ಆಲ್ದೂರು: ಸಮೀಪದ ಸತ್ತಿಹಳ್ಳಿ ಗ್ರಾಮದ ನಿವಾಸಿ ವೆಂಕಟೇಶ್.ಕೆ ಅವರಿಗೆ 10 ತಿಂಗಳಿಂದ ಅಂಗವಿಕಲ ಮಾಸಾಶನ ಬಾರದೆ ತೊಂದರೆ ಅನುಭವಿಸುತ್ತಿದ್ದಾರೆ.
‘ಫೆಬ್ರುವರಿ ತಿಂಗಳವರೆಗೆ ಮಾಸಾಶನ ಸರಿಯಾಗಿ ಬಂದಿತ್ತು. ಅದಾದ ಬಳಿಕ ಬಂದಿಲ್ಲ. ಈ ಕುರಿತು ನಾಡಕಚೇರಿ, ತಾಲ್ಲೂಕು ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಸಮಸ್ಯೆಯನ್ನು ತಿಳಿಸಿದಾಗ, ಯಾವುದೇ ತಾಂತ್ರಿಕ ದೋಷವಿಲ್ಲ ನಿಮಗೆ ಹಣ ಬರುತ್ತದೆ ಎಂದು ಸಮಾಧಾನಪಡಿಸಿ ಕಳಿಸಿದ್ದಾರೆ. ಆದರೆ, ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ. ‘ಅಂಗವಿಕಲನಾದ ನಾನು, ಪರರ ಸಹಾಯವಿಲ್ಲದೆ ಒಂದೆಡೆಯಿಂದ ಇನ್ನೊಂದೆಡೆಗೆ ತೆರಳಲು ಸಾಧ್ಯವಿಲ್ಲ, ಗಾಲಿ ಕುರ್ಚಿಯಲ್ಲೇ ತಿರುಗಾಡಬೇಕು. ಕಚೇರಿಗೆ ಹೋಗಲು ಬಾಡಿಗೆ ವಾಹನ ಮಾಡಿಕೊಂಡು ಹೋಗಬೇಕಾದ ಸ್ಥಿತಿ ಇದೆ. ಮಾಸಾಶನ ಬಾರದೆ ತೊಂದರೆಯಾಗಿದೆ’ ಎಂದರು.
‘ತಿಂಗಳಿಗೆ ₹1,400 ರೂಪಾಯಿ ಮಾಸಾಶನ ಬರುತ್ತಿತ್ತು. ಇದರಿಂದ ವೈಯಕ್ತಿಕ ಖರ್ಚಿಗೆ, ಕುಟುಂಬಕ್ಕೆ ಅನುಕೂಲವಾಗುತ್ತಿತ್ತು. ಪತ್ನಿ ತೋಟದ ಕೆಲಸಕ್ಕೆ ಹೋಗುತ್ತಾರೆ. ಹತ್ತು ತಿಂಗಳಿಂದ ಹಣ ಬಾರದೆ ತೀವ್ರ ತೊಂದರೆಯಾಗಿದೆ ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಮಾಸಾಶನ ಬರುವಂತೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ವೆಂಕಟೇಶ್ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.