ADVERTISEMENT

ಮುಳ್ಳಯ್ಯನಗಿರಿ: ಸೆನ್ಸಾರ್ ಆಧಾರಿತ ಚೆಕ್‌ಪೋಸ್ಟ್‌, ವಾಹನಗಳು ಸಂಪೂರ್ಣ ಸ್ಕ್ಯಾನ್

ವಿಜಯಕುಮಾರ್ ಎಸ್.ಕೆ.
Published 30 ಆಗಸ್ಟ್ 2023, 6:56 IST
Last Updated 30 ಆಗಸ್ಟ್ 2023, 6:56 IST
ದತ್ತಪೀಠ ರಸ್ತೆಯಲ್ಲಿ ವಾಹನಗಳ ಸಾಲು
ದತ್ತಪೀಠ ರಸ್ತೆಯಲ್ಲಿ ವಾಹನಗಳ ಸಾಲು   

ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ದತ್ತಪೀಠಲ್ಲಿ ವಾರಾಂತ್ಯದಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆ ನಿಯಂತ್ರಣಕ್ಕೆ ಸೆನ್ಸಾರ್ ಆಧಾರಿತ ಸ್ಮಾರ್ಟ್‌ ಪಾರ್ಕಿಂಗ್ ಮತ್ತು ಚೆಕ್‌ಪೋಸ್ಟ್‌ ನಿರ್ಮಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.

ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ ಮತ್ತು ಸುತ್ತಮುತ್ತಲ ಗಿರಿಶ್ರೇಣಿಯಲ್ಲಿ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಾರಾಂತ್ಯದಲ್ಲಿ ಸಾವಿರಾರು ವಾಹನಗಳು ಗಿರಿ ಏರುತ್ತಿದ್ದು, ವಾಹನ ದಟ್ಟಣೆ ಉಂಟಾಗುತ್ತಿದೆ. ದಟ್ಟಣೆ ನಡುವೆ ಸಿಲುಕಿ ಪ್ರವಾಸಿಗರು ಪರದಾಡುತ್ತಿದ್ದು, ನಿಯಂತ್ರಿಸುವ ಕೆಲಸ ಪೊಲೀಸರನ್ನೂ ಹೈರಾಣಾಗಿಸಿದೆ.

ಸೀತಾಳಯ್ಯನಗಿರಿ ಮತ್ತು ದತ್ತಪೀಠದ ಬಳಿ ಈಗಿರುವ ವಾಹನ ನಿಲುಗಡೆ ತಾಣಗಳನ್ನು ಸೆನ್ಸಾರ್ ಆಧಾರಿತ ಸ್ಮಾರ್ಟ್‌ ಪಾರ್ಕಿಂಗ್ ಮಾಡಲು ತಯಾರಿ ನಡೆದಿದೆ. ಗಿರಿಯ ಕೆಳಭಾಗದಲ್ಲೂ ಸೆನ್ಸಾರ್ ಆಧಾರಿತ ಚೆಕ್‌ಪೋಸ್ಟ್‌ ನಿರ್ಮಿಸಲು ಉದ್ದೇಶಿಸಲಾಗಿದೆ.

ADVERTISEMENT

ಈಗ ಕೈಮರ ಬಳಿ ಇರುವ ಚೆಕ್‌ಪೋಸ್ಟ್‌ ತಿಪ್ಪನಹಳ್ಳಿ ಎಸ್ಟೇಟ್‌ ಕ್ರಾಸ್‌ ಬಳಿಗೆ ಸ್ಥಳಾಂತರ ಮಾಡಿ ಅಲ್ಲಿನ ಸ್ಮಾರ್ಟ್‌ ಚೆಕ್‌ಪೋಸ್ಟ್‌ ನಿರ್ಮಿಸಲು  ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ರೂಪುರೇಷೆ ಸಿದ್ಧಪಡಿಸಿದೆ. ಎಐಟಿ ಟ್ರಸ್ಟ್‌ ಕೂಡ 15 ಅಡಿ ಜಾಗ ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದೆ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸೆನ್ಸಾರ್ ಆಧಾರಿತ ಟೋಲ್‌ಗೇಟ್‌ನಲ್ಲಿ ವಾಹನಗಳ ತಪಾಸಣೆ ನಡೆಯಲಿದೆ. ವಾಹನದ ಸಂಖ್ಯೆ, ಅದಲ್ಲಿರುವ ಪ್ರವಾಸಿಗರ ಸಂಖ್ಯೆ, ಕಾರಿನಲ್ಲಿರುವ ಎಲ್ಲಾ ವಸ್ತುಗಳೂ ಸ್ಕ್ಯಾನ್ ಆಗಲಿವೆ. ಮಾರಾಕಾಸ್ತ್ರ, ಮದ್ಯದ ಬಾಟಲಿ ಇದ್ದರೂ ಈ ಸ್ಕ್ಯಾನರ್‌ನಲ್ಲಿ ಪತ್ತೆಯಾಗಲಿವೆ. ಮದ್ಯದ ಬಾಟಲಿಯನ್ನು ಚೆಕ್‌ಪೋಸ್ಟ್‌ನಲ್ಲಿಯೇ ಇಟ್ಟು, ವಾಪಸ್ ಬರುವಾಗ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ವಿವರಿಸಿದರು.

ಗಿರಿಯ ಮೇಲ್ಭಾಗದಲ್ಲಿ ಮದ್ಯ ಸೇವನೆ ಮಾಡಿ ಬಾಟಲಿಗಳನ್ನು ಬಿಸಾಡುವುದಕ್ಕೆ ಕಡಿವಾಣ ಹಾಕಿದಂತೆ ಆಗಲಿದೆ. ಪ್ಲಾಸ್ಟಿಕ್ ನೀರಿನ ಬಟಾಲಿಗಳನ್ನು ಕೊಂಡೊಯ್ಯುವುದನ್ನೂ ತಡೆಯಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಟೋಲ್‌ಗೇಟ್‌ ಬಳಿ ಹೈಟೆಕ್ ಶೌಚಾಲಯ, ವಿಶ್ರಾಂತಿ ಕೊಠಡಿ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ರೂಪುರೇಷೆ ತಯಾರಾಗಿದೆ. ಸೀತಾಳಯ್ಯನಗಿರಿ ಮತ್ತು ದತ್ತಪೀಠದ ವಾಹನ ನಿಲುಗಡೆ ತಾಣದಲ್ಲಿ ಎಷ್ಟು ವಾಹನಗಳಿವೆ ಎಂಬುದು ಚೆಕ್‌ಪೋಸ್ಟ್‌ನಲ್ಲಿಯೇ ಗೊತ್ತಾಗಲಿದೆ. ನಿಗದಿತ ವಾಹನಗಳಿಗಷ್ಟೇ ಅವಕಾಶ ಇರಲಿದ್ದು, ಆ ವಾಹನಗಳು ಕೆಳಗೆ ಇಳಿದ ಬಳಿಕವೇ ಬೇರೆ ವಾಹನಗಳನ್ನು ಗಿರಿಯ ಮೇಲ್ಭಾಗಕ್ಕೆ ಬಿಡುವ ವ್ಯವಸ್ಥೆಯಾಗಲಿದೆ ಎಂದು ಹೇಳಿದರು.

ಗಿರಿಯ ಮೇಲೆ ಏರುವ ವಾಹನಗಳಿಗೆ ವಾಪಸ್ ಬರಲು ಸಮಯ ನಿಗದಿ ಮಾಡಲಾಗುವುದು. ನಿಗದಿತ ಸಮಯದಲ್ಲಿ ವಾಪಸ್ ಬರದಿದ್ದರೆ ದಂಡ ‍ಪಾವತಿಸಬೇಕಾಗುತ್ತದೆ. ವಾಹನಗಳಿಗೆ ಎಷ್ಟು ದರ ನಿಗದಿ ಮಾಡಬೇಕು, ದಂಡದ ಮೊತ್ತ ಎಷ್ಟಿರಬೇಕು ಎಂಬುದರ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ತೀರ್ಮಾನ ಆಗಲಿದೆ ಎಂದು ವಿವರಿಸಿದರು.

ಖಾಸಗಿ ಸಹಭಾಗತ್ವದಲ್ಲಿ ಯೋಜನೆ

ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಆಲೋಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಎರಡೂ ಕಡೆ ವಾಹನ ನಿಲುಗಡೆ ತಾಣ ಸ್ಮಾರ್ಟ್‌ ಚೆಕ್‌ಪೋಸ್ಟ್‌ ಶೌಚಾಲಯ ಕುಡಿಯುವ ನೀರು ಸೇರಿ ಎಲ್ಲ ವ್ಯವಸ್ಥೆ ಮಾಡಿಕೊಂಡು ನಿರ್ವಹಣೆ ಮಾಡಬೇಕಾಗತ್ತದೆ. ಟೆಂಡರ್ ಮೂಲಕ ಖಾಸಗಿ ಸಂಸ್ಥೆಗಳಿಗೆ ಈ ಜವಾಬ್ದಾರಿ ವಹಿಸುವುದು ಸೂಕ್ತ ಎಂಬ ಆಲೋಚನೆ ಇದೆ. ಇನ್ನೂ ತೀರ್ಮಾನ ಅಂತಿಮವಾಗಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.