ADVERTISEMENT

ಪ್ಲೆವಿ ವೈರಸ್‌ನಿಂದ ಮಂಗನ ಕಾಯಿಲೆ: ಡಾ.ಆಕರ್ಷ

ಆರೋಗ್ಯ ಮಾಹಿತಿ ಕಾರ್ಯಾಗಾರದಲ್ಲಿ ‘ಮಂಗನ ಕಾಯಿಲೆ’ ಬಗ್ಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 14:23 IST
Last Updated 20 ನವೆಂಬರ್ 2024, 14:23 IST
ನರಸಿಂಹರಾಜಪುರ ತಾಲ್ಲೂಕು ವರ್ಕಾಟೆ ಕಾಲೋನಿಯಲ್ಲಿ ಮಂಜುಶ್ರೀ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ಮಂಗಳವಾರ ನಡೆದ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಡಾ.ಆಕರ್ಷ ಮಾತನಾಡಿದರು
ನರಸಿಂಹರಾಜಪುರ ತಾಲ್ಲೂಕು ವರ್ಕಾಟೆ ಕಾಲೋನಿಯಲ್ಲಿ ಮಂಜುಶ್ರೀ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ಮಂಗಳವಾರ ನಡೆದ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಡಾ.ಆಕರ್ಷ ಮಾತನಾಡಿದರು   

ವರ್ಕಾಟೆ(ಎನ್.ಆರ್.ಪುರ): ಸೋಂಕಿತ ಮಂಗನಿಗೆ ಕಚ್ಚಿರುವ ಉಣುಗು ಮನುಷ್ಯರಿಗೆ ಕಚ್ಚಿದರೆ ಮಂಗನ ಕಾಯಿಲೆ ಹರಡುತ್ತದೆ ಎಂದು ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯ ಸಾಂಕ್ರಾಮಿಕ ರೋಗಶಾಸ್ತ್ರ ತಜ್ಞ ಡಾ.ಆಕರ್ಷ ಹೇಳಿದರು.

ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯ ವರ್ಕಾಟೆ ಕಾಲೊನಿಯ ಸಮುದಾಯ ಭವನದಲ್ಲಿ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಜುಶ್ರೀ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ನಡೆದ ಆರೋಗ್ಯ ಮಾಹಿತಿ ಕಾರ್ಯಾಗಾರದಲ್ಲಿ ‘ಮಂಗನ ಕಾಯಿಲೆ’ ಬಗ್ಗೆ ಮಾಹಿತಿ ನೀಡಿದರು.

ಪ್ಲೆವಿ ವೈರಸ್‌ನಿಂದ ಮಂಗನ ಕಾಯಿಲೆ ಬರುತ್ತದೆ. ಮಂಗನ ಕಾಯಿಲೆ ಬಂದವರಿಗೆ ಮೈ–ಕೈ ನೋವು, ಕುತ್ತಿಗೆ ಹಿಂಬದಿಯಲ್ಲಿ ನೋವು, ಹೊಟ್ಟೆ ನೋವು, ಹೊಟ್ಟೆ ಹಸಿವು ಆಗದಿರುವುದು, ವಾಕರಿಕೆ, ಕಣ್ಣು ಗುಡ್ಡೆ ಕೆಂಪಾಗುವುದು, ವಸಡಿನಲ್ಲಿ ರಕ್ತ ಸ್ರಾವ ಉಂಟಾಗುತ್ತದೆ. ಈ ರೀತಿ ಲಕ್ಷಣ ಕಂಡು ಬಂದವರು ತಕ್ಷಣ ಸಮೀಪದ ಆಸ್ಪತ್ರೆಗೆ ಬಂದು ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು. ಮಂಗನ ಕಾಯಿಲೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಲಕ್ಷಣಾಧಾರಿತ ಚಿಕಿತ್ಸೆ ನೀಡಲಾಗುವುದು ಎಂದರು.

ADVERTISEMENT

ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಪವನ್ ಕರ್ ಮಾಹಿತಿ ನೀಡಿ, ಕ್ಷಯ ರೋಗವು ಸಾಂಕ್ರಾಮಿಕ ರೋಗವಾಗಿದ್ದು ದೇಶದಲ್ಲಿ ವ್ಯಾಪಕವಾಗಿ ಹರಡಿದೆ. ಇದರ ನಿಯಂತ್ರಣ ಮಾಡಲು ಎಲ್ಲರೂ ಸಹಕಾರ ನೀಡಬೇಕು. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಸಂಜೆಯ ವೇಳೆಯಲ್ಲಿ ವಿಪರೀತ ಜ್ವರ, ಕಫದಲ್ಲಿ ರಕ್ತ ಬೀಳುವುದು ಕಂಡು ಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿದರೆ 6 ತಿಂಗಳಿಗೆ ಗುಣಮುಖರಾಗಬಹುದು ಎಂದರು.

ರಾಷ್ಟೀಯ ಕಿಶೋರಿ ಸ್ವಾಸ್ತ ಕಾರ್ಯಕ್ರಮದ ಸಮಾಲೋಚಕ ಸುಹಾಸ್, ಹದಿಹರೆಯದಲ್ಲಿ ಉಂಟಾಗುವ ಬದಲಾವಣೆಗಳು ಮತ್ತು ಅವರ ಆರೋಗ್ಯದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಂತರಿಕ ಲೆಕ್ಕ ಪರಿಶೋಧಕ ಪ್ರದೀಪ್ ಜ್ಞಾನ ವಿಕಾಸ ಕೇಂದ್ರದ ಕಾರ್ಯಕ್ರಮದ ಬಗ್ಗೆ ವಿವರಿಸಿದರು.‌

ರಾಧಮ್ಮ ಅಧ್ಯಕ್ಷತೆ ವಹಿಸಿದ್ದರು. ಸೇವಾ ಪ್ರತಿನಿಧಿ ಭಾನುಮತಿ, ಲೀಲಾವತಿ ಇದ್ದರು. ಮಾಹಿತಿ ಕಾರ್ಯಾಗಾರದಲ್ಲಿ ಮಂಜುಶ್ರೀ ಮಹಿಳಾ ಜ್ಞಾನಿ ವಿಕಾಸ ಕೇಂದ್ರದ ಸದಸ್ಯರು ಪಾಲ್ಗೊಂಡಿದ್ದರು.

‘ಪೌಷ್ಠಿಕಯುಕ್ತ ಆಹಾರ ಸೇವಿಸಿ’

‘ಅಪೌಷ್ಠಿಕತೆಯಿಂದ ರಕ್ತ ಹೀನತೆ ರೋಗ ನಿರೋಧಕ ಶಕ್ತಿ ಕುಂದುತ್ತದೆ. ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಕಡಿಮೆ ತೂಕದ ಮಕ್ಕಳ ಜನನ ಪದೇ ಪದೇ ಗರ್ಭಪಾತವಾಗಲಿದೆ. ಆದ್ದರಿಂದ ಗರ್ಭಿಣಿಯರು ಬಾಣಂತಿಯರು ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಬೇಕು. ಪೌಷ್ಠಿಕಯುಕ್ತ ಆಹಾರವನ್ನು ಸಮತೋಲನವಾಗಿ ಸ್ವೀಕರಿಸುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ’ ಎಂದು ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಕ ದರ್ಶನ್ ನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.