ಮೂಡಿಗೆರೆ: ‘ಗ್ಯಾರಂಟಿ ಯೋಜನೆಗಳ ಜತೆ ನಡೆಯುತ್ತಿರುವ ಅಭೂತಪೂರ್ವ ಅಭಿವೃದ್ಧಿ ಸಹಿಸದ ವಿಪಕ್ಷಗಳು ನಮ್ಮ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಇದಕ್ಕೆ ಸಾರ್ವಜನಿಕರು ಸೊಪ್ಪು ಹಾಕುತ್ತಿಲ್ಲ’ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಪಟ್ಟಣದ ಸುಶಾಂತ್ ನಗರದಲ್ಲಿ ಶಾಸಕರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ‘ನಷ್ಟದಲ್ಲಿದ್ದ ಸಾರಿಗೆ ಸಂಸ್ಥೆ ಮಹಿಳೆಯರ ಉಚಿತ ಪ್ರಯಾಣದಿಂದಾಗಿ ಲಾಭದಲ್ಲಿದೆ. ಪ್ರೇಕ್ಷಣೀಯ ಸ್ಥಳದಲ್ಲಿ ಜನ ಸೇರುತ್ತಿರುವುದರಿಂದ ಪ್ರವಾಸೋದ್ಯಮಕ್ಕೆ ಒತ್ತು ನೀಡಿದಂತಾಗಿದ್ದು, ದೇವಸ್ಥಾನಗಳ ಹುಂಡಿ ಭರ್ತಿಯಾಗಿದೆ. ಜಿಎಸ್‍ಟಿ ಸಂಗ್ರಹ ಮತ್ತು ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ತನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಜೋರಾಗಿ ನಡೆಯುತ್ತಿದೆ’ ಎಂದು ಹೇಳಿದರು.
ಕಾವೇರಿ ಜಲ ನಿಗಮದಿಂದ 8, ವಿಶ್ವೇಶ್ವರಯ್ಯ ಜಲ ನಿಗಮದಿಂದ 5, ಲೋಕೋಪಯೋಗಿ ಇಲಾಖೆಯಿಂದ 10 ಒಟ್ಟು 15 ಸೇತುವೆ, 8 ಕಿರು ಸೇತುವೆ ಮಂಜೂರಾಗಿದೆ. ಕಳಸ-ಹೊರನಾಡು ಸಂಪರ್ಕ ರಸ್ತೆಯ ಹೆಬ್ಬಾಳ ಸೇತುವೆ, ಬೊಮ್ಮೇನಹಳ್ಳಿ, ಸಿಗಡಿಮೂಲೆ ಸೇರಿ 4 ಕಡೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಉಳಿದ ಕಡೆ ಸೇತುವೆ ಮತ್ತು ಕಿರುಸೇತುವೆ ನಿರ್ಮಾಣ ಕಾಮಗಾರಿ ಸದ್ಯದಲ್ಲೆ ಆರಂಭವಾಗಲಿದೆ ಎಂದರು.
ಅಮೃತ್ ಯೋಜನೆಯಡಿ ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರೊದಗಿಸಲು ₹19 ಕೋಟಿ ಮಂಜೂರಾಗಿದ್ದು, ಪಟ್ಟಣದ ದೊಡ್ಡಿಬೀದಿಯಲ್ಲಿ 15 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಪಟ್ಟಣದ ಬಡಾವಣೆಗಳಿಗೆ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು, ಗ್ರಾಮೀಣ ಭಾಗದ ಕುಡಿಯುವ ನೀರಿನ ಯೋಜನೆಗೆ ₹36 ಕೋಟಿ ಮಂಜೂರಾಗಿದೆ. ಸರ್ಕಾರಿ ಶಾಲೆಗಳಿಗೆ ಶೌಚಗೃಹ ನಿರ್ಮಾಣ ಕಾರ್ಯ ನಡೆಯುತ್ತಿದೆ. 70 ದೇವಸ್ಥಾನಗಳ ಅಭಿವೃದ್ಧಿಗೆ ₹3 ಕೋಟಿ ಅನುದಾನ ವಿನಿಯೋಗಿಸಲಾಗಿದೆ. ಇನ್ನೂ ₹3 ಕೋಟಿ ಅನುದಾನದಲ್ಲಿ 34 ಕಡೆ ಸಮುದಾಯ ಭವನ ನಿರ್ಮಿಸಲಾಗುವುದು’ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.
ಪಟ್ಟಣದಲ್ಲಿಗ ಸುಸಜ್ಜಿತವಾದ ಕಚೇರಿ ಆರಂಭಿಸಿದ್ದೇವೆ. ತಾಲ್ಲೂಕಿನಾದ್ಯಂತ ನೂರಾರು ಜನರು ಸಂಕಷ್ಟ ಹೇಳಿಕೊಂಡು ಬರುವವರ ಕಷ್ಟಗಳಿಗೆ ಸ್ಪಂದಿಸಬೇಕಾಗಿದೆ. ನಾನು ಕ್ಷೇತ್ರ ಪ್ರವಾಸದಲ್ಲಿದ್ದಾಗ ಆಪ್ತ ಸಹಾಯಕರ ಬಳಿ ಅಹವಾಲು ಸಲ್ಲಿಸಬಹುದುದು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾರಂಜನ್ ಅಜಿತ್ ಕುಮಾರ್, ಉಪಾಧ್ಯಕ್ಷ ಹೊಸಕೆರೆ ರಮೇಶ್, ಸದಸ್ಯರಾದ ಕೆ.ವೆಂಕಟೇಶ್, ನಾಮನಿರ್ದೇಶಿತ ಸದಸ್ಯರಾದ ಆಜ್ಮಲ್, ಸಿ.ಬಿ.ಶಂಕರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಜಿ.ಸುಬ್ರಾಯಗೌಡ, ಸದಸ್ಯ ರಫೀಕ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರ್, ಮುಖಂಡರಾದ ವಿನಯಕುಮಾರ್, ಎ.ಎಂ.ಶರೀಫ್, ದೀಕ್ಷಿತ್ ಕಣಚೂರು, ಕುನ್ನಳ್ಳಿ ರವಿ, ಸುರೇಂದ್ರ ಉಗ್ಗೇಹಳ್ಳಿ ಇದ್ದರು.
Highlights - ಅಮೃತ್ ಯೋಜನೆಯಡಿ ₹19 ಕೋಟಿ ಮಂಜೂರು ಗ್ರಾಮೀಣ ಭಾಗದ ಕುಡಿಯುವ ನೀರಿನ ಯೋಜನೆಗೆ ₹36 ಕೋಟಿ ಮಂಜೂರು 70 ದೇವಸ್ಥಾನಗಳ ಅಭಿವೃದ್ಧಿಗೆ ₹3 ಕೋಟಿ ಅನುದಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.