ADVERTISEMENT

ಮೂಡಿಗೆರೆ: ಮಳೆ ಸ್ವಲ್ಪ ಇಳಿಮುಖ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 14:25 IST
Last Updated 20 ಜುಲೈ 2024, 14:25 IST
ಮೂಡಿಗೆರೆ ತಾಲ್ಲೂಕಿನ ಕನ್ನಾಫುರ ಗ್ರಾಮದ ಯಶೋದಾ ಎಂಬುವವರ ಮನೆಯ ಮೇಲೆ ಮರಬಿದ್ದು ಹಾನಿ ಉಂಟಾಗಿದೆ
ಮೂಡಿಗೆರೆ ತಾಲ್ಲೂಕಿನ ಕನ್ನಾಫುರ ಗ್ರಾಮದ ಯಶೋದಾ ಎಂಬುವವರ ಮನೆಯ ಮೇಲೆ ಮರಬಿದ್ದು ಹಾನಿ ಉಂಟಾಗಿದೆ   

ಮೂಡಿಗೆರೆ: ತಾಲ್ಲೂಕಿನಾದ್ಯಂತ ಆರು ದಿನಗಳಿಂದ ಸುರಿಯುತ್ತಿದ್ದ ಮಳೆಯು ಶನಿವಾರ ಮಧ್ಯಾಹ್ನದ ಬಳಿಕ ಸ್ವಲ್ಪ ಇಳಿಮುಖವಾಗಿತ್ತು.

ಶುಕ್ರವಾರ ತಡರಾತ್ರಿಯಿಂದಲೂ ಧಾರಾಕಾರವಾಗಿಯೇ ಸುರಿದ ಮಳೆಯು, ಶನಿವಾರ ಬೆಳಿಗ್ಗೆ 11ರವರೆಗೂ ನಿರಂತರವಾಗಿ ಸುರಿದು ಬಳಿಕ ಬಿಡುವು ನೀಡಿತು. ಸಂಜೆ 4ರ ಸುಮಾರಿಗೆ ಪ್ರಾರಂಭವಾದ ಮಳೆ ಒಂದು ಗಂಟೆಗಳ ಕಾಲ ಸುರಿದು ಬಳಿಕ ಪುನಃ ಬಿಡುವು ನೀಡಿತು.

ಮಳೆನೀರಿನಲ್ಲಿ ಮುಳುಗಿದ್ದ ಶುಂಠಿ ಗದ್ದೆಗಳು, ಭತ್ತದ ಸಸಿಮಡಿಗಳು ಶನಿವಾರ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದು, ಕಾಫಿ, ಅಡಿಕೆ ತೋಟಗಳಲ್ಲೂ ನೀರು ಕಡಿಮೆಯಾಗಿತ್ತು. ಹೇಮಾವತಿ, ಜಪಾವತಿ, ಚಿಕ್ಕಳ್ಳ, ದೊಡ್ಡಳ್ಳಗಳಲ್ಲಿ ನೀರಿನ ಪ್ರಮಾಣ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.

ADVERTISEMENT

ಶುಕ್ರವಾರ ರಾತ್ರಿ ಸುರಿದ ಮಳೆಗೆ ಹಲವು ಮನೆಗಳು ನೆಲಕಚ್ಚಿದ್ದು, ಕಣಚೂರು ಗ್ರಾಮದ ಮಂಜುನಾಥ್, ಜಯಪ್ರಕಾಶ್, ಶೈಲಾ ಎಂಬುವವರ ಮನೆಗಳು ಹಾನಿಯಾಗಿವೆ. ಬಲಿಗೆ ಗ್ರಾಮದ ರಾಮು, ಜಾವಳಿ ಗ್ರಾಮದ ಅಕ್ಕಮ್ಮ, ಕನ್ನಾಪುರದ ಯಶೋದಾ, ಹಳೇಕೆರೆಯ ಜಗನ್ನಾಥ, ಹಳೇಕೋಟೆ ಕಾರ್ಮಕ್ಕಿಯ ಸುಬ್ಬಯ್ಯ ಎಂಬುವವರ ಮನೆಗಳಿಗೂ ಹಾನಿಯಾಗಿದ್ದು, ಶನಿವಾರ ವಿವಿಧ ಇಲಾಖೆಗಳ ಅಧಿಕಾರಿಗಳು, ವಿಪ್ಪತ್ತು ನಿರ್ವಹಣಾ ತಂಡದ ನೋಡೆಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆಯಿಂದಾಗಿ ತಾಲ್ಲೂಕಿನಲ್ಲಿ 140ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು, 20ಕ್ಕೂ ಅಧಿಕ ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. ಮಳೆಯ ನಡುವೆಯೇ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬಗಳ ದುರಸ್ತಿಯಲ್ಲಿ ತೊಡಗಿದ್ದು, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಇಲ್ಲದೇ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ.

ಕಳೆದ 24ಗಂಟೆಗಳಲ್ಲಿ ಕೊಟ್ಟಿಗೆಹಾರ 11.1 ಸೆಂ.ಮೀ, ಹೊಸ್ಕೆರೆ 10.4 ಸೆಂ.ಮೀ, ಬಿಳ್ಳೂರು 11 ಸೆಂ.ಮೀ, ಮೂಡಿಗೆರೆ 4.5 ಸೆಂ.ಮೀ, ಗೋಣಿಬೀಡು 5.1 ಸೆಂ.ಮೀ ಹಾಗೂ ಜಾವಳಿಯಲ್ಲಿ 6.7 ಸೆಂ.ಮೀನಷ್ಟು ಮಳೆಯಾಗಿದೆ.

ಮೂಡಿಗೆರೆ ತಾಲ್ಲೂಕಿನ ಕಣಚೂರು ಗ್ರಾಮದ ಶೈಲಾ ಎಂಬುವವರ ಮನೆಯು ಮಳೆಯಿಂದ ಸಂಪೂರ್ಣವಾಗಿ ಕುಸಿದಿದೆ
ಮೂಡಿಗೆರೆ ತಾಲ್ಲೂಕಿನ ಹಳೆಕೋಟೆ ಕಾರ್ಮಕ್ಕಿ ಗ್ರಾಮದ ಸುಬ್ಬಯ್ಯ ಎಂಬುವವರ ಮನೆ ಕುಸಿದು ಹಾನಿಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.