ADVERTISEMENT

ಪಿಎಸ್‌ಐ ಸ್ಥಳ ನಿಯುಕ್ತಿ ಆದೇಶ ಹಿಂಪಡೆಯದಿದ್ದರೆ ಧರಣಿ: ಎಂ.ಪಿ. ಕುಮಾರಸ್ವಾಮಿ

ಪಶ್ಚಿಮ ವಲಯ ಐಜಿಪಿಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಪತ್ರ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 11:35 IST
Last Updated 9 ಜೂನ್ 2022, 11:35 IST
ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ
ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ   

ಚಿಕ್ಕಮಗಳೂರು: ತಾಲ್ಲೂಕಿನ ಮಲ್ಲಂದೂರು ಠಾಣೆ ಪಿಎಸ್‌ಐ ಸ್ಥಳ ನಿಯುಕ್ತಿ ಆದೇಶವನ್ನು ಒಂದು ವಾರದೊಳಗೆ ಹಿಂಪಡೆಯದಿದ್ದರೆ ಐಜಿಪಿ ಕಚೇರಿ ಮುಂದೆ ಧರಣಿ ಕೂರುತ್ತೇನೆ ಎಂದು ಪಶ್ಚಿಮ ವಲಯ ಐಜಿಪಿ ಅವರಿಗೆ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಬರೆದಿರುವ ಪತ್ರದ ಪ್ರತಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಕುಮಾರಸ್ವಾಮಿ ಲೆಟರ್‌ ಹೆಡ್‌ನ ಈ ಪ್ರತಿಯಲ್ಲಿ ದಿನಾಂಕ 2022ಜೂನ್‌ 6 ಎಂದು ನಮೂದಾಗಿದೆ. ಮಲ್ಲಂದೂರು ಠಾಣೆಗೆ ಐಜಿಪಿ ನಿಯುಕ್ತಿ ಮಾಡಿದ್ದ ಪಿಎಸ್‌ಐ ರವೀಶ ಅವರಿಗೆ ಶಾಸಕ ಕುಮಾರಸ್ವಾಮಿ ಫೋನ್‌ ಮಾಡಿ ಬೆದರಿಕೆ ಹಾಕಿದ್ದ ಆಡಿಯೊ ಈಚೆಗೆ ವೈರಲ್‌ ಆಗಿತ್ತು.

ವೈರಲ್‌ ಪತ್ರದಲ್ಲಿನ ಉಲ್ಲೇಖ ಇಂತಿದೆ:

ADVERTISEMENT

ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ 2022 ಮೇ 10ರಂದು ತಮ್ಮೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಂತೆ ನನ್ನ ಮತ ಕ್ಷೇತ್ರ ವ್ಯಾಪ್ತಿಯಲ್ಲಿನ ಎಲ್ಲ ಪೊಲೀಸ್‌ ಠಾಣೆಗಳ ಎಲ್ಲ ಪಿಎಸ್‌ಐಗಳನ್ನು ಉಲ್ಲೇಖ (1)ರಂತೆ ಕೇಂದ್ರ ಸ್ಥಾನದಲ್ಲಿಯೇ ಮುಂದುವರಿಸುವಂತೆ ನನ್ನ ಇ–ಮೇಲ್‌ ಮೂಲಕ ಕೋರಲಾಗಿತ್ತು. ಆದರೂ, ತಾವು ನನ್ನ ಗಮನಕ್ಕೆ ತರದೆ ನನ್ನ ಮತ್ರ ಕ್ಷೇತ್ರದ ಮೂಡಿಗರೆ ಠಾಣೆಯ ಪಿಎಸ್‌ಐ ರವಿ ಹಾಗೂ ಮಲ್ಲಂದೂರು ಠಾಣೆಯ ಪಿಎಸ್ಐ ಅವರನ್ನು ಬೇರೆಡೆಗೆ ಸ್ಥಳ ನಿಯುಕ್ತಿ ಮಾಡಿ ಆದೇಶ ಹೊರಡಿಸಿದ್ದೀರಿ. ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈಗ ಮಾಡಿರುವ ಆದೇಶವನ್ನು ಹಿಂಪಡೆದು ಮೂಡಿಗೆರೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‌ ಅವರನ್ನು ಕೇಂದ್ರ ಸ್ಥಾನದಲ್ಲೇ ಮುಂದುವರಿಸಬೇಕು. ಹಾಗೂ ಮಲ್ಲಂದೂರು ಠಾಣೆಯ ಪಿಎಸ್‌ಐ ಸ್ಥಳ ನಿಯುಕ್ತಿ ಆದೇಶ ರದ್ದುಪಡಿಸಬೇಕು ಎಂದು ಕೋರಿಕೊಳ್ಳುತ್ತೇನೆ. ಒಂದು ವೇಳೆ ತಾವು ತಮ್ಮ ಆದೇಶವನ್ನು ವಾರದೊಳಗೆ ಹಿಂಪಡೆಯಲು ಸಾಧ್ಯವಾಗದಿದ್ದರೆ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಕಚೇರಿ ಮುಂದೆ ಧರಣಿ ಕೂರುವುದಾಗಿ ಈ ಮೂಲಕ ತಿಳಿಯಪಡಿಸುತ್ತೇನೆ.

ಎಂ.ಎಸ್‌. ಆದರ್ಶ ನಿಯುಕ್ತಿಗೆ ಕೋರಿಕೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಾಯೋಗಿಕ ತರಬೇತಿ ಮುಗಿಸಿ ಪ್ರಸ್ತುತ ಮಂಗಳೂರಿನ ಪಶ್ಚಿಮ ವಲಯ ಕಚೇರಿಯಲ್ಲಿ ವರದಿ ಮಾಡಿಕೊಂಡು ಸ್ಥಳ ನಿಯುಕ್ತಿ ನಿರೀಕ್ಷಣೆಯಲ್ಲಿರುವ ಪಿಎಸ್‌ಐ ಎಂ.ಎಸ್‌.ಆದರ್ಶ ಅವರನ್ನು ಮೂಡಿಗೆರೆ ಠಾಣೆಯ ಕಾನೂನು– ಸುವ್ಯವಸ್ಥೆ ಮತ್ತು ಸಂಚಾರ ಹುದ್ದೆಗೆ ನಿಯುಕ್ತಿಗೊಳಿಸಬೇಕು ಎಂದು ಶಾಸಕ ಕುಮಾರಸ್ವಾಮಿ ಪಶ್ಚಿಮ ವಲಯ ಐಜಿಪಿಗೆ ಪತ್ರ ಬರೆದಿದ್ದಾರೆ.

‘ಸರಿಪಡಿಸುವುದಾಗಿ ಗೃಹಸಚಿವ ಭರವಸೆ ನೀಡಿದ್ದಾರೆ’
ಐಜಿಪಿಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ‘ವಿಷಯವನ್ನು ಗೃಹಸಚಿವರ ಗಮನಕ್ಕೆ ತಂದಿದ್ದೇನೆ. ಎಲ್ಲ ಸರಿಪಡಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಕಾದು ನೋಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.