ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆ ನಿಯಂತ್ರಣಕ್ಕೆ ಅಲ್ಲಂಪುರ ಬಳಿ ಪಾರ್ಕಿಂಗ್ ತಾಣ ನಿರ್ಮಾಣಕ್ಕೆ ಕೊನೆಗೂ ಜಾಗವನ್ನು ಜಿಲ್ಲಾಡಳಿತ ಗುರುತು ಮಾಡಿದೆ.
ಗಿರಿಶ್ರೇಣಿಯಲ್ಲಿ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಾರಾಂತ್ಯದಲ್ಲಿ ಸಾವಿರಾರು ವಾಹನಗಳು ಗಿರಿ ಏರುತ್ತಿದ್ದು, ವಾಹನ ದಟ್ಟಣೆ ಉಂಟಾಗುತ್ತಿದೆ. ದಟ್ಟಣೆ ನಡುವೆ ಸಿಲುಕಿ ಪ್ರವಾಸಿಗರು ಪರದಾಡುತ್ತಿದ್ದು, ನಿಯಂತ್ರಿಸುವ ಕೆಲಸ ಪೊಲೀಸರನ್ನೂ ಹೈರಾಣಾಗಿಸಿದೆ.
ಮಳೆಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದ್ದು, ವಾಹನ ದಟ್ಟಣೆ ನಿರ್ವಹಣೆ ಇನ್ನಷ್ಟು ಕಷ್ಟವಾಗಲಿದೆ. ಆದ್ದರಿಂದ ಖಾಸಗಿ ವಾಹನಗಳು ಗಿರಿ ಏರುವುದನ್ನು ನಿಯಂತ್ರಿಸಲು ಕೆಳ ಭಾಗದಲ್ಲೇ ವಾಹನ ನಿಲುಗಡೆ ತಾಣ ನಿರ್ಮಿಸುವ ಪ್ರಸ್ತಾಪ ಹತ್ತು ವರ್ಷಗಳಿಂದ ಜಿಲ್ಲಾಡಳಿತದ ಕಡತಗಳಲ್ಲೇ ಉಳಿದುಕೊಂಡಿದೆ.
ಗಿರಿಭಾಗಕ್ಕೆ ಎಲ್ಲಾ ವಾಹನಗಳು ಒಟ್ಟಿಗೆ ಹೋಗಲು ಅವಕಾಶ ನೀಡದೆ ನಿರ್ದಿಷ್ಟ ಸಂಖ್ಯೆ ನಿಗದಿಪಡಿಸಿ ಅವು ವಾಪಸ್ ಬಂದ ಬಳಿಕ ಬೇರೆ ವಾಹನಗಳನ್ನು ಬಿಡುವುದು ಯೋಜನೆಯ ಉದ್ದೇಶ. ಆದರೆ, ಅಲ್ಲಿಯ ತನಕ ಕಾಯಲು ವಾಹನ ನಿಲುಗಡೆಗೆ ಕೆಳಭಾಗದಲ್ಲಿ ಬೇರೆ ಜಾಗ ಇಲ್ಲ. ಅಲ್ಲಂಪುರ ಸಮೀಪ ಎರಡು ಕಡೆ ವಾಹನ ನಿಲುಗಡೆಯ ತಾಣ ನಿರ್ಮಿಸಲು ಜಾಗವನ್ನೂ ಗುರುತು ಮಾಡಿತ್ತು. ಜಾಗ ಪಡೆಯಲು ಒಂದಿಲ್ಲೊಂದು ತೊಡಕು ಎದುರಾಗುತ್ತಲೇ ಇದ್ದು, ಯೋಜನೆ ನನೆಗುದಿಗೆ ಬಿದ್ದಿದೆ.
ಎರಡೂ ಜಾಗ ಸರ್ಕಾರಿ ಶಾಲೆಗೆ ಸಂಬಂಧಿಸಿದ್ದಾಗಿದ್ದು, ಅದನ್ನು ಕೃಷಿಗೆ ನೀಡಿ ಅದರಿಂದ ಶಾಲೆಗೆ ವರಮಾನ ಬರುವಂತೆ ಮಾಡಲಾಗಿದೆ. ಯೋಜನೆ ಅನುಷ್ಠಾನಕ್ಕೆ ಮುಂದಾಗಲೆಲ್ಲಾ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ.
ಈ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಈಗ ಹೊಸದೊಂದು ಸೂತ್ರ ಸಿದ್ಧಪಡಿಸಿದ್ದಾರೆ. ಸಮೀಪದಲ್ಲೇ ಇರುವ ಬೇರೊಂದು ಸರ್ಕಾರಿ ಜಾಗವನ್ನು ಗುರುತಿಸುವ ಪ್ರಯತ್ನ ಮಾಡಿದೆ. ಗಾಲ್ಫ್ ಕ್ಲಬ್ ರಸ್ತೆಯಲ್ಲಿರುವ ಕಂದಾಯ ಜಾಗವನ್ನು ಗುರುತು ಮಾಡಿದೆ. 12ರಿಂದ 15 ಎಕರೆ ಜಾಗ ಸಿಗಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ಗಾಲ್ಫ್ ಕ್ಲಬ್ ರಸ್ತೆಯಲ್ಲಿ ಸಾಗಿದರೆ ಬಲ ಭಾಗಕ್ಕೆ ಕರಡಿಹಳ್ಳಿ ಟ್ರೀ ಪಾರ್ಕ್ ಇದ್ದು, ಕೊನೆಯಲ್ಲಿ ಬಲಕ್ಕೆ ತಿರುವು ಪಡೆದರೆ ಗಾಲ್ಫ್ ಕ್ಲಬ್‌ಗೆ ರಸ್ತೆ ಸಾಗುತ್ತದೆ. ತಿರುವಿನಲ್ಲಿ ಎಡಭಾಗಕ್ಕೆ ನೀಲಗಿರಿ ಮರಗಳಿರುವ ಜಾಗ ಪಾರ್ಕಿಂಗ್ ತಾಣಕ್ಕೆ ಸೂಕ್ತ ಎಂದು ಅಂದಾಜಿಸಲಾಗಿದೆ. ಕಂದಾಯ ಜಾಗ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಲ್ಲಿಂದ ಮುಳ್ಳಯ್ಯನಗಿರಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮತ್ತೊಂದು ಮಣ್ಣಿನ ರಸ್ತೆಯಿದ್ದು, ಅದನ್ನು ಅಭಿವೃದ್ಧಿಪಡಿಸಿದರೆ ಹೆಚ್ಚು ಅನುಕೂಲ ಆಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಪಾರ್ಕಿಂಗ್ ತಾಣ 5 ಎಕರೆ ಬಳಸಿಕೊಂಡರೆ, ಪ್ರಯಾಣಿಕರಿಗೆ ಬೇಕಿರುವ ಮೂಲಸೌಕರ್ಯ ಒದಗಿಸಲು ಸಾಕಷ್ಟು ಜಾಗ ಸಿಗಲಿದೆ. ಖಾಸಗಿ ಸಹಭಾಗಿತ್ವದಲ್ಲಿ ಪಾರ್ಕಿಂಗ್ ತಾಣ ಅಭಿವೃದ್ಧಿಸುವ ಯೋಜನೆ ಸಿದ್ಧವಿದೆ. ಜಾಗವನ್ನು ಈ ಯೋಜನೆಗೆ ಮೀಸಲಿರಿಸಿದರೆ ಉಳಿದ ಕೆಲಸ ತ್ವರಿತವಾಗಿ ಆಗಲಿದೆ ಎಂದು ವಿವರಿಸಿದರು.
ಗಿರಿಭಾಗದಲ್ಲಿ ದಟ್ಟಣೆ ಕಡಿಮೆ ಮಾಡಲು ಪಾರ್ಕಿಂಗ್ ತಾಣ ನಿರ್ಮಾಣ ಅನಿವಾರ್ಯ. ಅದಕಕ್ಕೆ ಹೊಸದೊಂದು ಕಂದಾಯ ಜಾಗ ಗುರುತಿಸಲಾಗಿದೆ. ಶೀಘ್ರವೇ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.–ಮೀನಾ ನಾಗರಾಜ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.