ಚಿಕ್ಕಮಗಳೂರು: ಹಿರೇಮಗಳೂರಿನ ಕೋದಂಡ ರಾಮಚಂದ್ರ ದೇವಸ್ಥಾನದ ಅರ್ಚಕ ಹಿರೇಮಗಳೂರು ಕಣ್ಣನ್ ಅವರಿಗೆ ಹೆಚ್ಚುವರಿ ₹4.74 ಲಕ್ಷ ಹಿಂದಿರುಗಿಸುವಂತೆ ನೀಡಿದ್ದ ನೋಟಿಸ್ ಅನ್ನು ಮುಜರಾಯಿ ಇಲಾಖೆ ವಾಪಾಸ್ ಪಡೆದಿದೆ.
ತಿಂಗಳಿಗೆ ₹2 ಸಾವಿರ ತಸ್ತೀಕ್ ಪಾವತಿಸುವ ಬದಲು, ₹7,500 ರಂತೆ ಒಂಬತ್ತು ವರ್ಷ ಪಾವತಿಸಿದ್ದ ಮುಜರಾಯಿ ಇಲಾಖೆ, ಹೆಚ್ಚುವರಿ ₹4.74 ಲಕ್ಷ ಹಿಂದಿರುಗಿಸುವಂತೆ ಕಣ್ಣನ್ ಅವರಿಗೆ ನೋಟಿಸ್ ನೀಡಿತ್ತು.
‘ಹೆಚ್ಚುವರಿಯಾಗಿ ಪಾವತಿಸಲಾದ ₹4.74 ಲಕ್ಷ ದೇವಾಲಯದ ನಿಧಿಗೆ ಮರು ಪಾವತಿಸುವಂತೆ ಹಿರೇಮಗಳೂರು ಕಣ್ಣನ್ ಅವರಿಗೆ ತಿಳಿವಳಿಕೆ ಪತ್ರ ನೀಡಲಾಗಿತ್ತು. ಇದೀಗ ನೋಟಿಸ್ ಅನ್ನು ವಾಪಾಸ್ ಪಡೆದಿದ್ದು, ತಪ್ಪಾಗಿ ಪಾವತಿ ಮಾಡಿರುವ ತಹಶೀಲ್ದಾರ್ ಹಾಗೂ ಸಿಬ್ಬಂದಿಯ (ಆ ಸಮಯದಲ್ಲಿ ಕೆಲಸ ಮಾಡುತ್ತಿದ್ದವರು) ವಿರುದ್ಧ ವಿಚಾರಣೆ ನಡೆಸಿ ವಸೂಲಿ ಮಾಡಿ ಜಮಾ ಮಾಡಲು ಸೂಚಿಸಿಲಾಗಿದೆ’ ಎಂದು ಮುಜರಾಯಿ ಇಲಾಖೆ ತಿಳಿಸಿದೆ.
ಏನಿದು ಘಟನೆ?
2013–14ನೇ ಸಾಲಿನಿಂದ 2016–17ನೇ ಸಾಲಿನ ತನಕ ತಿಂಗಳಿಗೆ ₹2 ಸಾವಿರದಂತೆ ವರ್ಷಕ್ಕೆ ₹24 ಸಾವಿರ ಪಾವತಿಸಬೇಕಿತ್ತು. 2017–18ನೇ ಸಾಲಿನಿಂದ 2021–22ನೇ ಸಾಲಿನ ತನಕ ತಿಂಗಳಿಗೆ ₹4 ಸಾವಿರದಂತೆ ವರ್ಷಕ್ಕೆ ₹48 ಸಾವಿರ ಪಾವತಿಸಬೇಕಿತ್ತು. ಆದರೆ, ವರ್ಷಕ್ಕೆ ₹90 ಸಾವಿರದಂತೆ ಒಂಬತ್ತು ವರ್ಷಗಳಿಗೆ ಒಟ್ಟು ₹8.10 ಲಕ್ಷ ಪಾವತಿಸಲಾಗಿದೆ. ಹೆಚ್ಚುವರಿಯಾಗಿ ತಮ್ಮ ಖಾತೆಗೆ ಜಮೆ ಆಗಿರುವ ₹4.70 ಲಕ್ಷ ಹಿಂದಿರುಗಿಸಬೇಕು ಎಂದು ತಿಳಿವಳಿಕೆ ಪತ್ರದಲ್ಲಿ ತಹಶೀಲ್ದಾರ್ ವಿವರಿಸಿದ್ದರು.
ಕೋದಂಡ ರಾಮಚಂದ್ರ ದೇಗುಲ ‘ಸಿ’ ವರ್ಗಕ್ಕೆ ಸೇರಿದ್ದು, ಒಂಬತ್ತು ವರ್ಷಗಳ ಅವಧಿಯಲ್ಲಿ ಹುಂಡಿ ಹಣ ₹5.98 ಲಕ್ಷ ಸಂಗ್ರಹವಾಗಿದೆ. ಈ ಅವಧಿಯಲ್ಲಿ ವಿದ್ಯುತ್ ಶುಲ್ಕ, ರಥೋತ್ಸವ ಖರ್ಚು, ಅರ್ಚಕರ ವೇತನ ಸೇರಿ ಒಟ್ಟಾರೆ ₹12.96 ಲಕ್ಷ ಖರ್ಚಾಗಿದೆ ಎಂಬುದನ್ನೂ ನೋಟಿಸ್‌ನಲ್ಲಿ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.