಮೋದಿ’. ‘ಯಾಕೆ’ ಎಂದರೆ ಮಾತ್ರ ನಿರುತ್ತರ. ಮೊದಲ ಬಾರಿಗೆ ವೋಟ್ ಮಾಡುವ ಹಕ್ಕು ಪಡೆದ ಪುಳಕದಲ್ಲಿರುವ ಉಡುಪಿಯ ಎಂಜಿಎಂ ಕಾಲೇಜು ವಿದ್ಯಾರ್ಥಿನಿಯರ ಗುಂಪಿನಲ್ಲೂ ಮೋದಿ ಪರ ಇಂಥದ್ದೇ ಹುರುಪು. ಆದರೆ ಅದಕ್ಕೆ ಸಮರ್ಥನೆ ಕೊಡಲು ಅವರ ಬಳಿ ಸೇನೆ, ಪಾಕಿಸ್ತಾನದಂತಹ ದೊಡ್ಡ ದೊಡ್ಡ ಸಂಗತಿಗಳೇ ಇವೆ. ‘ನಾನು ಯಾರಿಗೆ ವೋಟ್ ಹಾಕ್ತೇನೆ ಅಂತ ನಿಮಗ್ಯಾಕೆ ಹೇಳ
ಬೇಕು’ ಎಂದು ಖಡಕ್ಕಾಗಿ ಕೇಳಿದ ವಿದ್ಯಾರ್ಥಿನಿ ಸುರಕ್ಷಾ, ‘ತೀರ್ಥಹಳ್ಳಿಯಲ್ಲಿರುವ ನನ್ನ ಅಪ್ಪ ಜೆಡಿಎಸ್ ಮುಖಂಡ. ನನಗೆ ಮಾತ್ರ ಮೋದಿನೇ ಬೇಕು. ನಮ್ಮವರು ಪಾಕಿಸ್ತಾನಕ್ಕೇ ನುಗ್ಗಿ ಬಾಂಬ್ ಹಾಕಿ ಬರುವಂತೆ ಮಾಡಿದ್ದಾರೆ. ಬೇರೆ ಯಾರು ತಾನೇ ಹೀಗೆಲ್ಲಾ ಮಾಡಿದ್ದಾರೆ ಹೇಳಿ’ ಎಂದಳು. ‘ಸರಿ ಹಾಗಾದರೆ, ಅದಕ್ಕೆ ಪ್ರತಿಯಾಗಿ ಅವರೂ ನಮ್ಮ ಮೇಲೆ ಬಾಂಬ್ ಹಾಕಲಿ, ಆಗ ಮತ್ತೆ ನಾವು ಅವರ ಮೇಲೆ ಹಾಕೋಣ, ಅದು ಹಾಗೇ ಮುಂದುವರಿದು ಕೊನೆಗೆ ಇಬ್ಬರೂ ಸರ್ವನಾಶವಾಗೋಣ ಅಲ್ಲವೇ’ ಎಂದು ಕೆಣಕಿದರೆ ಕ್ಷಣ ತಬ್ಬಿಬ್ಬಾದ ಆಕೆ, ತಕ್ಷಣವೇ ಸಾವರಿಸಿಕೊಂಡು ‘ಅದೆಲ್ಲ ನನಗೆ ಗೊತ್ತಿಲ್ಲಪ್ಪ, ಒಟ್ಟಿನಲ್ಲಿ ನಮಗೆ ಮೋದಿ ಬೇಕು ಅಷ್ಟೆ’ ಎಂದಳು.
‘ಕಟ್ಟಾ ಕಾಂಗ್ರೆಸ್ಸಿಗರು ವೋಟಿಂಗ್ ಮೆಷೀನ್‌ನಲ್ಲಿ ಕೈ ಸಿಂಬಲ್ ಹುಡುಕ್ತಾರೆ. ಕಾಣದಿದ್ದಾಗ ಸಿಕ್ಕಿದವ್ರಿಗೆ ಗುಂಡಿ ಒತ್ತಿ ಬರ್ತಾರೆ’ ಎನ್ನುತ್ತಾ ಹುಸಿನಗೆ ನಕ್ಕರು ಸಾಲಿಗ್ರಾಮದ ಆಟೊ ಚಾಲಕ ಸತೀಶ್.
ಅರಣ್ಯ ಒತ್ತುವರಿ ಸಮಸ್ಯೆಯ ಸಿಕ್ಕುಗಳನ್ನು ಎಳೆಎಳೆಯಾಗಿ ಬಿಡಿಸಿಡುವ ಶೃಂಗೇರಿಯ ಕಲ್ಕುಳಿ ವಿಠಲ ಹೆಗ್ಡೆ, ಕಾಡಂಚಿನ ಕುಟುಂಬಗಳ ಅತಂತ್ರ ಸ್ಥಿತಿ ಬಗ್ಗೆ ಮರುಗುವ ಕಳಸದ ಕೆ.ಎಲ್.ವಾಸು, ಭೂ ಹಕ್ಕು ಕಾಯ್ದೆ ಜಾರಿಯಲ್ಲಿ ಅಧಿಕಾರಿಗಳ ಮೀನಮೇಷದಿಂದ ರೋಸಿರುವ ಎನ್.ಆರ್.ಪುರದ ವಿನಾಯಕ್ ಮಾಲೂರುದಿಣ್ಣೆ, ರೈತರ ಬೆಳೆಗೆ ಸರಿಯಾದ ಬೆಲೆ ಸಿಗುವಂತಾಗಬೇಕು ಎನ್ನುವ ಎ.ಸಿ.ಚಂದ್ರಪ್ಪ ಮುಂತಾದವರ ಧ್ವನಿಗಳು, ಮೋದಿ ಪರ ಎದ್ದಿರುವ ಪ್ರಬಲ ಅಲೆಯಲ್ಲಿ ಉಡುಗಿ ಹೋಗಿವೆ.
‘ಜಿಎಸ್‌ಟಿಯಿಂದ ನಮ್ಮಂಥ ಮಧ್ಯಮ ವರ್ಗದವ್ರಿಗೆ ಬಾಳಾ ಸಮಸ್ಯೆಯಾಗಿದೆ. ನಾನು ಯಾವಾಗ್ಲೂ ಬಿಜೆಪಿಗೇ ವೋಟ್ ಹಾಕುವವ. ಆದರೆ ಈ ಬಾರಿ ಶೋಭಕ್ಕನಿಗೆ ಹಾಕಲ್ಲ, ಕಾಂಗ್ರೆಸ್‌ಗೆ ಹಾಕಲು ಮನಸ್ಸಿಲ್ಲ. ಎಂತ ಮಾಡೋದೋ ಗೊತ್ತಾಗ್ತಿಲ್ಲ’ ಎಂಬ ಗೊಂದಲ ಕಾರ್ಕಳದ ಗಣೇಶ ಭಟ್ಟರಿಗೆ.
‘ಹಿಂದೆ ಜೆಪಿ ಚಳವಳಿ ಟೈಮಲ್ಲಿ ಇಲ್ಲಿಗೆ ಬಂದಿದ್ದ ದೇವೇಗೌಡ್ರಿಗೆ ಕಾರ್‌ಗೆ ಪೆಟ್ರೋಲ್ ಹಾಕಿಸಕ್ಕೂ ದುಡ್ಡಿರಲಿಲ್ಲ. ನಾವೆಲ್ಲ ಸೇರಿ ದುಡ್ಡು ಕಲೆಕ್ಟ್ ಮಾಡಿ ಪೆಟ್ರೋಲ್ ಹಾಕ್ಸಿ ಕಳಿಸಿದ್ದೊ. ಈಗ ಅವ್ರತ್ರ ನೂರಾರ್ ಕೋಟಿ ರೂಪಾಯಿ ಎಲ್ಲಿಂದ ಬಂತು’ ಎಂದು ಕೇಳುತ್ತಾರೆ ರೈತ ಮುಖಂಡ ಎಂ.ಮಹೇಶ್.
‘ಕಾಫಿ, ಅಡಿಕೆಯಂಥ ವಾಣಿಜ್ಯ ಬೆಳೆಗಾರರಿಗೆ ವಾಸ್ತವದಲ್ಲಿ ಹೆಚ್ಚು ಅನುಕೂಲವಾಗಿದ್ದು ಯುಪಿಎ ಅವಧಿಯಲ್ಲೇ. 2001– 10ರ ಅವಧಿಯಲ್ಲಿ ಸಂಕಷ್ಟದಲ್ಲಿದ್ದ ಬೆಳೆಗಾರರಿಗೆ ಹೆಚ್ಚು ಸಬ್ಸಿಡಿ ಕೊಟ್ಟು ಪಾರು ಮಾಡಿದವರು ಅವರೇ. ಬೆಳೆಗಾರರ ಎಷ್ಟೋ ಬೇಡಿಕೆಗಳು ಎನ್‌ಡಿಎ ಅವಧೀಲಿ ಈಡೇರಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಮೋದಿಗೆ ಪರ್ಯಾಯವಾದ ಲೀಡರ್ ಇಲ್ಲ. ಕಡೇಪಕ್ಷ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿಂತಿದ್ರೆ ನೆಕ್ ಟು ನೆಕ್ ಫೈಟ್ ಆದ್ರೂ ಇರ್ತಿತ್ತು. ಜೆಡಿಎಸ್‌ನವ್ರು ಸೀಟು ತಗೊಂಡು ತಮ್ಮ ಜೊತೇಲಿ ಕಾಂಗ್ರೆಸ್‌ನೂ ಮುಳುಗಿಸ್ತಾ ಇದಾರೆ’ ಎಂದು ಬೇಸರಿಸಿದವರು ಕಾಫಿ ಬೆಳೆಗಾರ ಎಂ.ಕೆ.ಸುಂದರೇಶ್.
‘ನಮ್ಗೆ ಆಯುಷ್ಮಾನ್ ಕಾರ್ಡ್, ಕಮ್ಮಿ ಬಡ್ಡೀಲಿ ಸಾಲ, ಕಾರ್ಮಿಕರ ಸಂಘಕ್ಕೆ ಸಹಾಯ ಎಲ್ಲವೂ ಆಗಿದ್ದು ಮೋದಿಯಿಂದ. ಅವ್ರು 10 ವರ್ಷ ಅಧಿಕಾರ ನಡೆಸ್ಬೇಕು’ ಎಂದವರು, ಪಡುಬಿದ್ರಿಯ ಕಡಲತಡಿಯಲ್ಲಿ ಮೀನುಗಾರಿಕಾ ಬಲೆಯನ್ನು ಶಿಸ್ತಾಗಿ ದೋಣಿಯೊಳಗೆ ತುಂಬಿಸುತ್ತಿದ್ದ ಚಂದ್ರಶೇಖರ್. ‘10 ವರ್ಷ ಅಂದ್ರೆ ಈಗಾಗ್ಲೇ ಮುಗಿದಿರೋ ಐದು ವರ್ಷನೂ ಸೇರಿನೋ ಅಥವಾ ಅದಲ್ದೆ 10 ವರ್ಷಾನೋ’ ಎಂದು ಕಾಲೆಳೆದರೆ, ‘ಅವ್ರು ಈಗಾಗ್ಲೇ ಅಜ್ಜ ಆಗಿದ್ದುಂಟಲ್ವಾ. ಬದುಕಿರುವಷ್ಟು ದಿನಾನೂ ಪ್ರಧಾನಿಯಾಗೇ ಇರಲಿ ಬಿಡಿ ಏನೀಗ’ ಎಂದು ಅಭಿಮಾನ ಮೆರೆದರು.
ಬಾಳೆಹೊನ್ನೂರಿನ ಬಸ್ ನಿಲ್ದಾಣದ ಸಮೀಪ ನಿರ್ಮಿಸಿದ್ದ ತಾತ್ಕಾಲಿಕ ವೇದಿಕೆಯಲ್ಲಿ ರಾತ್ರಿ 8 ಗಂಟೆ ಹೊತ್ತಿಗೆ ಭಾಷಣ ಮಾಡುತ್ತಿದ್ದ ಕಾಂಗ್ರೆಸ್ ಮುಖಂಡರೊಬ್ಬರು ‘ಕೈ ಇಲ್ಲ ಕೈ ಇಲ್ಲ ಅಂತ ಕೊರಗಬೇಡಿ. ತೆನೆ ಹೊತ್ತ ಮಹಿಳೆಗೆ ಎರಡು ಕೈಗಳಿವೆ ಎಂಬುದು ನಿಮಗೆ ತಿಳಿದಿರಲಿ’ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬುತ್ತಿದ್ದರು. ಆದರೆ, ಆ ಕೈಗಳಿಗೆ ಬಲ ತುಂಬುವ ಕೆಲಸ ಚುನಾವಣೆಯ ನಿರ್ಣಾಯಕ ಘಟ್ಟದಲ್ಲಾದರೂ ಆದರೆ ಸಾಕು ಎಂದು ಆಶಿಸಿದರು ಕೆಳಗೆ ನಿಂತಿದ್ದ ಕಾರ್ಯಕರ್ತ ಜೈರಾಮ್. ಉಡುಪಿಯ ರಾಜ್ಯಶಾಸ್ತ್ರ ಉಪನ್ಯಾಸಕ ಸುರೇಂದ್ರನಾಥ ಶೆಟ್ಟಿ ಅವರ ಪ್ರಕಾರ, ಮೇಲ್ನೋಟಕ್ಕೆ ಯಾರೇ ಮುಂಚೂಣಿಯಲ್ಲಿರುವಂತೆ ಕಂಡರೂ, ಯಾವ ಪಕ್ಷಕ್ಕೂ ಅಂಟಿಕೊಳ್ಳದೆ ಎತ್ತ ಬೇಕಾದರೂ ವಾಲಬಹುದಾದ ‘ತೇಲು ಮತದಾರ’ರೇ ಈ ಕ್ಷೇತ್ರದಲ್ಲಿ ‘ಡಿಸೈಡಿಂಗ್ ಫ್ಯಾಕ್ಟರ್’.
ಹೊಟ್ಟೆ ಸಂಕಟ ಮಗಾ...
ಕತ್ತಲೇರುತ್ತಿದ್ದುದಕ್ಕೋ ಏನೋ ಹೆಚ್ಚು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು ಮಲ್ಪೆ ಬೀಚ್‌ನ ಮೀನು ಮಾರುಕಟ್ಟೆ. ನಾವು ಪೇಪರ್‌ನವರು ಎಂದು ತಿಳಿಯುತ್ತಲೆ ಒಮ್ಮೆಗೇ ಅದು ಅಕ್ಷರಶಃ ಮುಂಜಾನೆಯ ಗಿಜಿಗುಡುವ ‘ಫಿಶ್ ಮಾರ್ಕೆಟ್’ನಂತೆ ಬದಲಾಗಿಹೋಯಿತು. ಮೀನುಗಾರಿಕೆಗೆ ತೆರಳಿದ್ದಾಗ ನಾಪತ್ತೆಯಾದ 7 ಮಂದಿ ಮೂರು ತಿಂಗಳಾದರೂ ಪತ್ತೆಯಾಗದ ಬಗ್ಗೆ ಅಲ್ಲಿದ್ದ ಮಹಿಳೆಯರ ಆಕ್ರೋಶದ ಕಟ್ಟೆಯೊಡೆಯಿತು. ‘ಇಷ್ಟೆಲ್ಲಾ ರಾಜಕಾರಣಿಗಳಿದ್ರೂ ನಮ್ಮವ್ರು ಏನಾದ್ರು ಅಂತ ಪತ್ತೆ ಹಚ್ಚಲಿಕ್ಕಾಗ್ತಾ ಇಲ್ವಲ್ಲ ಇವ್ರಿಗೆ, ಇವ್ರೆಂತ ಜನ ಮಾರಾಯ್ರೆ? ಮತ್ತೆ ಇವ್ರಿಗೆಲ್ಲ ನಾವು ಎಂತದ್ದಕ್ಕೆ ವೋಟ್ ಹಾಕ್ಬೇಕು? ಕಾಣೆಯಾದ ಮಕ್ಕಳ ಕೊರಗಿನಲ್ಲಿ ಇಬ್ಬರು ತಾಯಂದಿರು ಸತ್ತೇಹೋದ್ರು. ದುಡಿಯುವ ಗಂಡಸೇ ಇಲ್ಲದ ಮೇಲೆ ಆ ಮನೆ ಹೆಂಗೆ ನಡೀಬೇಕು ಹೇಳಿ’ ಎಂದು ಗದ್ಗದಿತರಾದರು ಚಂದ್ರವತಿ. ‘ಹಿಂಗೆಲ್ಲಾ ಅಂದೊ ಅಂತ ಬೇಜಾರ್ ಮಾಡ್ಬೇಡ ಮಗಾ, ಹೊಟ್ಟೆ ಸಂಕಟ ಹಿಂಗೆಲ್ಲಾ ಮಾತಾಡಿಸ್ತದೆ’ ಎನ್ನುತ್ತಾ ಸೆರಗಿಗೆ ಕಣ್ಣೊತ್ತಿಕೊಂಡರು.
ಪ್ಲಸ್ ಪಾಯಿಂಟ್
‘ಕಳೆದ ವಾರ ಪಕ್ಷದ ಕೆಲಸಕ್ಕೆಂದು ಚಿಕ್ಕಮಗಳೂರಿಗೆ ಹೋಗಿದ್ದಾಗ ಆ್ಯಕ್ಸಿಡೆಂಟ್ ಆಗಿ ಕೈಗೆ ಪೆಟ್ಟಾಯ್ತು. ಆದರೂ ಬಿಡದೆ ನಿರಂತರವಾಗಿ ಪಕ್ಷದ ಕೆಲಸ ಮಾಡ್ತಾನೇ ಇದ್ದೀನಿ. ಇಂಥ ಕಮಿಟ್‌ಮೆಂಟ್ ಇರೋವ್ರ ಕೊರತೆ ಇರೋದೇ ಕಾಂಗ್ರೆಸ್‌ಗೆ ನೆಗೆಟಿವ್ ಪಾಯಿಂಟ್’ ಎನ್ನುತ್ತಾರೆ ತರೀಕೆರೆಯ ಉದ್ಯಮಿ ಆರ್.ದೇವಾನಂದ್.
ಯುಪಿಎ, ಎನ್‌ಡಿಎ ಎರಡರ ವೈಫಲ್ಯಗಳನ್ನೂ ವಸ್ತುನಿಷ್ಠವಾಗಿ ಚರ್ಚಿಸುವ ಅವರು, ‘ಯುಪಿಎ ಅವಧಿಯಂತೆ ಎನ್‌ಡಿಎಯಿಂದಲೂ ಸಾಕಷ್ಟು ತಪ್ಪುಗಳಾಗಿವೆ. ಆದರೆ ಅವನ್ನು ಜನರೆದುದು ಪರಿಣಾಮಕಾರಿಯಾಗಿ ಬಿಂಬಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಆಡಳಿತ ಪಕ್ಷ ಸರ್ವಾಧಿಕಾರಿ ಆಗಬಾರದೆಂದರೆ ವಿರೋಧ ಪಕ್ಷಗಳು ಗಟ್ಟಿಯಾಗಿರಬೇಕು. ಕಮ್ಯುನಿಸ್ಟ್ ಪಕ್ಷಗಳೂ ದೇಶದಲ್ಲಿ ಬಲ ಕಳೆದುಕೊಳ್ಳುತ್ತಿರುವುದು ದುರಂತ. ಇವೆಲ್ಲ ದೇಶದಾದ್ಯಂತ ಬಿಜೆಪಿಗೆ ಪ್ಲಸ್ ಪಾಯಿಂಟ್’ ಎನ್ನುತ್ತಾರೆ.
ಪ್ರಜಾವಾಣಿ ವಿಶೇಷಸಂದರ್ಶನಗಳು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.