ADVERTISEMENT

ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಘೋಷಣೆ ಕರಡು ಪ್ರಸ್ತಾವ

ಸಂಪುಟದ ಅನುಮೋದನೆಗೆ ಮಂಡಿಸಲು ತೀರ್ಮಾನ

ಬಿ.ಜೆ.ಧನ್ಯಪ್ರಸಾದ್
Published 26 ಜನವರಿ 2021, 2:52 IST
Last Updated 26 ಜನವರಿ 2021, 2:52 IST
ಮುಳ್ಳಯ್ಯನಗಿರಿ ಶ್ರೇಣಿ ಪ್ರದೇಶ. ಸಂಗ್ರಹ ಚಿತ್ರ
ಮುಳ್ಳಯ್ಯನಗಿರಿ ಶ್ರೇಣಿ ಪ್ರದೇಶ. ಸಂಗ್ರಹ ಚಿತ್ರ   

ಚಿಕ್ಕಮಗಳೂರು: ರಾಜ್ಯದ ಅತಿ ಎತ್ತರದ ಶಿಖರ ಪ್ರದೇಶವಾದ ಮುಳ್ಳಯ್ಯನಗಿರಿ ಸುತ್ತಲಿನ ಒಟ್ಟು 15,897 ಎಕರೆಯನ್ನು ಸಂರಕ್ಷಿತ ಮೀಸಲು ಪ್ರದೇಶವಾಗಿ ಘೋಷಿಸಲು ಪ್ರಸ್ತಾವವನ್ನು ಸಚಿವ ಸಂಪುಟದ ಅನುಮೋದನೆಗೆ ಮಂಡಿಸಲು ಸೂಚಿಸಲಾಗಿದೆ.

ಬೆಂಗಳೂರಿನಲ್ಲಿ ಜ.19ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ 15ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ. ಸಂರಕ್ಷಿತ ಮೀಸಲು ಪ್ರದೇಶ ಘೋಷಿಸಲು ಕುರಿತು ಕರಡು ಅಧಿಸೂಚನೆ ತಯಾರಿಸಲಾಗಿದೆ. ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಅಧಿಸೂಚನೆ ಪ್ರಕಟಿಸಲು ನಿರ್ಧರಿಸಲಾಗಿದೆ.

ಈ ಮೊದಲು ಗುರುತಿಸಿದ್ದ ವ್ಯಾಪ್ತಿಯಲ್ಲಿ 3,857 ಎಕರೆಯನ್ನು ಸಂರಕ್ಷಿತ ಪ್ರದೇಶದಿಂದ ಹೊರಗಿಡಲಾಗಿದೆ. ‘ನಮೂನೆ–57’, ‘ಸಾರ್ವಜನಿಕ ರಸ್ತೆ’ ಮೊದಲಾದ ಉದ್ದೇಶಕ್ಕೆ ಜಾಗ ಬಳಕೆಯಾಗಲಿದೆ ಎಂದು ವಿವರಿಸಲಾಗಿದೆ.

ADVERTISEMENT

ಇದು ಪರಿಸರ ಸೂಕ್ಷ್ಮ ಜೀವ ವೈವಿಧ್ಯದ ಪ್ರದೇಶ. ಶೂಲಾ ಹುಲ್ಲುಗಾವಲು ಇಲ್ಲಿನ ವೈಶಿಷ್ಟ್ಯ. ವೇದಾವತಿ, ಯಗಚಿ, ಮೊದಲಾದ ನದಿಗಳ ಉಗಮ ಪ್ರದೇಶ. ವನ್ಯಜೀವಿಗಳ ಆವಾಸ ತಾಣ. ಮೀಸಲು ಪ್ರದೇಶವಾಗಿ ಘೋಷಿಸುವಂತೆ ಸ್ವಯಂಸೇವಾ ಸಂಸ್ಥೆಗಳು, ಸ್ಥಳೀಯರು ಕೋರಿದ್ದಾರೆ ಎಂದು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತಾವಕ್ಕೆ ಜನಪ್ರತಿನಿಧಿಗಳು ಒಪ್ಪಿಗೆ ಪತ್ರ ನೀಡಿದ್ದಾರೆ.

‘ವಿನಾಶ ಅಂಚಿನಲ್ಲಿರುವ ಹಲವಾರು ಪಕ್ಷಿಗಳು, ಅಪರೂಪದ ಪ್ರಭೇದದ ಕಪ್ಪೆಗಳು, ಸರಿಸೃಪಗಳು ಈ ಗಿರಿಶ್ರೇಣಿಯಲ್ಲಿ ಇವೆ. ಮುಳ್ಳಯ್ಯನಗಿರಿ ಭಾಗವನ್ನು ಸಂರಕ್ಷಿತ ಮೀಸಲು ಎಂದು ಘೋಷಿಸುವುದು ಒಳ್ಳೆಯದು’ ಎಂದು ಗೌರವ ವನ್ಯಜೀವಿ ಪರಿಪಾಲಕ ಜಿ.ವೀರೇಶ್‌ ಹೇಳುತ್ತಾರೆ.

2019ರ ಜ.9ರಂದು ನಡೆದ 11ನೇ ವನ್ಯಜೀವಿ ಮಂಡಳಿ ಸಭೆಯು ಪ್ರಸ್ತಾವಕ್ಕೆ ತಾತ್ವಿಕ ಒಪ್ಪಿಗೆ ನೀಡಿತ್ತು. ಈ ಪ್ರಸ್ತಾವದಲ್ಲಿ 14 ಸಾವಿರ ಎಕರೆ ಎಂದು ಪ್ರಸ್ತಾಪಿಸಲಾಗಿತ್ತು.

‘ಕಂದಾಯ ಜಾಗ ಯಥಾವತ್ತಾಗಿ ಹಾಗೆಯೇ ಉಳಿಯುತ್ತದೆ. ಜನರ ಹಕ್ಕುಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಗಿರಿಶ್ರೇಣಿಯ ವೈಶಿಷ್ಟ್ಯಗಳಾದ ಶೋಲಾ ಕಾಡು, ನೀಲ ಕುರಂಜಿಯಂಥ ‍ಅಪರೂಪದ ಸಸ್ಯಗಳು, ಜಲಮೂಲಗಳು, ವನ್ಯಜೀವಿ ಸಂಕುಲ ಗಿರಿಶ್ರೇಣಿಯ ಸೊಬಗು ರಕ್ಷಣೆಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.