ಚಿಕ್ಕಮಗಳೂರು: ‘ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರನ್ನು ಪೊಲೀಸ್ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡುವುದು ಕಡ್ಡಾಯ. ಮಾಡದವರ ವಿರುದ್ಧ ಕ್ರಮ ಕೈಗೊಳ್ಳಲು ತಯಾರಿ ನಡೆಸಲಾಗಿದೆ’ ಎಂದು ಸಹಾಯಕ ಕಾರ್ಮಿಕ ಆಯುಕ್ತ ಕೆ.ಎಲ್.ರವಿಕುಮಾರ್ ತಿಳಿಸಿದರು.
ಪ್ರೆಸ್‌ಕ್ಲಬ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ತಿಂಗಳ ಅಥಿತಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘27 ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಕಾರ್ಮಿಕ ಕಾಯ್ದೆಗಳು ಸಮರ್ಪಕವಾಗಿ ಪಾಲನೆ ಆಗದಿರುವುದು ಗಮನಕ್ಕೆ ಬಂದಿದೆ. ನೋಟಿಸ್ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ’ ಎಂದರು.
‘ಗ್ರಾಮ ಪಂಚಾಯಿತಿಗಳ ಸಹಕಾರ ಪಡೆದು ತೋಟದ ಮಾಲೀಕರೊಂದಿಗೆ ಮೂರು ಭಾರಿ ಸಭೆ ನಡೆಸಲಾಗಿದೆ. ವಲಸೆ ಕಾರ್ಮಿಕರ ವಿಳಾಸ ಸಹಿತ ಮಾಹಿತಿಯನ್ನು ಪೊಲೀಸ್ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕಿದೆ. ಆದರೆ, ಅದು ಸರಿಯಾಗಿ ಆಗುತ್ತಿಲ್ಲ. 203 ತೋಟಗಳಿದ್ದು, 1,843 ವಲಸೆ ಕಾರ್ಮಿಕರಷ್ಟೇ ನೋಂದಣಿ ಮಾಡಿಸಿದ್ದಾರೆ. ಉಳಿದವರನ್ನೂ ನೋಂದಣಿ ಮಾಡಿಸುವುದು ತೋಟಗಳ ಮಾಲೀಕರ ಕೆಲಸ’ ಎಂದು ಹೇಳಿದರು.
ವಲಸೆ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲ ಎಂಬ ದೂರುಗಳೂ ಇವೆ. ಆದ್ದರಿಂದ ಕಾರ್ಮಿಕ ಅಧಿಕಾರಿಗಳು ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತೋಟಗಳ ಮಾಲೀಕರಿಗೆ ಈವರೆಗೆ ಎಲ್ಲಾ ರೀತಿಯ ತಿಳುವಳಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಮಿಕರು ಮತ್ತು ಮಾಲೀಕರ ನಡುವೆ ಆರೋಗ್ಯಕರ ವಾತಾವರಣ ಸೃಷ್ಟಿಸುವುದು ಕಾರ್ಮಿಕ ಇಲಾಖೆಯ ಧ್ಯೇಯ. ಅನೇಕ ಕಾನೂನು ಕ್ರಮಗಳನ್ನು ಕೈಗೊಂಡು ಅನುಷ್ಠಾನಕ್ಕೆ ಶ್ರಮಿಸುತ್ತಿದೆ ಎಂದು ಹೇಳಿದರು.
ಕೈಗಾರಿಕೆಗಳು ಕಾರ್ಮಿಕರಿಗೆ ವೇತನದ ಜತೆಗೆ ಕಾಲಕಾಲಕ್ಕೆ ಬೋನಸ್ ಪಾವತಿಸಬೇಕು. ಐದು ವರ್ಷ ಕಾರ್ಯನಿರ್ವಹಿಸಿದ ಕಾರ್ಮಿಕರಿಗೆ ಶೇ 15ರಷ್ಟು ಉಪಧನ ಪಾವತಿ ಮಾಡಬೇಕು. ಕಾರ್ಮಿಕರ ವೃತ್ತಿಕ್ಷಮತೆ ಆಧಾರದ ಮೇಲೆ ಶೇ 8.33 ರಿಂದ ಗರಿಷ್ಟ ಶೇ 20ರಷ್ಟು ಬೋನಸ್ಸ್ ನೀಡಬೇಕು ಕಾಯ್ದೆ ಹೇಳುತ್ತದೆ ಎಂದರು.
ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ತಾರಾನಾಥ್, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಪ್ರಭಾಕರ್, ಸಮರ್ಥ, ರಾಘವೇಂದ್ರ, ಮಹಮದ್ ನಯಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.