ADVERTISEMENT

ಚಿಕ್ಕಮಗಳೂರು | ಪೆಟ್ರೋಲ್, ಡೀಸೆಲ್ ದರ ಏರಿಕೆ: ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 8:19 IST
Last Updated 16 ಜೂನ್ 2024, 8:19 IST
<div class="paragraphs"><p>ಕಿವಿಯಲ್ಲಿ ಹೂವು ಮತ್ತು ಕೈಯಲ್ಲಿ ಚಿಪ್ಪು ಹಿಡಿದು ವಿಭಿನ್ನವಾಗಿ&nbsp;ಪ್ರತಿಭಟನೆ ನಡೆಸಿದ&nbsp;ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು</p></div>

ಕಿವಿಯಲ್ಲಿ ಹೂವು ಮತ್ತು ಕೈಯಲ್ಲಿ ಚಿಪ್ಪು ಹಿಡಿದು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು

   

ಚಿಕ್ಕಮಗಳೂರು: ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಿವಿಯಲ್ಲಿ ಹೂವು ಮತ್ತು ಕೈಯಲ್ಲಿ ಚಿಪ್ಪು ಹಿಡಿದು ವಿಭಿನ್ನವಾಗಿ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ.ರವಿ ನೇತೃತ್ವದಲ್ಲಿ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್‌ನವರು ಸ್ಕೂಟರ್ ಶವಯಾತ್ರೆ ನಡೆಸಿದ್ದರು. ಈಗ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಮಾಡಿದರೆ ರಾಜ್ಯ ಸರ್ಕಾರ ಏರಿಕೆ ಮಾಡಿದೆ. ಜೊತೆಗೆ ಅಬಕಾರಿ ಸುಂಕಗಳ ಹೆಚ್ಚಳ, ಆಸ್ತಿ ನೋಂದಣಿ ಶುಲ್ಕ, ಪಹಣಿ ಶುಲ್ಕ, ಜನನ ಮತ್ತು ಮರಣ ಪ್ರಮಾಣ ಪತ್ರದ ಶುಲ್ಕಗಳನ್ನು ಹೆಚ್ಚಳ ಮಾಡಲಾಗಿದೆ’ ಎಂದು ಸಿ.ಟಿ.ರವಿ ಹೇಳಿದರು.

‘ಜನರ ಪಾಲಿಗೆ ಕಾಂಗ್ರೆಸ್ ಶಾಪವಾಗಿದ್ದು, ಏರಿಕೆ ಮಾಡಿರುವ ಎಲ್ಲಾ ಬೆಲೆಗಳನ್ನು ಇಳಿಸಬೇಕು. ಇಲ್ಲದಿದ್ದರೆ ಅಧಿಕಾರದಿಂದ ಇಳಿಯಬೇಕು. ಬೆಲೆ ಇಳಿಸದಿದ್ದರೆ ಜನಾಂದೋಲನದ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರದ ಗದ್ದುಗೆಯಿಂದ ಇಳಿಸಿ ಸ್ಮಶಾನಕ್ಕೆ ಕಳುಹಿಸುವ ಕೆಲಸವನ್ನು ನಾವು ಮಾಡುತ್ತೇವೆ’ ಎಂದರು.

‘ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ವಿರುದ್ಧವಾಗಿ ಚೊಂಬಿನ ಜಾಹೀರಾತನ್ನು ಕಾಂಗ್ರೆಸ್ ನೀಡಿತ್ತು. ಈಗ ಜನರ ಕಿವಿಗೆ ಹೂವಿಟ್ಟು, ಚಿಪ್ಪನ್ನು ಕೈಗೆ ನೀಡಿದೆ. ಭ್ರಷ್ಟಾಚಾರ ಮಾಡುವುದು, ಬೆಲೆ ಏರಿಕೆ ಮಾಡುವುದು ಕಾಂಗ್ರೆಸ್ ನೀತಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ‘ಒಂದಿಲ್ಲೊಂದು ಬೆಲೆ ಏರಿಕೆ ಮೂಲಕ ಜನವಿರೋಧಿ ಆಡಳಿತವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಈಗ ಆರನೆ ಗ್ಯಾರಂಟಿಯಾಗಿ ಚಿಪ್ಪು ಮತ್ತು ಏಳನೇ ಗ್ಯಾರಂಟಿಯಾಗಿ ಚೊಂಬನ್ನು ಜನರ ಕೈಗೆ ನೀಡಿದೆ’ ಎಂದು ದೂರಿದರು.

ಬಿಜೆಪಿ ಜಿಲ್ಲಾ ವಕ್ತಾರ ಟಿ.ರಾಜಶೇಖರ್, ಮುಖಂಡರಾದ ಮಧುಕುಮಾರ್ ರಾಜ್ ಅರಸ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.