ADVERTISEMENT

ನರಸಿಂಹರಾಜಪುರ: ಹೊಸ ಮಾರ್ಗದ ಅಳವಡಿಕೆ ಹೊರೆ

ಕಾಮಗಾರಿಗೆ ಸಾರ್ವಜನಿಕರ ಆಕ್ಷೇಪ, ರಸ್ತೆ ವಿಸ್ತರಣೆ– ಫೀಡರ್ ಕೆಲಸ ಒಟ್ಟಿಗೆ ನಡೆಸಲು ಸಲಹೆ

ಕೆ.ವಿ.ನಾಗರಾಜ್
Published 15 ಆಗಸ್ಟ್ 2024, 8:38 IST
Last Updated 15 ಆಗಸ್ಟ್ 2024, 8:38 IST
ನರಸಿಂಹರಾಜಪುರದಲ್ಲಿ ಫೀಡರ್ ವಿಭಜನೆಗೆ ವಿದ್ಯುತ್ ಮಾರ್ಗ ಅಳವಡಿಕೆ ನಿರ್ಧರಿಸಿರುವ ಪ್ರದೇಶ
ನರಸಿಂಹರಾಜಪುರದಲ್ಲಿ ಫೀಡರ್ ವಿಭಜನೆಗೆ ವಿದ್ಯುತ್ ಮಾರ್ಗ ಅಳವಡಿಕೆ ನಿರ್ಧರಿಸಿರುವ ಪ್ರದೇಶ   

ನರಸಿಂಹರಾಜಪುರ: ಮೆಸ್ಕಾಂನಿಂದ ಪಟ್ಟಣದ ಬಸ್ ನಿಲ್ದಾಣದ ಸಮೀಪದಿಂದ ಲಿಂಗಾಪುರ ಗ್ರಾಮದವರೆಗೆ ಹೊಸದಾಗಿ ಕೈಗೊಳ್ಳಲಿರುವ ಕಾಮಗಾರಿ ಹೊರೆಯಾಗಿ ಪರಿಣಮಿಸಲಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದ ಬಸ್ ನಿಲ್ದಾಣದಿಂದ ಲಿಂಗಾಪುರ ಗ್ರಾಮದ ಬಿಎಸ್ ಎನ್ಎಲ್ ಟವರ್‌ವರೆಗೆ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಎಫ್ 1 ಪಟ್ಟಣದ ಫೀಡರ್‌ನ ವಿಭಜನೆಯ ಕಾಮಗಾರಿಯನ್ನು ₹77 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲು ಮೆಸ್ಕಾಂ ಮುಂದಾಗಿದೆ. ಈ ವ್ಯಾಪ್ತಿಯಲ್ಲಿ ಸುಮಾರು 160 ವಿದ್ಯುತ್ ಕಂಬಗಳು ಇವೆ. ಇದರಲ್ಲಿ ಕೆಲವನ್ನು ತೆಗೆದು ದೊಡ್ಡ ವಿದ್ಯುತ್ ಕಂಬಗಳನ್ನು ಅಳವಡಿಸಿ ಲಿಂಗಾಪುರ, ರಾವೂರು ಮತ್ತಿತರರ ಗ್ರಾಮಗಳ ಹಾಗೂ ಪಟ್ಟಣದ ಫೀಡರ್‌ಗಳನ್ನು ವಿಭಜಿಸುವ ಕಾಮಗಾರಿಯೂ ಒಳಗೊಂಡಿದೆ.

ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಫೀಡರ್ ವಿಭಜಿಸುವ ಕಾಮಗಾರಿಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೂ ಇರುವ ಮುಖ್ಯ ರಸ್ತೆ ಕಿರಿದಾಗಿದೆ. ಒಂದು ವೇಳೆ ದೊಡ್ಡ ಗಾತ್ರದ ವಿದ್ಯುತ್ ಕಂಬಗಳನ್ನು ಅಳವಡಿಸಿದರೆ ಜನ, ವಾಹನ ಸಂಚಾರ ಓಡಾಟಕ್ಕೆ ಸಮಸ್ಯೆಯಾಗಲಿದೆ. ಇದಕ್ಕಿಂತ ಮುಖ್ಯವಾಗಿ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರವರೆಗೆ ರಸ್ತೆ ವಿಸ್ತರಣೆ ಮಾಡಲು ನಿರ್ಧಾರವಾಗಿದೆ. ಪರಿಹಾರ ನೀಡಿ ರಸ್ತೆ ವಿಸ್ತರಣೆ  ಮುಖ್ಯಮಂತ್ರಿ ಅನುಮತಿ ನೀಡಿದ್ದಾರೆ. ಈ ಅನುದಾನ ಬಿಡುಗಡೆಯಾದರೆ ಇನ್ನೂ ಕೆಲವೇ ತಿಂಗಳಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಲಿದೆ ಎನ್ನುತ್ತಾರೆ ಸಾರ್ವಜನಿಕರು.

ADVERTISEMENT

ರಸ್ತೆ ವಿಸ್ತರಣೆಯಾದಲ್ಲಿ ಪುನಃ ಇದೇ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ ವಿದ್ಯುತ್ ಮಾರ್ಗ ನಿರ್ಮಿಸಬೇಕಾಗುತ್ತದೆ. ಪ್ರಸ್ತುತ ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಮಾಡಿದ ₹77 ಲಕ್ಷ ಹಾಗೂ ಪುನಃ ಹೊಸದಾಗಿ ವೆಚ್ಚ ಭರಿಸಬೇಕಾಗುತ್ತದೆ. ಇದರಿಂದ ಜನಸಾಮಾನ್ಯರ ತೆರಿಗೆ ಹಣ ಪೋಲಾದಂತಾಗುತ್ತದೆ. ಜನ ಸಾಮಾನ್ಯರಿಗೆ ಕಿರಿಕಿರಿ ಯಾಗುವುದರ ಜತೆಗೆ ಇದು ಸರ್ಕಾರದ ಬೋಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

‘ರಸ್ತೆ ವಿಸ್ತರಣೆ ಮತ್ತು ಹೊಸ ವಿದ್ಯುತ್ ಮಾರ್ಗದ ಅಳವಡಿಕೆ ಎರಡನ್ನು ಒಟ್ಟಿಗೆ ಮಾಡಿದರೆ ಒಳ್ಳೆಯದು. ಇದಕ್ಕೆ ಪ್ರತಿಕ್ರಿಯೆ ನೀಡಿದರೆ ಕಾಮಗಾರಿ ಮಾಡಲು ಅಡ್ಡಿಪಡಿಸುತ್ತಿದ್ದೇನೆ ಎಂಬ ಹೇಳಿಕೆ ಶಾಸಕರಿಂದ ಬರಬಹುದು’ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ತಿಳಿಸಿದರು.

ಪಟ್ಟಣದ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ಹಾಗೂ ಮಳೆಗಾಲದಲ್ಲಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಮಾರ್ಗದ ಮೇಲೆ ಮರಗಳು ಬಿದ್ದರೆ ವಿದ್ಯುತ್ ವ್ಯತ್ಯವಾದಲ್ಲಿ ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಫೀಡರ್ ವಿಭಜನೆ ಮಾಡಲು ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಮೆಸ್ಕಾಂ ಎಂಜಿನಿಯರ್ ಗೌತಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ನರಸಿಂಹರಾಜಪುರ ಪಟ್ಟಣದಲ್ಲಿ ಮೆಸ್ಕಾಂನಿಂದ ಹೊಸ ವಿದ್ಯುತ್ ಮಾರ್ಗ ಅಳವಡಿಕೆ ತಂದಿರುವ ವಿದ್ಯುತ್ ಕಂಬಗಳು
ಪ್ರಸ್ತಾವಿತ ಮೆಸ್ಕಾಂ ಕಾಮಗಾರಿಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು.
–ಟಿ.ಡಿ.ರಾಜೇಗೌಡ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.