ಕೊಪ್ಪ: ತಾಲ್ಲೂಕಿನ ಸಣ್ಣಕೆರೆ, ಗುಣವಂತೆ, ಊರುಮಕ್ಕಿ ಮೂಲಕ ತೀರ್ಥಹಳ್ಳಿ ತಾಲ್ಲೂಕಿನ ಮಕ್ಕಿಮನೆ ಭಾಗಕ್ಕೆ ಬಸ್ ಸಂಚಾರವಿಲ್ಲದೆ ಗ್ರಾಮೀಣ ಭಾಗದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
ಮಕ್ಕಿಮನೆ, ನಗರವಳ್ಳಿ ಭಾಗದ ಜನರಿಗೆ ತೀರ್ಥಹಳ್ಳಿ ತಾಲ್ಲೂಕು ಕೇಂದ್ರ ದೂರವಿರುವುದರಿಂದ ಹೆಚ್ಚಿನವರು ಕೊಪ್ಪಕ್ಕೆ ಬರುತ್ತಿದ್ದರು ಹಾಗೂ ಈ ಭಾಗದ 5ರಿಂದ 6 ಸಾವಿರ ಜನರು ಬಸ್ ಸಂಪರ್ಕವನ್ನೇ ನೆಚ್ಚಿಕೊಂಡಿದ್ದರು. ಬಸ್ ಸಂಚಾರ ಸ್ಥಗಿತಗೊಂಡ ಕಾರಣ ಕೆಲವರು ಖಾಸಗಿ ವಾಹನದ ಮೊರೆ ಹೋದರು. ಆದರೆ, ಬಡವರು, ಕೂಲಿ ಕಾರ್ಮಿಕರು ಸಾರಿಗೆ ಸಂಪರ್ಕವಿಲ್ಲದೆ ಪರದಾಡುವಂತಾಗಿದೆ.
ಕಾರ್ಮಿಕರಿಂದ ಸ್ಥಾಪನೆಗೊಂಡು ಸಹಕಾರ ತತ್ವದಡಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ ಎಂಬ ಹೆಗ್ಗಳಿಕೆಯ ಮಲೆನಾಡಿನ ಸಹಕಾರ ಸಾರಿಗೆ ಸಂಸ್ಥೆ ಬಸ್ ಸಂಚಾರ ಸ್ಥಗಿತಗೊಳಿಸಿದ ಬಳಿಕ ಬಹುತೇಕ ಗ್ರಾಮೀಣ ಪ್ರದೇಶಕ್ಕೆ ಸಾರಿಗೆ ಸಂಪರ್ಕ ಕೊಂಡಿ ಕಳಚಿದೆ. ವಿದ್ಯಾರ್ಥಿಗಳು, ವಯೋವೃದ್ಧರು, ಮಹಿಳೆಯರು, ಕಾರ್ಮಿಕರು, ಕೃಷಿಕರು ಬಸ್ ಇಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ.
ಈ ಹಿಂದೆ ಕೊಪ್ಪದಿಂದ ಗುಣವಂತೆ, ಮಕ್ಕಿಮನೆ ಕಡೆಗೆ ಬೆಳಿಗ್ಗೆ 9ಗಂಟೆಗೆ, ಮಧ್ಯಾಹ್ನ 12.30ಕ್ಕೆ, 3.15ಕ್ಕೆ, ಸಂಜೆ 5.30ಕ್ಕೆ, 7.30ಕ್ಕೆ ಬಸ್ ಹೋಗುತಿತ್ತು. ಕೊಪ್ಪ ಪಟ್ಟಣದ ಕಡೆಗೆ ಬೆಳಿಗ್ಗೆ 7.30ಕ್ಕೆ, 9.30ಕ್ಕೆ, ಮಧ್ಯಾಹ್ನ 1.30ಕ್ಕೆ ಸಂಜೆ 6 ಗಂಟೆಗೆ ಬಸ್ ಸಂಚಾರ ಇತ್ತು.
ಆಸ್ಪತ್ರೆ ಸರ್ಕಾರಿ ಕಚೇರಿಗಳಿಗೆ ಹೋಗಬೇಕಾದರೆ ಕೊಪ್ಪಕ್ಕೆ ತೆರಳಬೇಕು. ಆಟೊಗೆ ₹300 ಖರ್ಚಾಗುತ್ತದೆ. ಬಸ್ ಇಲ್ಲದೇ ನಮಗೆ ತೀವ್ರ ಸಮಸ್ಯೆ ಎದುರಾಗಿದ್ದು ಬಸ್ ಸಂಚಾರ ಆರಂಭಿಸಿದರೆ ಅನುಕೂಲವಾಗುತ್ತದೆ.ಭವಾನಿ ಶ್ರೀಧರ್ ಶೆಟ್ಟಿ ಗುಣವಂತೆ ಕೊಪ್ಪ ತಾಲ್ಲೂಕು.
ಪ್ರತಿನಿತ್ಯ ಶಾಲೆಗೆ ಪೋಷಕರು ಬೈಕ್‌ನಲ್ಲಿ ಕರೆ ತರುತ್ತಾರೆ. ಆದರೆ ಒಂದೊಂದು ಸಲ ಅವರಿಗೆ ಬೇರೆ ಕೆಲಸ ಬಂದರೆ ಆಟೊದಲ್ಲೇ ಪ್ರಯಾಣ ಮಾಡಬೇಕು. ಆದ್ದರಿಂದ ಬಸ್ ವ್ಯವಸ್ಥೆ ಮಾಡಿಕೊಡಿ.ಅಂಜಲಿ ವಿದ್ಯಾರ್ಥಿನಿ ಗುಣವಂತೆ ಗ್ರಾಮ ಕೊಪ್ಪ ತಾಲ್ಲೂಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.