ADVERTISEMENT

ಭತ್ತದ ನಾಟಿ ಕಾರ್ಯ ಚುರುಕು

ಶೃಂಗೇರಿ ತಾಲ್ಲೂಕಿನಲ್ಲಿ ಉತ್ತಮ ಮಳೆ– ಶೇ 50ರಷ್ಟು ಬಿತ್ತನೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 17:16 IST
Last Updated 25 ಜೂನ್ 2018, 17:16 IST
ಶೃಂಗೇರಿ ತಾಲ್ಲೂಕಿನಲ್ಲಿ ಭತ್ತದ ನಾಟಿ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಕೃಷಿಕರು.
ಶೃಂಗೇರಿ ತಾಲ್ಲೂಕಿನಲ್ಲಿ ಭತ್ತದ ನಾಟಿ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಕೃಷಿಕರು.   

‌‌ಶೃಂಗೇರಿ: ತಾಲ್ಲೂಕಿನಲ್ಲಿ ಹಲವು ದಿನಗಳಿಂದ ಸತತ ಮಳೆಯಾದ ಪರಿಣಾಮ ಭತ್ತದ ನಾಟಿ ಕಾರ್ಯ ಚುರುಕುಗೊಂಡಿದೆ. ತಾಲ್ಲೂಕಿನ ಕಸಬಾ ಮತ್ತು ಕಿಗ್ಗಾ ಹೋಬಳಿಗಳಲ್ಲಿ ಬಿತ್ತನೆ ಕಾರ್ಯ ಮುಂದುವರಿದ್ದು, ಶೇ 50ರಷ್ಟು ಭತ್ತದ ಬಿತ್ತನೆಯಾಗಿದೆ.

ತಾಲ್ಲೂಕಿನಲ್ಲಿ ಸುಮಾರು 2,500 ಹೆಕ್ಟೇರ್ ಪ್ರದೇಶಗಳಲ್ಲಿ ಮೊದಲು ಭತ್ತವನ್ನು ಬೆಳೆಸಲಾಗುತ್ತಿತ್ತು. ಆದರೆ, ಭತ್ತ ಬೆಳೆಸುವ ಪ್ರದೇಶಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕಾರ್ಮಿಕರ ಕೊರತೆ, ಅವರ ಸಂಬಳವನ್ನು ಲೆಕ್ಕಹಾಕಿದರೆ ಮಲೆನಾಡಿನಲ್ಲಿ ಭತ್ತವನ್ನು ಬೆಳೆಸುವುದು ರೈತರಿಗೆ ಕಷ್ಟಕರವಾಗುತ್ತಿದೆ.

ದೀರ್ಘಾವಧಿಯಲ್ಲಿ ಬೆಳೆಯುವ ಅಸೂಡಿ, ಕೊಯಮುತ್ತೂರು, ರತ್ನಚೌಡಿ, ಜೋಳಗ, ಜೀರಿಗೆಸಾಲು ಭತ್ತದ ತಳಿಗಳನ್ನು ರೈತರು ಕೈಬಿಟ್ಟಿದ್ದಾರೆ. ಹೊಸ ತಳಿಗಳತ್ತ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಹೈಬ್ರಿಡ್ ತಳಿಗಳಾದ ಐಇಟಿ, ಇಂಟಾನ್, ಶರಾವತಿ, ಎಂ.ಟಿ, ಬಾಂಗ್ಲಾರೈಸ್ ಮೊದಲಾದ ತಳಿಗಳನ್ನು ಹೆಚ್ಚಾಗಿ ಬೆಳೆಸಲಾಗುತ್ತಿದೆ. ಕಡಿಮೆ ಅವಧಿಯಲ್ಲಿ ಭತ್ತದ ಬೆಳೆಯನ್ನು ತೆಗೆಯುವ ಅನಿವಾರ್ಯತೆ ರೈತರಲ್ಲಿದೆ. ಕಾರಣ ಒಂದು ಎಕರೆಗೆ ಸುಮಾರು ₹ 15 ಸಾವಿರ ಖರ್ಚಾದರೆ ರೈತರಿಗೆ ಸಿಗುವ ಲಾಭಾಂಶ ಅತಿ ಕಡಿಮೆ. ಹಾಗಾಗಿ, ರೈತರು ಮನೆಗೆ ಬೇಕಾಗುವಷ್ಟು ಭತ್ತ ಬೆಳೆಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ADVERTISEMENT

ಭತ್ತದ ನಾಟಿಗೆ ಬೇಕಾಗುವಷ್ಟು ಮಳೆಯ ಅವಶ್ಯಕತೆಯಿದೆ. ಕಳೆದ ಬಾರಿ ಜನವರಿಯಿಂದ ಜೂನ್‌ ತನಕ ತಾಲ್ಲೂಕಿನಲ್ಲಿ 610.6 ಮಿ.ಮೀ. ಮಳೆಯಾಗಿತ್ತು. ಪ್ರಸ್ತುತ ಇಲ್ಲಿ ತನಕ ಈ ವರ್ಷ 1324.4 ಮಿ.ಮೀ. ಮಳೆಯಾಗಿದೆ. ಮಳೆಯಿಂದ ನೀರಿನ ಪ್ರಮಾಣ ಏರಿಕೆಯಾದರೂ ಮುಂದಿನ ತಿಂಗಳಲ್ಲಿ ಮಳೆ ಹೆಚ್ಚಾದರೆ ಮಾತ್ರ ಉತ್ತಮ ಬೆಳೆಯನ್ನು ನಿರೀಕ್ಷಿಸಬಹುದು ಎಂದು ಅಡ್ಡಗದ್ದೆಯ ಕೃಷಿಕ ಹೆಬ್ಬಿಗೆ ಕೃಷ್ಣಮೂರ್ತಿ ಅವರ ಅಭಿಪ್ರಾಯ.

ಸಾಮಾನ್ಯವಾಗಿ ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷ ಮಳೆಯಾಗಿ ಸ್ವಾಭಾವಿಕವಾಗಿ ನೀರಿನ ಸೆಲೆಗಳಾದ ಹಳ್ಳ, ಕೊಳ್ಳಗಳು ಭರ್ತಿಯಾಗುತ್ತಿತ್ತು. ಈ ಬಾರಿ ಮಳೆಯ ಕೊಂಚ ಏರಿಕೆಯಿಂದ ತಾಲ್ಲೂಕಿನ ರೈತರು ಭತ್ತದ ಬಿತ್ತನೆಗೆ ಸಿದ್ಧತೆ ಮಾಡುತ್ತಿದ್ದಾರೆ.

ಭತ್ತಕ್ಕೆ ಇನ್ನಷ್ಟು ಉತ್ತೇಜನ ಬೇಕು

ಶೃಂಗೇರಿ ತಾಲ್ಲೂಕಿನಲ್ಲಿ ಹಲವು ಕಡೆ ರೈತರು ಭತ್ತದ ಬೀಜನೆ ಮಾಡುತ್ತಿದ್ದು, ಕೆಲವು ಕಡೆ ಗದ್ದೆಗಳನ್ನು ಹಡ್ಲು ಬಿಟ್ಟಿದ್ದಾರೆ. ಸರ್ಕಾರ ಭತ್ತಕ್ಕೆ ನೀಡುವ ಬೆಂಬಲ ಬೆಲೆ ಅತ್ಯಂತ ಕಡಿಮೆ. ಭತ್ತದ ನಾಟಿಗೆ ತಗಲುವ ವೆಚ್ಚ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಭತ್ತಬೀಜನೆಗೆ ಅಗತ್ಯವಿರುವ ಬಿತ್ತನೆಬೀಜ, ಗೊಬ್ಬರವನ್ನು ಸಹಾಯಧನದಲ್ಲಿ ದರಗಳಲ್ಲಿ ನೀಡಿದರೆ ಸಾಲದು. ಭತ್ತ ಆಹಾರ ಧಾನ್ಯ, ಈ ಆಹಾರಧಾನ್ಯಕ್ಕೆ ಇನ್ನಷ್ಟು ಉತ್ತೇಜನ ನೀಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕಿದೆ ಎನ್ನುತ್ತಾರೆ ಶೃಂಗೇರಿ ರೈತ ಸಂಘದ ಅಧ್ಯಕ್ಷ ಕಾನೋಳ್ಳಿ ಚಂದ್ರಶೇಖರ್.

ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ಏರಿಕೆಯಾಗಿದ್ದು, ಭತ್ತದ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಬಿತ್ತನೆಬೀಜ, ರಂಜಕಯುಕ್ತ ಸಾವಯವ ಗೊಬ್ಬರ ಇಲಾಖೆಯಿಂದ ಸಹಾಯಧನ ರೂಪದಲ್ಲಿ ನೀಡಲಾಗಿದೆ.
- ಶಶಿಧರ್,ಸಹಾಯಕ ಕೃಷಿ ನಿರ್ದೇಶಕ, ಶೃಂಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.