ಚಿಕ್ಕಮಗಳೂರು: ಹಿರೇಮಗಳೂರಿನ ಕೋದಂಡ ರಾಮಚಂದ್ರ ದೇವಸ್ಥಾನದ ಅರ್ಚಕ ಹಿರೇಮಗಳೂರು ಕಣ್ಣನ್ ಅವರಿಗೆ ತಿಂಗಳಿಗೆ ₹2 ಸಾವಿರ ತಸ್ತೀಕ್ ಪಾವತಿಸುವ ಬದಲು, ₹7500 ರಂತೆ ಒಂಬತ್ತು ವರ್ಷ ಪಾವತಿಸಿದ್ದ ಮುಜರಾಯಿ ಇಲಾಖೆ, ಹೆಚ್ಚುವರಿ ₹4.74 ಲಕ್ಷ ಹಿಂದಿರುಗಿಸುವಂತೆ ನೋಟಿಸ್ ನೀಡಿದೆ.
2013–14ನೇ ಸಾಲಿನಿಂದ 2016–17ನೇ ಸಾಲಿನ ತನಕ ತಿಂಗಳಿಗೆ ₹2 ಸಾವಿರದಂತೆ ವರ್ಷಕ್ಕೆ ₹24 ಸಾವಿರ ಪಾವತಿಸಬೇಕಿತ್ತು. 2017–18ನೇ ಸಾಲಿನಿಂದ 2021–22ನೇ ಸಾಲಿನ ತನಕ ತಿಂಗಳಿಗೆ ₹4 ಸಾವಿರದಂತೆ ವರ್ಷಕ್ಕೆ ₹48 ಸಾವಿರ ಪಾವತಿಸಬೇಕಿತ್ತು. ಆದರೆ, ವರ್ಷಕ್ಕೆ ₹90 ಸಾವಿರದಂತೆ ಒಂಬತ್ತು ವರ್ಷಗಳಿಗೆ ಒಟ್ಟು ₹8.10 ಲಕ್ಷ ಪಾವತಿಸಲಾಗಿದೆ. ಹೆಚ್ಚುವರಿಯಾಗಿ ತಮ್ಮ ಖಾತೆಗೆ ಜಮೆ ಆಗಿರುವ ₹4.74 ಲಕ್ಷ ಹಿಂದಿರುಗಿಸಬೇಕು ಎಂದು ನೋಟಿಸ್‌ನಲ್ಲಿ ತಹಶೀಲ್ದಾರ್ ವಿವರಿಸಿದ್ದಾರೆ.
ಕೋದಂಡ ರಾಮಚಂದ್ರ ದೇಗುಲ ‘ಸಿ’ ವರ್ಗಕ್ಕೆ ಸೇರಿದ್ದು, ಒಂಬತ್ತು ವರ್ಷಗಳ ಅವಧಿಯಲ್ಲಿ ಹುಂಡಿ ಹಣ ₹5.98 ಲಕ್ಷ ಸಂಗ್ರಹವಾಗಿದೆ. ಈ ಅವಧಿಯಲ್ಲಿ ವಿದ್ಯುತ್ ಶುಲ್ಕ, ರಥೋತ್ಸವ ಖರ್ಚು, ಅರ್ಚಕರ ವೇತನ ಸೇರಿ ಒಟ್ಟಾರೆ ₹12.96 ಲಕ್ಷ ವೆಚ್ಚವಾಗಿದೆ ಎಂಬುದನ್ನೂ ನೋಟಿಸ್‌ನಲ್ಲಿ ದಾಖಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರೇಮಗಳೂರು ಕಣ್ಣನ್ ಅವರು, ‘ದೇವಸ್ಥಾನದ ಆದಾಯ ಕಡಿಮೆ ಇದೆ ಎಂಬ ಕಾರಣಕ್ಕೆ ಈ ಹಿಂದೆ ಪಾವತಿಯಾಗಿರುವ ತಸ್ತೀಕ್ ಮೊತ್ತವನ್ನು ಹಿಂದಿರುಗಿಸುವಂತೆ ನೋಟಿಸ್ ನೀಡಿದ್ದಾರೆ. ಆದಾಯ ಕಡಿಮೆ ಇದ್ದ ಕಾರಣಕ್ಕೆ ಹಣ ವಾಪಸ್ ಕೇಳಿದರೆ ಅರ್ಚಕರ ಮನಸ್ಥಿತಿ ಏನಾಗಲಿದೆ’ ಎಂದು ಪ್ರಶ್ನಿಸಿದರು.
ನೋಟಿಸ್ ಹಿಂಪಡೆಯಲು ಸೂಚನೆ
ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ‘ತಪ್ಪಾಗಿ ಹೆಚ್ಚುವರಿ ಮೊತ್ತ ಪಾವತಿ ಮಾಡಿದ್ದರೆ ಅಂದಿನ ತಹಶೀಲ್ದಾರ್ ಮತ್ತು ಸಿಬ್ಬಂದಿ ವಿರುದ್ಧ ವಿಚಾರಣೆ ಆರಂಭಿಸಬೇಕು. ಅವರಿಂದಲೇ ಈ ಹಣ ವಸೂಲಿ ಮಾಡಬೇಕು’ ಎಂದು ಜಿಲ್ಲಾಧಿಕಾರಿಗೆ ಕಳುಹಿಸಿರುವ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ತಸ್ತೀಕ್ ಪಾವತಿ ಸ್ಥಗಿತ
ಹಿರೇಮಗಳೂರು ಕಣ್ಣನ್ ಅವರಿಗೆ ಒಂದೂವರೆ ವರ್ಷದಿಂದ ತಸ್ತೀಕ್ ಪಾವತಿಯನ್ನು ಸ್ಥಗಿತಗೊಳಿಸಲಾಗಿದೆ.
‘ಸಿ’ ವರ್ಗದ ದೇಗುಲ ಆಗಿರುವುದರಿಂದ ತಿಂಗಳಿಗೆ ತಸ್ತೀಕ್ ಮೊತ್ತ ₹2 ಸಾವಿರ ಪಾವತಿಸಬೇಕಿತ್ತು. ಅಂದಿನ ಸಿಬ್ಬಂದಿಯ ಕಣ್ತಪ್ಪಿನಿಂದ ತಿಂಗಳಿಗೆ ₹7,500 ಪಾವತಿಯಾಗಿದೆ. ನಂತರವೂ ಅದನ್ನೇ ಮುಂದುವರಿಸಲಾಗಿದೆ. 2021–22ನೇ ಸಾಲಿನಲ್ಲಿ ಈ ವಿಷಯ ಗೊತ್ತಾದ ಬಳಿಕ ತಸ್ತೀಕ್ ಪಾವತಿ ಸ್ಥಗಿತಗೊಳಿಸಲಾಗಿದೆ. ಈ ಹಿಂದೆ ಪಾವತಿಯಾಗಿರುವ ಹೆಚ್ಚುವರಿ ಮೊತ್ತಕ್ಕೆ ಜಮೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.