ADVERTISEMENT

ಅಜ್ಜಂಪುರ: ನಿರಂತರ ಮಳೆಗೆ ಕೊಳೆತ ಈರುಳ್ಳಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 7:38 IST
Last Updated 20 ಅಕ್ಟೋಬರ್ 2024, 7:38 IST
<div class="paragraphs"><p><strong>ಅಜ್ಜಂಪುರ ತಾಲ್ಲೂಕಿನ ಸಮೀಪ ಗೌರಾಪುರ ಬಳಿ ಅಜ್ಜಂಪುರ-ಹೊಸದುರ್ಗ ರಸ್ತೆಯಂಚಿಗೆ ಎಸೆಯಲಾಗಿರುವ ಕೊಳೆತ ಈರುಳ್ಳಿ.</strong></p></div>

ಅಜ್ಜಂಪುರ ತಾಲ್ಲೂಕಿನ ಸಮೀಪ ಗೌರಾಪುರ ಬಳಿ ಅಜ್ಜಂಪುರ-ಹೊಸದುರ್ಗ ರಸ್ತೆಯಂಚಿಗೆ ಎಸೆಯಲಾಗಿರುವ ಕೊಳೆತ ಈರುಳ್ಳಿ.

   

ಅಜ್ಜಂಪುರ: ನಿರಂತರವಾಗಿ ಸುರಿಯುತ್ತಿರುವ ಮಳೆ, ರೈತರನ್ನು ಸಂಕಷ್ಟಕ್ಕೆ ದೂಡಿದೆ. ಮಳೆಯಿಂದ ಕೊಯ್ಲಿಗೆ ಬಂದ ಈರುಳ್ಳಿ ಕೀಳಲಾಗದೆ, ಕಿತ್ತಿರುವ ಈರುಳ್ಳಿಯನ್ನು ಜಮೀನಿನಿಂದ ಹೊರತರಲಾಗದೆ, ಹೊರತಂದಿರುವ ಈರುಳ್ಳಿ ಹಸನುಗೊಳಿಸಲಾಗದೇ ಬೆಳೆಗಾರರು ಪರಿತಪಿಸುವಂತೆ ಮಾಡಿದೆ.

ಸತತ ಮಳೆಗೆ ಸಿಲುಕಿ, ಒಂದೆಡೆ ಕೃಷಿ ಜಮೀನಿನಲ್ಲಿ ಉಳಿದ ಈರುಳ್ಳಿ ಕೊಳೆಯುತ್ತಿವೆ. ಮತ್ತೊಂದೆಡೆ ಹೊರ ತರಲಾಗಿರುವ ಗಡ್ಡೆ ಹಸನುಗೊಳಿಸುವ ಮೊದಲೇ ಕರಗುತ್ತಿವೆ. ಇನ್ನೊಂದೆಡೆ ಮಾರುಕಟ್ಟೆಗೆ ಕೊಂಡೊಯ್ಯಲು ಚೀಲದಲ್ಲಿ ತುಂಬಿರುವ ಈರುಳ್ಳಿ ಕೆಟ್ಟುಹೋಗುತ್ತಿವೆ. ಇದು ರೈತರನ್ನು ಅಕ್ಷರಶಃ ಕಂಗಾಲಾಗುವಂತೆ ಮಾಡಿದೆ.

ADVERTISEMENT

ವರವಾಗಬೇಕಿದ್ದ ಮಳೆ ಶಾಪವಾಗಿ ಕಾಡುತ್ತಿದೆ. ಅತಿಯಾದ ಮಳೆ ಈರುಳ್ಳಿ ಗಡ್ಡೆಯನ್ನು ನಾಶಗೊಳಿಸುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಮಾಡಿದ್ದು, ಆದಾಯ ಕಿತ್ತುಕೊಂಡಿದೆ. ಬೆಳೆಗೆ ಮಾಡಿದ ಸಾಲ ತೀರಿಸುವುದು ಹೇಗೆ? ವರ್ಷದ ಜೀವನ ನಿರ್ವಹಣೆ ಹೇಗೆ? ಎಂಬ ಚಿಂತೆ ಆವರಿಸಿದೆ ಎಂದು ಗೌರಾಪುರದ ಈರುಳ್ಳಿ ಬೆಳೆಗಾರ ಅರುಣ್ ಕುಮಾರ್ ಕಳವಳ ವ್ಯಕ್ತಪಡಿಸಿದರು.

ಚೀಲದಲ್ಲಿ ತುಂಬಿ ಮಾರುಕಟ್ಟೆಗೆ ಕೊಂಡೊಯ್ಯಲು ಸಿದ್ಧಗೊಳಿಸಲಾದ ಈರುಳ್ಳಿ ಮಳೆಗೆ ಸಿಲುಕಿ ಕೊಳೆತಿವೆ. ಕರಗಿರುವ ಈರುಳ್ಳಿ ಗಡ್ಡೆಯನ್ನು ಚೀಲ ಸಮೇತ ರಸ್ತೆಗೆ ಎಸೆಯಲಾಗಿದೆ. ಇದು, ತಾಲ್ಲೂಕಿನ ಗೌರಾಪುರ, ಮುಗಳಿ, ಗಡೀಹಳ್ಳಿ, ಬಂಗನಗಟ್ಟೆ, ನಾರಣಾಪುರ, ಶಿವನಿ ಸೇರಿದಂತೆ ಹಲವು ಗ್ರಾಮಗಳ ರಸ್ತೆಯಂಚಿನಲ್ಲಿ ಕಾಣಸಿಗುತ್ತಿದೆ.

ಮಾರಾಟಕ್ಕೆ ಯೋಗ್ಯವಿಲ್ಲ

ಬೇಸಾಯ, ಬಿತ್ತನೆ ಬೀಜ, ಗೊಬ್ಬರ, ಕ್ರಿಮಿ-ಕೀಟನಾಶಕ, ಕಳೆನಾಶಕ, ಬೆಳವಣಿಗೆ ಟಾನಿಕ್ ಸಿಂಪಡಣೆ, ಗಡ್ಡೆ ಕೀಳುವುದು, ಹೊಲದಿಂದ ಹೊರತರುವುದು, ಸ್ವಚ್ಛಗೊಳಿಸುವುದು ಸೇರಿ ಬೆಳೆ ಬೆಳೆಯಲು ಸಾವಿರಾರು ರೂಪಾಯಿ ಖರ್ಚು ಮಾಡಲಾಗಿತ್ತು. ಮಳೆಗೆ ಸಿಲುಕಿ ಗಡ್ಡೆ ಇರಿಸಿದಲ್ಲಿಯೇ ಕೊಳೆತಿದ್ದು, ಮಾರಾಟಕ್ಕೆ ಯೋಗ್ಯವಿಲ್ಲದಂತಾಗಿವೆ. ಯಾರೂ ಖರೀದಿಗೆ ಮುಂದೆ ಬಂದಿಲ್ಲ. ಒಂದು ರೂಪಾಯಿ ಆದಾಯವೂ ಸಿಕ್ಕಿಲ್ಲ. ಮುಂದೇನು ಮಾಡಬೇಕೆಂದು ದಿಕ್ಕುತೋಚದಂತಾಗಿದೆ ಎಂದು ಹೆಬ್ಬೂರಿನ ರೈತ ನಾಗೇಂದ್ರಪ್ಪ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.