ಚಿಕ್ಕಮಗಳೂರು: ಸುಗಮ ಸಂಚಾರ ನಿಟ್ಟಿನಲ್ಲಿ ನಗರದ ಕೆಲ ರಸ್ತೆಗಳಲ್ಲಿ ಏಕಮುಖ ಸಂಚಾರ ಕಲ್ಪಿಸಲಾಗಿದೆ. ಆದರೆ, ಅದಕ್ಕೆ ಕ್ಯಾರೆ ಎನ್ನದೆ ಉಲ್ಲಂಘಿಸಿ ಓಡಾಡುವ ಪರಿಪಾಠ ಹೆಚ್ಚಾಗಿದೆ.
ಎಂ.ಜಿ ರಸ್ತೆ, ಪ್ರಭು ಬೀದಿ (ಚರ್ಚ್ ಸ್ಟ್ರೀಟ್), ಪ್ರಧಾನ ಅಂಚೆ ಕಚೇರಿ ರಸ್ತೆ, ಅಟ್ಟಿಮಾರಮ್ಮ ದೇಗುಲ ರಸ್ತೆ, ಶೃಂಗಾರ ವೃತ್ತ– ಎಂ.ಜಿ ರಸ್ತೆ ಸಂಪರ್ಕ ಅಡ್ಡ ರಸ್ತೆ, ಗುರುನಾಥ ವೃತ್ತ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದ ಎರಡು ರಸ್ತೆಗಳು, ಬಾರಲೇನ್‌ನಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಇದೆ. ರಸ್ತೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ವಾಹನ ಚಾಲಕರು, ಸವಾರರು ಈ ನಿರ್ಬಂಧಕ್ಕೆ ಸೊಪ್ಪು ಹಾಕುತ್ತಿಲ್ಲ. ದ್ವಿಮುಖವಾಗಿಯೇ ಸಂಚರಿಸುವ ಪರಿಪಾಠ ರೂಢಿಸಿಕೊಂಡಿದ್ದಾರೆ.
ಎಂ.ಜಿ ರಸ್ತೆಯ ಇಕ್ಕೆಲಗಳಲ್ಲಿ ವಾಹನನಿಲುಗಡೆ ವ್ಯವಸ್ಥೆ ಇದೆ. ಈ ರಸ್ತೆಯಲ್ಲಿ ಸಂಜೆ ಹೊತ್ತಿನಲ್ಲಿ ಡಬಲ್ ಪಾರ್ಕಿಂಗ್, ವಾಹನ ದಟ್ಟಣೆ ಹೆಚ್ಚು ಇರುತ್ತದೆ. ಆಜಾದ್ ಪಾರ್ಕ್ ವೃತ್ತದ ಕಡೆಯಿಂದ ಬರುವ ಪ್ರವಾಸಿ ವಾಹನಗಳು ‘ಒನ್ ವೇ’ ಗೊತ್ತಾಗದೆ ಎಂ.ಜಿ.ರಸ್ತೆಗೆ ಕಡೆಗೆ ನುಗ್ಗುವುದು ಹೆಚ್ಚು.
ಗುರುನಾಥ ವೃತ್ತದ ರಸ್ತೆಯಲ್ಲಿ ಗುಂಡಿಗೊಟರುಗಳು ಹೆಚ್ಚಾಗಿವೆ. ಒಂದು ಬದಿಯಲ್ಲಿ ದ್ವಿಚಕ್ರ ವಾಹನ ನಿಲುಗಡೆ ವ್ಯವಸ್ಥೆ ಇದೆ. ಕಿಷ್ಕಿಂಧೆಯಂಥ ಈ ರಸ್ತೆಯಲ್ಲಿ ‘ಒನ್ ವೇ’ ಇದೆ. ಆದರೆ, ಅಕ್ಷರಶಃ ಈ ನಿರ್ಬಂಧ ಪಾಲನೆಯಾಗುತ್ತಿಲ್ಲ. ಪ್ರಭುಬೀದಿಯಲ್ಲೂ ಇದೇ ಕತೆ.
‘ಏಕಮುಖ ಸಂಚಾರ ವ್ಯವಸ್ಥೆ ಇರುವ ರಸ್ತೆಗಳಲ್ಲಿ ವಾಹನಗಳು ತುಸು ವೇಗವಾಗಿ ಚಲಿಸುತ್ತಿರುತ್ತವೆ. ವಿರುದ್ಧ ದಿಕ್ಕಿನಿಂದ ವಾಹನಗಳು ಬಂದಾಗ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವೊಮ್ಮೆ ಸಂಚಾರ ದಟ್ಟಣೆ ಉಂಟಾಗುತ್ತದೆ. ವಾಹನಗಳನ್ನು ರಿವರ್ಸ್ ತೆಗೆಯಲು ಆಗದಂತೆ ವಾಹನಗಳು ಒತ್ತೊತ್ತಾಗಿ ನಿಂತಿರುತ್ತವೆ’ ಎಂದು ಆಟೊ ಚಾಲಕ ಮೋಕ್ಷಾನಂದ ಸಂಕಷ್ಟ ಬಿಚ್ಚಿಟ್ಟರು.
‘ಸಾಧಕಬಾಧಕಗಳನ್ನು ಚರ್ಚಸಿಯೇ ಕೆಲ ರಸ್ತೆಗಳಿಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡಿರುತ್ತಾರೆ. ಚಾಲಕರು, ವಾಹನ ಸವಾರರು ಪಾಲಿಸಲ್ಲ. ‘ಒನ್ ವೇ’ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಸಂಚಾರ ಪೊಲೀಸರು ನಿಗಾ ವಹಿಸಬೇಕು.
ಪ್ರತಿ ಹತ್ತು ಮೀಟರ್‌ಗೊಂದು ಸೂಚನಾಫಲಕ ಅಳವಡಿಸಬೇಕು’ ಎಂದು ಎಂ.ಜಿ.ರಸ್ತೆಯ ಸಿ.ಆರ್.ಸುಧೀರ್ ಕುಮಾರ್ ಒತ್ತಾಯಿಸುತ್ತಾರೆ.
‘ವಾಹನ ಚಾಲಕರಿಗೆ ಸುಲಭವಾಗಿ ಕಾಣುವ ಸ್ಥಳಗಳಲ್ಲಿ ದೊಡ್ಡ ಸೂಚನಾ ಫಲಕ ಅಳವಡಿಸಬೇಕು. ಹದಗೆಟ್ಟ ರಸ್ತೆಗಳಿಂದಲೂ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ರಸ್ತೆಗಳ ದುರಸ್ತಿಗೆ ನಗರಸಭೆ ಗಮನಹರಿಸಬೇಕು’ ಎಂದು ಕೋಟೆ ನಿವಾಸಿ ಮಲ್ಲೇಶ್ ಆಗ್ರಹಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.