ADVERTISEMENT

ಅಡಿಕೆ ಸಂಸ್ಕರಣೆ: ಸಹಕಾರ ಸಂಘದ ಹೊಸ ಹೆಜ್ಜೆ, ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ

ರವಿ ಕೆಳಂಗಡಿ
Published 8 ಡಿಸೆಂಬರ್ 2023, 6:58 IST
Last Updated 8 ಡಿಸೆಂಬರ್ 2023, 6:58 IST
ಕಳಸ ಸಮೀಪದ ಕಚಗಾನೆಯಲ್ಲಿ ಇರುವ ಸಹಕಾರ ಸಂಘದ ಅಡಿಕೆ ಸಂಸ್ಕರಣಾ ಘಟಕದ ನೋಟ.
ಕಳಸ ಸಮೀಪದ ಕಚಗಾನೆಯಲ್ಲಿ ಇರುವ ಸಹಕಾರ ಸಂಘದ ಅಡಿಕೆ ಸಂಸ್ಕರಣಾ ಘಟಕದ ನೋಟ.   

ಕಳಸ: ಅಡಿಕೆ ಸಂಸ್ಕರಣೆಯ ಕಿರಿಕಿರಿ ಬೇಡ ಎಂದು ಬಹುತೇಕ ಬೆಳೆಗಾರರು ಹಸಿ ಅಡಿಕೆ ಮಾರಾಟ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಕಳಸ ಸಹಕಾರ ಸಂಘವು ಬೆಳೆಗಾರರಿಗೆ ಅಡಿಕೆ ಸಂಸ್ಕರಣೆ ಮಾಡಿಕೊಡುವ ಕೆಲಸ ಆರಂಭಿಸಿದೆ.

ಕಚಗಾನೆಯಲ್ಲಿ ನಬಾರ್ಡ್ ಅನುದಾನದಲ್ಲಿ ಕಳಸ ಸಹಕಾರ ಸಂಘವು 4 ವರ್ಷಗಳಿಂದ ನಡೆಸುತ್ತಿದ್ದ ಕಾಫಿ ಮತ್ತು ಅಡಿಕೆ ಸಂಸ್ಕರಣಾ ಘಟಕಗಳ ಕಾಮಗಾರಿ ಮುಗಿದಿದ್ದು, ಈ ಪೈಕಿ ಅಡಿಕೆ ಸಂಸ್ಕರಣಾ ಘಟಕವು ಕಳೆದ ತಿಂಗಳಿಂದ ಕಾರ್ಯಾರಂಭಿಸಿದೆ.

ಬೆಳೆಗಾರರು ಹಸಿ ಅಡಿಕೆ ತಂದು ಸಂಸ್ಕರಣಾ ಘಟಕದಲ್ಲಿ ಸುಲಿಸಿಕೊಂಡು ತಮ್ಮ ಮನೆಗೆ ಕೊಂಡೊಯ್ಯಬಹುದು. ಅಲ್ಲಿ ಅವರು ಅಡಿಕೆ ಬೇಯಿಸಿಕೊಳ್ಳಬಹುದು. ಹಸಿ ಅಡಿಕೆ ಸುಲಿಯಲು ಸಹಕಾರ ಸಂಘವು ಪ್ರತಿ ಕೆಜಿಗೆ ₹3 ಶುಲ್ಕ ವಿಧಿಸುತ್ತಿದೆ. ಹೀಗೆ ಸುಲಿದ ಅಡಿಕೆಯನ್ನು ಇಲ್ಲೇ ಬೇಯಿಸಿಕೊಡುವ ಸೌಲಭ್ಯವೂ ಇದೆ. ಈ ಕೆಲಸಕ್ಕೆ ಕೆಜಿಗೆ ₹4 ದರ ನಿಗದಿ ಮಾಡಲಾಗಿದೆ. ಇನ್ನು ಬೇಯಿಸಿದ ಅಡಿಕೆಯನ್ನು ಒಣಗಿಸಿ ಕೊಡುವ ವ್ಯವಸ್ಥೆಯನ್ನೂ ಸಂಘ ಮಾಡಿದೆ. ಈ ಕೆಲಸಕ್ಕೆ ಕೆಜಿಗೆ ₹5 ಶುಲ್ಕ ವಿಧಿಸಲಾಗುತ್ತಿದೆ.

ADVERTISEMENT

ಅನೇಕ ಬೆಳೆಗಾರರು ಈ ಸೌಲಭ್ಯ ಬಳಸಿಕೊಂಡು ಹಸಿ ಅಡಿಕೆ ಸುಲಿದು, ಬೇಯಿಸಿ, ಒಣಗಿಸಿಕೊಂಡು ತೆಗೆದುಕೊಂಡು ಹೋಗುತ್ತಿದ್ದಾರೆ. ‘ಕಾರ್ಮಿಕರ ಕೊರತೆಯಿಂದ ನಾವು ಮನೆಯಲ್ಲಿ ಅಡಿಕೆ ಬೇಯಿಸುವುದು ಬಿಟ್ಟು ಬಹಳ ವರ್ಷ ಆಗಿತ್ತು. ಪ್ರತಿ ವರ್ಷ ಹಸಿ ಅಡಿಕೆ ಮಾರಾಟ ಮಾಡುತ್ತಾ ಇದ್ದೇವು. ಈ ವರ್ಷ ಕಳಸ ಸಹಕಾರ ಸಂಘದಲ್ಲಿ ಅಡಿಕೆ ಸಂಸ್ಕರಣೆ ಮಾಡಿಸುತ್ತಿದ್ದೇವೆ. ಇದರಿಂದ ಬಹಳ ಅನುಕೂಲ ಆಗುತ್ತದೆ’ ಎಂದು ಮುನ್ನೂರುಪಾಲು ಗ್ರಾಮದ ಬೆಳೆಗಾರರೊಬ್ಬರು ಹೇಳುತ್ತಾರೆ.

‘₹50 ಲಕ್ಷಕ್ಕೂ ಹೆಚ್ಚು ವೆಚ್ಚದ ಅಡಿಕೆ ಸಂಸ್ಕರಣಾ ಘಟಕದಲ್ಲಿ ಗಂಟೆಗೆ 3 ಸಾವಿರ ಅಡಿಕೆ ಸುಲಿಯುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಘಟಕಕ್ಕೆ ಸತತ ಕೆಲಸ ಕೊಡಲು ನಾವು ಹಸಿ ಅಡಿಕೆ ಖರೀದಿ ಕೂಡ ಮಾಡುತ್ತಿದ್ದೇವೆ. ಗುಣಮಟ್ಟಕ್ಕೆ ತಕ್ಕಂತೆ ಕೆಜಿಗೆ ₹50ರಿಂದ ₹55 ಹಸಿ ಅಡಿಕೆ ಖರೀದಿ ಮಾಡಿ ಸ್ಥಳದಲ್ಲೇ ಹಣ ಪಾವತಿ ಮಾಡುತ್ತಿದ್ದೇವೆ’ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಬಲೇಶ್ವರ ತಿಳಿಸಿದರು.

ರಾಜ್ಯದ ಯಾವುದೇ ಊರಲ್ಲೂ ಸಹಕಾರ ಸಂಘಗಳಲ್ಲಿ ಇಂತಹ ಘಟಕ ಇಲ್ಲ. ಈ ವಿಚಾರ ಸಂಘಕ್ಕೆ ಹೇಗೆ ಹೊಳೆಯಿತು ಎಂದು ‘ಪ್ರಜಾವಾಣಿ’ ಕೇಳಿದ ಪ್ರಶ್ನೆಗೆ ಉತ್ತಿಸಿದ ಸಂಘದ ಅಧ್ಯಕ್ಷರಾದ ಮಂಜಪ್ಪಯ್ಯ ಅವರು, ‘ಪ್ರತಿ ವರ್ಷವೂ ಬೆಳೆಗಾರರು ಹಸಿ ಅಡಿಕೆ ಮಾರಾಟದಿಂದ ಬಹಳ ನಷ್ಟ ಅನುಭವಿಸುತ್ತಿದ್ದಾರೆ. ಅಡಿಕೆಗೆ ಬೆಲೆ ಬರುವುದು ಸಾಮಾನ್ಯವಾಗಿ ಮಾರ್ಚ್ ಕಳೆದ ನಂತರ. ಆದರೆ, ಹಸಿ ಅಡಿಕೆ ಮಾರಾಟ ಮಾಡಿದ್ದರಿಂದ ಬೆಳೆಗಾರರ ಬಳಿ ಸಂಸ್ಕರಣೆ ಮಾಡಿದ ಅಡಿಕೆಯೇ ಇರುವುದಿಲ್ಲ. ಬೆಳೆಗಾರರ ಬಳಿ ಸಂಸ್ಕರಣೆ ಮಾಡಿದ ಅಡಿಕೆ ಉಳಿದರೆ ಅವರಿಗೆ ವರ್ಷದ ಯಾವುದೋ ಒಂದು ಕಾಲದಲ್ಲಿ ಗರಿಷ್ಟ ಬೆಲೆ ಸಿಗುತ್ತದೆ. ಬೆಳೆಗಾರರಿಗೆ ಸಂಸ್ಕರಣೆಗೆ ಬೆಂಬಲ ನೀಡಿದರೆ ಅವರು ಆರ್ಥಿಕವಾಗಿ ಸದೃಢರಾಗುತ್ತಾರೆ ಎಂಬ ಸದುದ್ದೇಶದಿಂದ ಈ ಘಟಕ ಆರಂಭಿಸಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.