ADVERTISEMENT

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಪ್ರವಾಸಕ್ಕೆ ಇನ್ನು ಆನ್‌ಲೈನ್‌ ನೋಂದಣಿ

ನೇರವಾಗಿ ಬರುವ ವಾಹನಗಳಿಗೆ ಇಲ್ಲ ಅವಕಾಶ: ದಟ್ಟಣೆ ನಿಯಂತ್ರಣಕ್ಕೆ ಮುಂದಾದ ಜಿಲ್ಲಾಡಳಿತ

ವಿಜಯ ಕುಮಾರ್ ಎಸ್‌.ಕೆ.
Published 26 ಜೂನ್ 2024, 5:54 IST
Last Updated 26 ಜೂನ್ 2024, 5:54 IST
ಮುಳ್ಳಯ್ಯನಗಿರಿ ಪ್ರವಾಸಿ ತಾಣದಲ್ಲಿ ವಾಹನಗಳ ಸಾಲು
ಮುಳ್ಳಯ್ಯನಗಿರಿ ಪ್ರವಾಸಿ ತಾಣದಲ್ಲಿ ವಾಹನಗಳ ಸಾಲು   

ಚಿಕ್ಕಮಗಳೂರು: ಕರ್ನಾಟಕದ ಅತಿ ಎತ್ತರದ ಶಿಖರವಾದ ಮುಳ್ಳಯ್ಯನಗಿರಿ ನೋಡಲು ಪ್ರವಾಸಿಗರು ಇನ್ನು ಮುಂದೆ ನೇರವಾಗಿ ಬರುವಂತಿಲ್ಲ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಅವಕಾಶ ದೊರೆತರೆ ಮಾತ್ರ ಬರಬೇಕು!

ಹೌದು, ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ. 

ಚಿಕ್ಕಮಗಳೂರಿಗೆ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಮಳೆಗಾಲದಲ್ಲಿ ಅದರಲ್ಲೂ ವಾರಾಂತ್ಯದ ಸಾಲು ಸಾಲು ರಜೆಗಳಿರುವ ಸಂದರ್ಭಗಳಲ್ಲಿ ಸಾವಿರಾರು ವಾಹನಗಳು ಗಿರಿ ಪ್ರದೇಶಕ್ಕೆ ಲಗ್ಗೆ ಇಡುತ್ತವೆ. ಇದರಿಂದ ವಾಹನ ದಟ್ಟಣೆ ಉಂಟಾಗಿ ಪ್ರವಾಸಿಗರು ತೊಂದರೆಗೆ ಸಿಲುಕುತ್ತಿದ್ದಾರೆ. ಬಕ್ರೀದ್‌ ಸಂದರ್ಭದಲ್ಲಿ ಒಂದೇ ದಿನ 2500ಕ್ಕೂ ಹೆಚ್ಚು ವಾಹನಗಳು ಗಿರಿ ಏರಿದ್ದರಿಂದ ವಾಹನ ದಟ್ಟಣೆಯಲ್ಲಿ ಸಿಲುಕಿ ಪ್ರವಾಸಿಗರು ನರಳಿದ್ದರು.

ADVERTISEMENT

ಈ ಪರದಾಟ ತಪ್ಪಿಸಲು ಈಗ ಜಿಲ್ಲಾಡಳಿತ ಆನ್‌ಲೈನ್‌ ನೋಂದಣಿ ವ್ಯವಸ್ಥೆ ಜಾರಿಗೆ ಸಿದ್ಧತೆ ನಡೆಸಿದೆ. ನಿಗದಿತ ಶುಲ್ಕ ಪಾವತಿಸಿ ಮೊದಲೇ ನೋಂದಣಿ ಮಾಡಿಸಿಕೊಂಡ ವಾಹನಗಳನ್ನು ಮಾತ್ರ ಗಿರಿಶ್ರೇಣಿಗೆ ಬಿಡಲಾಗುವುದು. ಅದಕ್ಕಾಗಿ ಚೆಕ್‌ಪೋಸ್ಟ್‌ ತೆರೆಯುತ್ತಿದೆ. ಸಾಧ್ಯವಾದರೆ ಈ ವಾರಾಂತ್ಯದಿಂದಲೇ ಆನ್‌ಲೈನ್‌ ನೋಂದಣಿ ಆರಂಭಿಸಲು ತಯಾರಿ ನಡೆಸಿದೆ.

ಸದ್ಯ ಕೈಮರ ಬಳಿ ಚೆಕ್‌ಪೋಸ್ಟ್‌ ಇದ್ದು, ವಾರಾಂತ್ಯದಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದರಿಂದ ತರೀಕೆರೆ ರಸ್ತೆಯಲ್ಲಿ ದಟ್ಟಣೆ ಉಂಟಾಗುತ್ತಿದೆ. ಆದ್ದರಿಂದ ಅಲ್ಲಿಂದ ಎರಡು ಕಿಲೋ ಮೀಟರ್‌ ಮುಂದಕ್ಕೆ ಜಾವರೈನ್‌ ತಿರುವಿನ ಬಳಿ ಹೊಸದಾಗಿ ಚೆಕ್‌ಪೋಸ್ಟ್‌ ತೆರೆಯಲಾಗುತ್ತಿದೆ.

ರಸ್ತೆ ಬದಿಯಲ್ಲಿ ಆದಿಚುಂಚನಗಿರಿ ಮಠದ ಕಾಫಿ ತೋಟವಿದ್ದು, ರಸ್ತೆ ಬದಿಗೆ ಹೊಂದಿಕೊಂಡಂತೆ ವಾಹನ ನಿಲುಗಡೆಗೆ ಜಾಗ ಪಡೆಯಲಾಗಿದೆ. ವಾಹನ ನಿಲುಗಡೆ ತಾಣ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾಡಳಿತ ಮಂಗಳವಾರ ಆರಂಭಿಸಿದೆ.

ಜಾವರೈನ್‌ ಕ್ರಾಸ್‌ ಬಳಿ ವಾಹನ ನಿಲುಗಡೆ ತಾಣಕ್ಕೆ ಕಾಮಗಾರಿ ಆರಂಭವಾಗಿದೆ

ದಿನಕ್ಕೆ 600 ವಾಹನಗಳಿಗೆ ಸೀಮಿತ

ಬೆಳಿಗ್ಗೆ 300 ಮತ್ತು ಮಧ್ಯಾಹ್ನ 300 ವಾಹನಗಳು ಸೇರಿ ಮೊದಲ ಹಂತದಲ್ಲಿ ದಿನಕ್ಕೆ 600 ವಾಹನಗಳಿಗೆ ಸೀಮಿತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಅದೇ ರೀತಿ ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್‌ ದರ್ಗಾ ಕಡೆಗೂ 600 ವಾಹನಗಳಿಗೆ ಅವಕಾಶ ದೊರಯಲಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಇಷ್ಟೇ ವಾಹನಗಳಿಗೆ ಅವಕಾಶ ನೀಡಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಸಾಧಕ-ಬಾಧಕ ನೋಡಿಕೊಂಡು ಮುಂದಿನ ದಿನಗಳಲ್ಲಿ ಮಾರ್ಪಾಡು ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ‘ಪ್ರಜಾವಾಣಿʼಗೆ ತಿಳಿಸಿದರು.

ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ ವೆಬ್‌ಸೈಟ್‌ಗಳಲ್ಲಿ ಜಿಲ್ಲೆಗೆ ಪ್ರವಾಸಿಗರು ಬರುವ ಎಲ್ಲಾ ಸಂಪರ್ಕ ರಸ್ತೆಗಳಲ್ಲಿ ಕ್ಯೂಆರ್‌ ಕೋಡ್‌ ಆಧರಿತ ಫಲಕ ಅಳವಡಿಸಲಾಗುವುದು. ಈ ಕ್ಯೂಆರ್‌ ಕೋಡ್‌ ಬಳಿಸಿ ನೋಂದಣಿ ಮಾಡಬಹುದು ಎಂದು ಹೇಳಿದರು. ಮೊದಲು ನೋಂದಣಿ ಮಾಡಿಕೊಂಡವರಿಗೆ ಅವಕಾಶ ದೊರೆಯಲಿದೆ. ಉಳಿದ ಪ್ರವಾಸಿಗರು ಪಕ್ಕದ ಯಾವ ಸ್ಥಳಗಳಿಗೆ ತೆರಳಲು ಅವಕಾಶ ಇದೆ ಎಂಬುದನ್ನೂ ಫಲಕಗಳಲ್ಲಿ ದಾಖಲಿಸಲಾಗುವುದು ಎಂದು ವಿವರಿಸಿದರು.

ಕ್ರಮಬದ್ಧಕ್ಕೆ ಚಾರಣಕ್ಕೆ ಮನವಿ

ಎತ್ತಿನಭುಜ ಕುದುರೆಮುಖ ಕೆಮ್ಮಣ್ಣುಗುಂಡಿ ಝಡ್‌ ಪಾಯಿಂಟ್‌ ರಾಣಿಝರಿ ಸೇರಿ ಹಲವೆಡೆ ಚಾರಣಕ್ಕೆ ಅವಕಾಶ ಇತ್ತು.‌ ಕಳೆದ ವಾರಾಂತ್ಯದಲ್ಲಿ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಚಾರಣ ಹೋಗಿದ್ದರಿಂದ ಸಮಸ್ಯೆ ಉಂಟಾಗಿತ್ತು. ಬಳಿಕ  ಅರಣ್ಯ ಇಲಾಖೆ ಈಗ ನಿಷೇಧಿಸಿದೆ. ಆನ್‌ಲೈನ್‌ ನೋಂದಣಿಗೆ ಅವಕಾಶ ನೀಡಿ ಕ್ರಮ ಬದ್ಧವಾಗಿ ಚಾರಣಕ್ಕೆ ಅವಕಾಶ ನೀಡಿದರೆ ಮುಳ್ಯಯ್ಯನಗಿರಿಗೆ ಬರುವ ಪ್ರವಾಸಿಗರ ಒತ್ತಡ ಕಡಿಮೆ ಮಾಡಲು ಸಾಧ್ಯ ಎಂದು ಸ್ಥಳೀಯರು ಹೇಳುತ್ತಾರೆ.

ಅರಣ್ಯ ಇಲಾಖೆ ಹೇರಿರುವ ನಿಷೇಧ ತೆರವುಗೊಳಿಸಿ ತೊಂದರೆ ಆಗದ ರೀತಿಯಲ್ಲಿ ಚಾರಣಕ್ಕೆ ಅವಕಾಶ ನೀಡುವ ಸಂಬಂಧ ಮಾತುಕತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.