ADVERTISEMENT

ಮುತ್ತಿನಕೊಪ್ಪ: ಉದ್ಘಾಟನೆಯಾಗದ ಮೆಸ್ಕಾಂ ಕಟ್ಟಡ

ಕೆ.ವಿ.ನಾಗರಾಜ್
Published 30 ಅಕ್ಟೋಬರ್ 2024, 7:02 IST
Last Updated 30 ಅಕ್ಟೋಬರ್ 2024, 7:02 IST
ನರಸಿಂಹರಾಜಪುರ ತಾಲ್ಲೂಕು ಮುತ್ತಿನಕೊಪ್ಪ ಗ್ರಾಮದಲ್ಲಿ ನಿರ್ಮಿಸಿರುವ ಮೆಸ್ಕಾಂ ಶಾಖಾಧಿಕಾರಿ ಕಚೇರಿ ಕಟ್ಟಡ
ನರಸಿಂಹರಾಜಪುರ ತಾಲ್ಲೂಕು ಮುತ್ತಿನಕೊಪ್ಪ ಗ್ರಾಮದಲ್ಲಿ ನಿರ್ಮಿಸಿರುವ ಮೆಸ್ಕಾಂ ಶಾಖಾಧಿಕಾರಿ ಕಚೇರಿ ಕಟ್ಟಡ   

ಮುತ್ತಿನಕೊಪ್ಪ(ಎನ್.ಆರ್.ಪುರ): ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿ ನಿರ್ಮಿಸಿರುವ ಮೆಸ್ಕಾಂ ಶಾಖಾಧಿಕಾರಿ, ಕಚೇರಿ (ಸೆಕ್ಷನ್ ಆಫೀಸ್) ಕಾರ್ಯ ಮತ್ತು ಪಾಲನೆ ಶಾಖೆ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿ 2004ರಲ್ಲಿ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ನಂತರ ಹಲವಾರು ವರ್ಷಗಳವರೆಗೆ ಇಲ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಇಬ್ಬರು ಪವರ್ ಮ್ಯಾನ್ ಕಾರ್ಯನಿರ್ವಹಿಸುತ್ತಿದ್ದರು. ಮೆಸ್ಕಾಂಗೆ ಸಂಬಂಧಿಸಿದ ಕಚೇರಿ ಇರಲಿಲ್ಲ. 2015ರ ವೇಳೆಗೆ ಮುತ್ತಿನಕೊಪ್ಪಕ್ಕೆ ಹೊಸದಾಗಿ ಸಹಾಯಕ ಎಂಜಿನಿಯರ್ ಹುದ್ದೆಯನ್ನು ಸೃಷ್ಟಿಸಿ ಮೆಸ್ಕಾಂ ಶಾಖಾಧಿಕಾರಿ ಕಚೇರಿಯನ್ನು ಆರಂಭಿಸಲಾಯಿತು. ಸುಮಾರು 9 ವರ್ಷಗಳಿಂದ (ಪ್ರತಿ ತಿಂಗಳು ಬಾಡಿಗೆ ₹5,500) ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಒಂದು ವರ್ಷದ ಹಿಂದೆ ಪವರ್ ಮೆನ್‌ಗಳ ವಸತಿಗೃಹವಿದ್ದ ಜಾಗದಲ್ಲಿ ಶಾಖಾಧಿಕಾರಿ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು. ಸರ್ಕಾರದಿಂದ ಬಿಡುಗಡೆಯಾದ ₹40 ಲಕ್ಷ ಅನುದಾನದಲ್ಲಿ ಕಚೇರಿ ಕಟ್ಟಡ ಪೂರ್ಣಗೊಂಡು ಎರಡು ತಿಂಗಳು ಕಳೆದಿದ್ದರೂ, ಉದ್ಘಾಟಿಸಲು ಮೆಸ್ಕಾಂ ಮೀನಾಮೇಷ ಎಣಿಸುತ್ತಿದೆ. ಸ್ವಂತ ಕಟ್ಟಡ ನಿರ್ಮಾಣವಾಗಿದ್ದರೂ ಅಲ್ಲಿಗೆ ಕಚೇರಿಯನ್ನು ಸ್ಥಳಾಂತರಿಸದಿರುವುದರಿಂದ ಬಾಡಿಗೆ ನಷ್ಟವಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪ. 

ADVERTISEMENT

ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಸಂಪರ್ಕಿಸಿದಾಗ ‘ಕಟ್ಟಡ ಕಾಮಗಾರಿ ಪೂರ್ಣಗೊಂಡಿರುವ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ. ಪೂರ್ಣಗೊಂಡಿದ್ದರೆ ಇಂಧನ ಸಚಿವರ ಗಮನಕ್ಕೆ ತಂದು ಶೀಘ್ರದಲ್ಲಿ ಇದನ್ನು ಉದ್ಘಾಟಿಸಲು ಕ್ರಮಕೈಗೊಳ್ಳಲಾಗುವುದು’ ಎಂದರು.

ಕಟ್ಟಡದ ಕಾಮಗಾರಿಯನ್ನು ಕೈಗೊಂಡಿರುವ ಗುತ್ತಿಗೆದಾರರು ಕಟ್ಟಡವನ್ನು ಇಲಾಖೆಗೆ ಹಸ್ತಾಂತರಿಸಿಲ್ಲ. ಕಟ್ಟಡದ ಒಳಭಾಗದಲ್ಲಿನ ಕಾಮಗಾರಿ ಕೈಗೊಳ್ಳಲಾಗಿದ್ದು, ಇದು ಪೂರ್ಣಗೊಂಡ ನಂತರ ಉದ್ಘಾಟಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮೆಸ್ಕಾಂ ಸಹಾಯಕ ಎಂಜಿನಿಯರ್ ಗೌತಮ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.