ADVERTISEMENT

ಇಹಲೋಕ ತ್ಯಜಿಸಿದ ರಾಜೇಶ್ವರಿ ತೇಜಸ್ವಿ: ನಿರುತ್ತರದಲ್ಲಿ ನೀರವ ಮೌನ

ಪ್ರಜಾವಾಣಿ ವಿಶೇಷ
Published 15 ಡಿಸೆಂಬರ್ 2021, 3:58 IST
Last Updated 15 ಡಿಸೆಂಬರ್ 2021, 3:58 IST
ಮೂಡಿಗೆರೆಯ ಹ್ಯಾಂಡ್ ಪೋಸ್ಟಿನಲ್ಲಿರುವ ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ನಿವಾಸ ನಿರುತ್ತರಕ್ಕೆ ಬಂದ ತೇಜಸ್ವಿ ಅಭಿಮಾನಿಗಳನ್ನು ಬೀಳ್ಕೊಡುತ್ತಿದ್ದ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ
ಮೂಡಿಗೆರೆಯ ಹ್ಯಾಂಡ್ ಪೋಸ್ಟಿನಲ್ಲಿರುವ ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ನಿವಾಸ ನಿರುತ್ತರಕ್ಕೆ ಬಂದ ತೇಜಸ್ವಿ ಅಭಿಮಾನಿಗಳನ್ನು ಬೀಳ್ಕೊಡುತ್ತಿದ್ದ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ   

ಮೂಡಿಗೆರೆ: ನಿತ್ಯವೂ ತೇಜಸ್ವಿ ಅವರ ಅಭಿಮಾನಿಗಳಿಂದ ತುಂಬಿರುತ್ತಿದ್ದ ಮನೆಯಲ್ಲಿ ಮಂಗಳವಾರ ನೀರವ ಮೌನ ಆವರಿಸಿತ್ತು. ಬೆಳಗಾಗುತ್ತಿದ್ದಂತೆ ಲೇಖಕಿ ರಾಜೇಶ್ವರಿ ತೇಜಸ್ವಿ ಇಹಲೋಕ ತ್ಯಜಿಸಿದ್ದಾರೆ ಎಂಬ ಸುದ್ದಿ ಎಲ್ಲರಲ್ಲಿಯೂ ದುಃಖ ಮಡುಗಟ್ಟುವಂತೆ
ಮಾಡಿತ್ತು.

ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ನಿಧನದ ಬಳಿಕ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ರಾಜೇಶ್ವರಿ ತೇಜಸ್ವಿ, ‘ನನ್ನ ತೇಜಸ್ವಿ’ ‘ನಮ್ಮ ಮನೆಗೂ ಬಂದರು ಗಾಂಧಿ’ ಎಂಬ ಎರಡು ಪುಸ್ತಕಗಳನ್ನು ಬರೆದಿದ್ದರು. ‘ನನ್ನ ಡ್ರೈವಿಂಗ್ ಡೈರಿ’ ಎಂಬ ಪುಸ್ತಕ ರಚಿಸಿದ್ದು, ಪ್ರಕಟಣೆಗೆ ಸಿದ್ಧವಾಗಿತ್ತು. ವಿದ್ಯಾರ್ಥಿಗಳೊಂದಿಗೆ, ಸಾಹಿತ್ಯಾಸಕ್ತರೊಂದಿಗೆ ಸಂವಾದದಲ್ಲೂ ಪಾಲ್ಗೊಳ್ಳುತ್ತಿದ್ದ ಅವರು, ನೇರ ಹಾಗೂ ನಿಷ್ಠುರ ವಾದಿ ಆಗದ್ದರು.

ಕೊಟ್ಟಿಗೆಹಾರದಲ್ಲಿರುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದೊಂದಿಗೆ ಒಡನಾಟ ಇಟ್ಟುಕೊಂಡಿದ್ದ ರಾಜೇಶ್ವರಿ ತೇಜಸ್ವಿ ಅವರು, ಪ್ರತಿಷ್ಠಾನದಲ್ಲಿ ನಡೆಯುತ್ತಿದ್ದ ಹಲವು ಚಟುವಟಿಕೆಗಳಲ್ಲಿ ಬಾಗಿಯಾಗಿ ರಾಜ್ಯದ ನಾನಾ ಭಾಗಗಳಿಂದ ಬರುತ್ತಿದ್ದ ಸಾಹಿತ್ಯಾಸಕ್ತರೊದಿಗೆ ಮುಕ್ತವಾಗಿ ಚರ್ಚೆ, ಸಂವಾದಗಳಲ್ಲಿ ತೊಡಗುತ್ತಿದ್ದರು.

ADVERTISEMENT

ಚುನಾವಣಾ ಫಲಿತಾಂಶದ ಗುಂಗಿನ ನಡುವೆಯೂ ಸಾಹಿತಿ ರಾಜೇಶ್ವರಿ ತೇಜಸ್ವಿ ಇನ್ನಿಲ್ಲ ಎಂಬ ಸುದ್ದಿ ತಿಳಿದ ಹಲವರು ಬೆಳಿಗಿನಿಂದಲೇ ನಿರುತ್ತರದತ್ತ ಹೆಜ್ಜೆ ಹಾಕತೊಡಗಿದ್ದರು. ಆದರೆ, ಸಾವನ್ನಪ್ಪಿರುವುದು ಬೆಂಗಳೂರಿನಲ್ಲಿ ಎಂಬುದು ತಿಳಿಯುತ್ತಿದ್ದಂತೆ ನಿರಾಶೆಗೆ ಒಳಗಾದರು.

ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ ಮನೆ ‘ನಿರುತ್ತರಕ್ಕೆ’ ಯಾರೇ ಕಾಲಿಟ್ಟರೂ ರಾಜೇಶ್ವರಿ ತೇಜಸ್ವಿ ಅವರು ಅವರನ್ನು ಅಭಿಮಾನದಿಂದಲೇ
ಸ್ವಾಗತಿಸುತ್ತಿದ್ದರು. ಯಾವುದೇ ಸಮಯದಲ್ಲಿ ‘ನಿರುತ್ತರ’ಕ್ಕೆ ಭೇಟಿ ನೀಡಿದರೂ ಸ್ವಲ್ಪವೂ ಬೇಸರಿಸಿಕೊಳ್ಳದೆ ಕುಶಲೋಪರಿ
ನಡೆಸುತ್ತಿದ್ದರು.

ತೇಜಸ್ವಿಅವರ ಬಗ್ಗೆ ಮಾತಿಗಿಳಿದರೆ ತೇಜಸ್ವಿ ಅವರೊಂದಿಗೆ ರಾಜೇಶ್ವರಿ ಅವರು ಕಳೆದ ದಿನಗಳ ಮೆಲುಕು ತೇಜಸ್ವಿ ಅವರನ್ನು ಕಣ್ಣು ಮುಂದೆ ತಂದು ನಿಲ್ಲಿಸುತಿತ್ತು. ಮನೆಯಿಂದ ಹೊರಡುವಾಗ ಹೊರಾಂಗಣದವರೆಗೂ ಬಂದು ಬೀಳ್ಕೊಡುತ್ತಿದ್ದ ಪರಿ ಅವರ ಹೃದಯ ವೈಶಾಲ್ಯಕ್ಕೆ ಕೈಗನ್ನಡಿಯಾಗಿತ್ತು. ಆದರೆ, ಸಾವಿನ ಸುದ್ದಿ ತಿಳಿದು ನಿರುತ್ತರದತ್ತ ಹೆಜ್ಜೆ ಹಾಕುತ್ತಿದ್ದ ಅಭಿಮಾನಿಗಳಿಗೆ ‘ನಿರುತ್ತರ’ದ ಆವರಿಸಿದ್ದ ನೀರವತೆಯೇ ಅವರ ಆಪ್ತತೆಗೆ ಉತ್ತರವಾಗಿತ್ತು.

ಕನ್ನಡ ಬೆಳೆಸಬೇಡಿ ಬಳಸಿ
ನ. 26 ರಂದು ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭವು ರಾಜೇಶ್ವರಿ ತೇಜಸ್ವಿ ಅವರು ಭಾಗವಹಿಸಿದ ಕೊನೆ ಕಾರ್ಯಕ್ರಮ. ಕಾರ್ಯಕ್ರಮದ ವೇದಿಕೆಯಲ್ಲಿ ಸುಮಾರು ಆರು ನಿಮಿಸಗಳ ಕಾಲ ಮಾತನಾಡಿದ್ದ ಅವರು, ‘ಕನ್ನಡ ಭಾಷೆ ಈಗಾಗಲೇ ಬೆಳೆದು ನಿಂತಿದೆ. ಅದನ್ನು ಮತ್ತಷ್ಟು ಬೆಳೆಸುವ ಅವಶ್ಯಕತೆಯಿಲ್ಲ. ಆದರೆ, ಅದನ್ನು ಬಳಸುವ ಮೂಲಕ ಜೀವಂತವಾಗಿಡಬೇಕು. ಯುವಕರು ಕನ್ನಡವನ್ನು ಮಾತನಾಡಲು ಕೀಳಿರಿಮೆ ಬೆಳೆಸಿಕೊಳ್ಳಬಾರದು’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.