ADVERTISEMENT

ಆಲ್ದೂರು: ಎಲ್ಲೆಂದರಲ್ಲಿ ಕಸದ ರಾಶಿ

ಸ್ವಚ್ಛತಾ ಕಾರ್ಯದಲ್ಲಿ ನಿರ್ಲಕ್ಷ್ಯ; ಪಂಚಾಯಿತಿ ವಿರುದ್ಧ ಜನರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 6:40 IST
Last Updated 12 ಜೂನ್ 2024, 6:40 IST
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ಬದಿಯಲ್ಲಿ ಬಿದ್ದಿರುವ ಕಸದ ರಾಶಿಯಲ್ಲಿ ಆಹಾರ ಅರಸುತ್ತಿರುವ ಬೀಡಾಡಿ ದನಗಳು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ಬದಿಯಲ್ಲಿ ಬಿದ್ದಿರುವ ಕಸದ ರಾಶಿಯಲ್ಲಿ ಆಹಾರ ಅರಸುತ್ತಿರುವ ಬೀಡಾಡಿ ದನಗಳು   

ಆಲ್ದೂರು: ಪಟ್ಟಣದ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬರುತ್ತಿದ್ದು, ಸ್ಥಳೀಯ ಆಡಳಿತ ಕಸ ವಿಲೇವಾರಿಯನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಆವರಣ ಗೋಡೆಯ ಪಕ್ಕ, ಸಂತೆ ಮೈದಾನ ವಾರ್ಡ್‌ನ ಹಂದಿ ಮಾಂಸದ ಅಂಗಡಿಯ ಸಮೀಪ, ಆಟೋ ನಿಲ್ದಾಣದ ಹತ್ತಿರ ಕಸ ರಾಶಿಗಟ್ಟಲೆ ಬಿದ್ದಿದ್ದು, ಪಂಚಾಯಿತಿ  ಸ್ವಚ್ಛತಾ ಕಾರ್ಯ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ಲಾಸ್ಟಿಕ್‌ ಜತೆಗೆ ಕೊಳೆತ ಹಣ್ಣು ಮತ್ತು ತರಕಾರಿಗಳನ್ನು ಎಸೆಯುತ್ತಿದ್ದು ಜಾನುವಾರುಗಳು ಇದನ್ನು ತಿನ್ನಲು ಕಸದ ರಾಶಿಗೆ ಬಾಯಿ ಹಾಕುತ್ತಿದ್ದು, ಪ್ಲಾಸ್ಟಿಕ್‌ ಕೂಡ ಮೂಕ ಪ್ರಾಣಿಗಳ ಒಡಲು ಸೇರುತ್ತಿದೆ. ಶಾಲೆಗಳ ಸಮೀಪದಲ್ಲಿ ಕಸದ ರಾಶಿ ಇರುವುದರಿಂದ ದುರ್ವಾಸನೆ ಮತ್ತು ಸೊಳ್ಳೆಗಳ ಕಾಟದಿಂದ ವಿದ್ಯಾರ್ಥಿಗಳು, ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

ಕಳೆದ ತಿಂಗಳು ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 11 ಡೆಂಗಿ ಪ್ರಕರಣಗಳು ದಾಖಲಾಗಿವೆ. ಶಾಲಾ ಮಕ್ಕಳಿಗೆ ಸಾಂಕ್ರಾಮಿಕ ಕಾಯಿಲೆ ಹರಡಿದರೆ ಯಾರು ಹೊಣೆ ಎಂದು ಪ್ರಶ್ನಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಅರೇನೂರು ಸುಪ್ರೀತ್.

‘ಎಲ್ಲಿ ಬೇಕೆಂದರಲ್ಲಿ ಕಸ ಎಸೆಯುವರ ವಿರುದ್ಧ ಕಠಿಣ ಕ್ರಮ ಜರುಗಿಸದ ಕಾರಣ, ಕಸದ ಸಮಸ್ಯೆ ಮುಂದುವರಿದಿದೆ. ಸ್ಥಳೀಯ ಜನಪ್ರತಿನಿಧಿಗಳು, ಪಂಚಾಯತಿಯವರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಸಂತೆ ಮೈದಾನ ವಾರ್ಡ್‌ ನಿವಾಸಿ ಎ.ಆರ್‌. ನಾಗರಾಜ್ ಹೇಳಿದರು.

ಸಂತೆ ಮೈದಾನ ವಾರ್ಡಿನ ಹಂದಿ ಮಾಂಸದ ಮಳಿಗೆಯ ಪಕ್ಕ ಬಿದ್ದಿರುವ ಕಸದ ರಾಶಿ
ಪಟ್ಟಣದ ಆಟೊರಿಕ್ಷಾ ನಿಲ್ದಾಣದ ಬಳಿ ಬಿದ್ದಿರುವ ಕಸದ ರಾಶಿ

Highlights - ಪ್ರಾಣಿಗಳ ಹೊಟ್ಟೆ ಸೇರುತ್ತಿರುವ ಪ್ಲಾಸ್ಟಿಕ್ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಸ ಎಸೆಯುವವರಿಗೆ ದಂಡ ವಿಧಿಸಲು ಆಗ್ರಹ

Quote - ‘ಕಸ ಹಾಕುತ್ತಿರುವ ವ್ಯಕ್ತಿಗಳ ಮಾಹಿತಿ ಲಭಿಸಿದೆ. ಅವರಿಗೆ ಎಚ್ಚರಿಕೆ ನೀಡಲಾಗಿದೆ. ನೋಟಿಸ್ ಜಾರಿಗೊಳಿಸಿ ದಂಡ ವಿಧಿಸಲು ಸಿದ್ಧತೆ ನಡೆದಿದೆ ಶಂಶೂನ್ ನಹರ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

Quote - ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ವಹಿಸುವ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು. ಕಸ ವಿಲೇವಾರಿಗೆ ಕ್ರಮ ವಹಿಸಿ ಅಲ್ಲಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗುವುದು ಜಯಶೀಲಾ ಚಿದಂಬರ್‌ ಪಂಚಾಯಿತಿ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.