ADVERTISEMENT

ಕಾಳುಮೆಣಸು ಕ್ವಿಂಟಾಲ್‌ಗೆ ₹65 ಸಾವಿರಕ್ಕೆ ಏರಿಕೆ

ಕಳಸ ಮಾರುಕಟ್ಟೆಯಲ್ಲಿ ಗರಿಷ್ಠ ಧಾರಣೆ

ರವಿ ಕೆಳಂಗಡಿ
Published 24 ಜುಲೈ 2023, 20:24 IST
Last Updated 24 ಜುಲೈ 2023, 20:24 IST
ಕಳಸದ ಕಾಫಿ ತೋಟದಲ್ಲಿ ಬೆಳೆದಿರುವ ಕಾಳುಮೆಣಸಿನ ಬಳ್ಳಿ
ಕಳಸದ ಕಾಫಿ ತೋಟದಲ್ಲಿ ಬೆಳೆದಿರುವ ಕಾಳುಮೆಣಸಿನ ಬಳ್ಳಿ   

ಕಳಸ (ಚಿಕ್ಕಮಗಳೂರು): ಕೆಲ ದಿನಗಳ ಹಿಂದೆ ಕೆ.ಜಿ.ಗೆ ₹480ರಿಂದ ₹500 ಇದ್ದ ಕಾಳುಮೆಣಸು ದರ, ದಿಢೀರ್ ಆಗಿ ₹650ಕ್ಕೆ ಏರಿಕೆ ಕಂಡಿದೆ.

ಕಾಳುಮೆಣಸಿನ ಧಾರಣೆ ಕೇರಳದ ಕೊಚ್ಚಿ ಮಾರುಕಟ್ಟೆಯಲ್ಲಿ ಸತತವಾಗಿ ಏರುತ್ತಿದೆ. ಗುಣಮಟ್ಟದ ಕಾಳುಮೆಣಸಿಗೆ ಕೊಚ್ಚಿಯಲ್ಲಿ ಶನಿವಾರ ಗರಿಷ್ಠ ₹540 ಇದ್ದರೆ ಸೋಮವಾರ ಕೆ.ಜಿ.ಯೊಂದಕ್ಕೆ ಗರಿಷ್ಠ ₹570 ಧಾರಣೆ ದೊರೆತಿದೆ. ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ಕೆ.ಜಿ. ಕಾಳುಮೆಣಸಿನ ದರ ಗರಿಷ್ಠ ₹650ಕ್ಕೆ ತಲುಪಿತ್ತು ಎನ್ನುತ್ತಾರೆ ವ್ಯಾಪಾರಸ್ಥರು.

‘ಕಳೆದ ವಾರದವರೆಗೂ ತೇವಾಂಶ ಪರೀಕ್ಷಿಸಿ ವ್ಯಾಪಾರ ನಡೆಯುತ್ತಿತ್ತು. ಆದರೆ, ಬೇಡಿಕೆ ಹೆಚ್ಚಿದ್ದರಿಂದ ಈಗ ಎಲ್ಲ ಮಾನದಂಡಗಳನ್ನು ಬಿಟ್ಟು ಖರೀದಿಸಲಾಗುತ್ತಿದೆ. ನಾಲ್ಕು ದಿನಗಳಲ್ಲಿ ಕಳಸ ಒಂದರಿಂದಲೇ 30 ಟನ್‍ಗೂ ಹೆಚ್ಚು ಕಾಳುಮೆಣಸು ಖರೀದಿ ಆಗಿ ಹೊರಗಡೆ ಹೋಗಿದೆ’ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಾರೆ.

ADVERTISEMENT
ಕಾಳುಮೆಣಸು (ಸಾಂದರ್ಭಿಕ ಚಿತ್ರ)

ಕಾಳುಮೆಣಸಿನ ಆಮದು ಬೆಲೆ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ವದಂತಿ ಇದೆ. ಇದನ್ನು ತಿಳಿದ ವ್ಯಾಪಾರಿಗಳು ಸಂಗ್ರಹ ಮಾಡುತ್ತಿದ್ದಾರೆ. ದೇಶೀಯವಾಗಿ ಬಹಳಷ್ಟು ಬೇಡಿಕೆ ಇರುವ ಕಾರಣ ವ್ಯಾಪಾರಿಗಳು ಹೆಚ್ಚಿನ ಬೆಲೆ ತೆತ್ತು ಖರೀದಿ ಮಾಡುತ್ತಿದ್ದಾರೆ ಎನ್ನುವುದು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ.

‘ಜಾಗತಿಕವಾಗಿ ಕಾಳುಮೆಣಸಿನ ರಫ್ತಿನಲ್ಲಿ ಅಗ್ರಸ್ಥಾನದಲ್ಲಿ ಇರುವ ವಿಯೆಟ್ನಾಂ ದೇಶದಲ್ಲಿ ಸದ್ಯ ಸುಮಾರು 40 ಸಾವಿರ ಟನ್ ಕಾಳುಮೆಣಸಿನ ಸಂಗ್ರಹ ಇದೆ. ಮೂರು ತಿಂಗಳುಗಳಿಂದ ಆಮದು ನಿಲ್ಲಿಸಿದ್ದ ಚೀನಾ ಕೂಡ ಈಗ ಆಮದು ಶುರು ಮಾಡಿದೆ. ಇದರಿಂದ ವಿಯೆಟ್ನಾಂನಲ್ಲಿ ಜೊತೆಗೆ ವಿಶ್ವ ಮಾರುಕಟ್ಟೆಯಲ್ಲಿ ಕಾಳುಮೆಣಸು ಕೊರತೆ ಉಂಟಾಗಿದೆ. ಹೀಗಾಗಿ ಧಾರಣೆ ಒಂದೇ ಸಮನೆ ಏರುತ್ತಿದೆ’ ಎಂದು ಮಾರುಕಟ್ಟೆ ಅಧ್ಯಯನ ಮಾಡುವ ಯುವ ಬೆಳೆಗಾರ ಗೌತಹಳ್ಳಿ ಕರಣ್ ಅಭಿಪ್ರಾಯಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.