ADVERTISEMENT

ಶೃಂಗೇರಿ: ನಿರ್ಮಲ ತುಂಗಭದ್ರಾ ಅಭಿಯಾನ ಇಂದಿನಿಂದ

ಶೃಂಗೇರಿ ಶಾರದಾ ಪೀಠದಿಂದ ಕಿಷ್ಕಿಂದೆವರೆಗೆ 400 ಕಿ.ಮೀ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 14:14 IST
Last Updated 5 ನವೆಂಬರ್ 2024, 14:14 IST
ಶೃಂಗೇರಿಯ ಪಟ್ಟಣದಲ್ಲಿ ಪಾದಯಾತ್ರೆಯ ಮುನ್ನೋಟವನ್ನು ತಿಳಿಸುವ ಮಾಹಿತಿ ಕರಪತ್ರವನ್ನು ಬಿಡುಗಡೆಗೊಳಿಸಿದರು
ಶೃಂಗೇರಿಯ ಪಟ್ಟಣದಲ್ಲಿ ಪಾದಯಾತ್ರೆಯ ಮುನ್ನೋಟವನ್ನು ತಿಳಿಸುವ ಮಾಹಿತಿ ಕರಪತ್ರವನ್ನು ಬಿಡುಗಡೆಗೊಳಿಸಿದರು   

ಶೃಂಗೇರಿ: ತುಂಗಾ ಮತ್ತು ಭದ್ರಾ ನದಿಗಳ ಒಡಲು ಮಲಿನಗೊಳ್ಳುತ್ತಿರುವುದರ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ  ‘ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆ’  ಬುಧವಾರ ಶೃಂಗೇರಿ ಶಾರದಾ ಪೀಠದಿಂದ ಪ್ರಾರಂಭಗೊಳ್ಳಲಿದೆ’ ಎಂದು ಅಭಿಯಾನದ ಸ್ಥಳೀಯ ಮುಖಂಡರಾದ ಎ.ಎಸ್ ನಯನ ಹೇಳಿದರು.

ಶೃಂಗೇರಿಯಲ್ಲಿ ಮಂಗಳವಾರ ಪಾದಯಾತ್ರೆಯ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ನ.6ರಿಂದ ನ.14ರವರೆಗೆ ಈ ಅಭಿಯಾನ ನಡೆಯಲಿದ್ದು, ಶೃಂಗೇರಿಯಿಂದ ದಾವಣಗೆರೆ ಜಿಲ್ಲೆಯ ಹರಿಹರದ ಕಿಷ್ಕಿಂದೆವರೆಗೆ 400 ಕಿ.ಮೀಯನ್ನು ಪಾದಯಾತ್ರಿಕರು ಕ್ರಮಿಸಲಿದ್ದಾರೆ. ಬುಧವಾರ ಬೆಳಿಗ್ಗೆ 9 ಗಂಟೆಗೆ ಶಾರದಾ ಪೀಠದ  ಭಾರತಿತೀರ್ಥ ಸ್ವಾಮೀಜಿ ಪಾದಯಾತ್ರೆಗೆ ಚಾಲನೆ ನೀಡುವರು’ ಎಂದರು.

ಅಭಿಯಾನದ ಅಂಗವಾಗಿ ಪಟ್ಟಣದ ವಿ.ಆರ್ ಗೌರೀಶಂಕರ ಸಭಾಂಗಣದಲ್ಲಿ ಜನಜಾಗೃತಿ ಸಭೆಯು ಶಾಸಕ ಟಿ.ಡಿ ರಾಜೇಗೌಡರ ಅಧ್ಯಕ್ಷತೆ ನಡೆಯಲಿದೆ. ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಪರಿಸರ ತಜ್ಞ ಉಮಾಶಂಕರ ಪಾಂಡೆ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ನಮಾಮಿ ಗಂಗೆ ರೂವಾರಿ ಗೋವಿಂದಾಚಾರ್ಯ, ಗೌರಿಗದ್ದೆಯ ವಿನಯ ಗೂರೂಜಿ, ಕಾಡ ಅಧ್ಯಕ್ಷ ಅಂಶುಮಂತ್, ಮಾಜಿ ಶಾಸಕ ಡಿ.ಎನ್ ಜೀವರಾಜ್,  ಕುಮಾರ ಸ್ವಾಮಿ, ಗಿರೀಶ್ ಪಟೇಲ್‍ ಮತ್ತಿತರರು ಭಾಗವಹಿಸುವರು. ಅಭಿಯಾನದ ಮೂಲಕ ನದಿಯ ಶುದ್ಧತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡಲು ಸರ್ಕಾರ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಪರಿಸರವಾದಿಗಳು ಹಾಗೂ ತುಂಗಾ ತೀರದ ನಿವಾಸಿಗಳು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. 

ADVERTISEMENT

ಶೃಂಗೇರಿಯ ಶಂಕರಾಚಾರ್ಯ ವೃತ್ತದಲ್ಲಿ ಪಾದಯಾತ್ರೆಯನ್ನು ಹರಿಹರಪುರಕ್ಕೆ ಬೀಳ್ಕೊಡಲಾಗುತ್ತದೆ. ಅಡ್ಡಗದ್ದೆ ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರು ವಿಶೇಷ ಗ್ರಾಮಸಭೆ ನಡೆಸಿ ಜಲ ಸಂರಕ್ಷಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. 400 ಕಿ.ಮೀ ಮಾರ್ಗದಲ್ಲಿ ಪಾದಯಾತ್ರಿಕರು ತಂಗುವ ಎಲ್ಲ ಪ್ರದೇಶಗಳಲ್ಲಿ ಗ್ರಾಮಸಭೆ ನಡೆಯಲಿದೆ. ಈ ಪ್ರದೇಶಗಳ ಜನಪ್ರತಿನಿಧಿಗಳೂ ಭಾಗವಹಿಸಲಿದ್ದಾರೆ’ ಎಂದು ಮುಖಂಡ ಪರಾಶರ ಹೇಳಿದರು.

ಉಮೇಶ್ ಪುದುವಾಳ್, ಅಭಿರಾಮ, ಎ.ಜಿ ಪ್ರಶಾಂತ, ವೇಣು ಮಾಧವ ನಾಯಕ್, ಎಚ್.ಎಸ್ ವೇಣುಗೋಪಾಲ್, ಹಂಚಲಿ ರಾಘವೇಂದ್ರ, ಬಿ.ಎಲ್ ರವಿಕುಮಾರ್, ಸುರೇಶ್ಚಂದ್ರ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.