ADVERTISEMENT

ಚಿಕ್ಕಮಗಳೂರು: 6,300 ಸರ್ವೆ ನಂಬರ್‌ ಸ್ವಯಂ ಪೋಡಿ

ದರಖಾಸ್ತು ಭೂಮಿ ದುರಸ್ತಿ ಪೋಡಿಗೆ ಆಂದೋಲನ: ರೈತರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ

ವಿಜಯಕುಮಾರ್ ಎಸ್.ಕೆ.
Published 19 ಅಕ್ಟೋಬರ್ 2024, 7:31 IST
Last Updated 19 ಅಕ್ಟೋಬರ್ 2024, 7:31 IST
ಗುರುಶಾಂತಪ್ಪ 
ಗುರುಶಾಂತಪ್ಪ    

ಚಿಕ್ಕಮಗಳೂರು: ಅನೇಕ ವರ್ಷಗಳಿಂದ ದರಖಾಸ್ತು ಜಮೀನು ಪೋಡಿಗೆ ಕಾದಿರುವ ರೈತರು ಇನ್ನು ಮುಂದೆ ಅರ್ಜಿ ಸಲ್ಲಿಸಿ ಕಚೇರಿ ಅಲೆಯುವ ಅಗತ್ಯವಿಲ್ಲ. ಸರ್ಕಾರದಿಂದಲೇ ಈ ಪ್ರಕ್ರಿಯೆ ನಡೆಸುವ ಆಂದೋಲನ ಆರಂಭವಾಗಿದೆ. ಜಿಲ್ಲೆಯಲ್ಲಿ ಪೋಡಿಯಾಗದ 6,300ಕ್ಕೂ ಹೆಚ್ಚು ಸರ್ವೆ ನಂಬರ್‌ಗಳನ್ನು ಜಿಲ್ಲಾಡಳಿತ ಗುರುತಿಸಿದೆ.

50–60 ವರ್ಷಗಳ ಹಿಂದೆಯೇ ದರಖಾಸ್ತು ಜಮೀನು ಮಂಜೂರಾಗಿದ್ದರೂ ಪೋಡಿಯಾಗಿಲ್ಲ. ಒಂದೇ ಸರ್ವೆ ನಂಬರ್‌ನಲ್ಲಿ ಹಲವರ ಜಮೀನುಗಳಿವೆ. ಭೂ ಮಂಜೂರಿದಾರರು ದುರಸ್ತಿ ಪೋಡಿಗಾಗಿ ಅಲೆದು ಸುಸ್ತಾಗಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಕಚೇರಿಗಳಿಗೆ ಅಲೆದು ಸಾಕಾಗಿದ್ದಾರೆ. ದಾಖಲೆಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮತ್ತೆ ಎಲ್ಲಾ ಕಡೆಗೂ ಓಡಾಡಬೇಕಾಗಿತ್ತು. ಇನ್ನು ಮುಂದೆ ಈ ಕೆಲಸ ರೈತರದಲ್ಲ, ಪೋಡಿ ಕೋರಿ ಅರ್ಜಿ ಸಲ್ಲಿಸುವ ಅಗತ್ಯವೂ ಇಲ್ಲ.

ಕಂದಾಯ ಇಲಾಖೆ ಸಿಬ್ಬಂದಿಯೇ ಸ್ವಯಂ ಈ ಕಾರ್ಯ ಕೈಗೆತ್ತಿಕೊಳ್ಳುತ್ತಿದ್ದಾರೆ. ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಪೋಡಿಯಾಗದ ಸರ್ವೆ ನಂಬರ್‌ಗಳನ್ನು ದಾಖಲಿಸಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಲೆಹಾಕುತ್ತಾರೆ. ಸಂಬಂಧಪಟ್ಟ ವೃತ್ತದ ಗ್ರಾಮ ಆಡಳಿತಾಧಿಕಾರಿಯೇ ಭೂದಾಖಲೆಗಳ ಇಲಾಖೆಯ ರೆಕಾರ್ಡ್‌ ಕೊಠಡಿಯಿಂದ ದಾಖಲೆಗಳನ್ನು ಹುಡುಕಿ ತರಬೇಕು. ಲಭ್ಯ ಇರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಸಾಗುವಳಿ ಚೀಟಿ ಸೇರಿ ಯಾವುದೇ ದಾಖಲೆ ಸಿಗದಿದ್ದರೂ ಎಲ್ಲವನ್ನೂ ಮತ್ತೊಮ್ಮೆ ಸಿದ್ಧಪಡಿಸಿಕೊಂಡು ಅಪ್‌ಲೋಡ್ ಮಾಡಬೇಕು.

ADVERTISEMENT

1-5 ನಮೂನೆಗಳನ್ನು ತಯಾರು ಮಾಡಿಕೊಳ್ಳಲಿದ್ದಾರೆ. ಬಳಿಕ ಭೂಮಂಜೂರಾತಿ ನಿಯಮಾವಳಿ ಪ್ರಕಾರ ಆಗಿದೆಯೇ ಎಂಬುದರ ಪರಿಶೀಲನೆಯೂ ನಡೆಯಲಿದೆ. ಬಳಿಕ ಸ್ಥಳಕ್ಕೆ ತೆರಳಿ ಸರ್ವೆ ನಡೆಸಿ ಪೋಡಿ ಮಾಡಿ ಪ್ರತಿ ಮಂಜೂರಿದಾರರಿಗೂ ಪ್ರತ್ಯೇಕ ಸರ್ವೆ ನಂಬರ್‌ ನೀಡಲಾಗುತ್ತದೆ. ಅಲ್ಲಿಗೆ 1–10 ನಮೂನೆ ಪ್ರಕ್ರಿಯೆ ಪೂರ್ಣಗೊಂಡಂತೆ ಆಗಲಿದೆ.

ಈ ಪ್ರಕ್ರಿಯೆಯಲ್ಲಿ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದರ ಕುರಿತು ಎಲ್ಲಾ ತಾಲ್ಲೂಕಿನ ತಹಶೀಲ್ದಾರ್, ಕಂದಾಯ ಅಧಿಕಾರಿ, ಶಿರಸ್ತೇದಾರರು, ಗ್ರಾಮ ಆಡಳಿತಾಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಒಂದೊಂದೇ ಗ್ರಾಮದ ಸರ್ವೆ ನಂಬರ್‌ಗಳನ್ನು ದಾಖಲಿಸಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಕೆಲಸ ಆರಂಭವಾಗಿದೆ. 200ಕ್ಕೂ ಹೆಚ್ಚು ಸರ್ವೆ ನಂಬರ್‌ಗಳನ್ನು ದಾಖಲಿಸಲಾಗಿದೆ ಎಂದು ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಎಲ್ಲಾ ವೃತ್ತದ ಸಿಬ್ಬಂದಿ ಒಟ್ಟಿಗೆ ಭೂದಾಖಲೆಗಳ ಕೊಠಡಿಗೆ ಹೋದರೆ ದಾಖಲೆಗಳನ್ನು ಹುಡುಕುವುದು ಕಷ್ಟವಾಗಲಿದೆ. ಆದ್ದರಿಂದ ರೊಟೇಷನ್ ಆಧಾರದಲ್ಲಿ ದಾಖಲೆಗಳ ಕೊಠಡಿಗೆ ಹೋಗಲು ವೇಳಾಪಟ್ಟಿಯನ್ನೂ ನೀಡಲಾಗಿದೆ. ಅದರಂತೆ ಕಾರ್ಯನಿರ್ವಹಣೆಯಾಗಲಿದೆ. ಸಿಸಿಟಿವಿ ಕಣ್ಗಾವಲಿನಲ್ಲಿ ಎಲ್ಲಾ ಕೆಲಸ ನಡೆಯುವುದರಿಂದ ದಾಖಲೆಗಳು ಕಣ್ಮರೆಯಾಗಲು ಅವಕಾಶ ಇಲ್ಲ ಎಂದರು.

ಜಿಲ್ಲೆಯಲ್ಲಿ ಪೋಡಿಯಾಗದ 6,300 ಸರ್ವೆ ನಂಬರ್‌ಗಳನ್ನು ಗುರುತಿಸಲಾಗಿದೆ. ಒಂದೊಂದು ಸರ್ವೆ ನಂಬರ್‌ನಲ್ಲೂ ಹಲವು ಪಹಣಿಗಳಿವೆ. ಕೆಲವು ಸರ್ವೆ ನಂಬರ್‌ನಲ್ಲಿ 10 ಜನರ ದರಖಾಸ್ತು ಭೂಮಿ ಖಾತೆಗಳಿದ್ದರೆ, ಕೆಲವೆಡೆ 50 ಜನರ ಖಾತೆಗಳೂ ಇವೆ. ಈಗ ಎಲ್ಲವೂ ಪ್ರತ್ಯೇಕ ಪೋಡಿಯಾಗಲಿದ್ದು, ಪ್ರತ್ಯೇಕ ಸರ್ವೆ ನಂಬರ್ ಕೂಡ ಸೃಷ್ಟಿಯಾಗಲಿವೆ ಎಂದು ಅಧಿಕಾರಿಗಳು ವಿವರಿಸಿದರು.

ಎಲ್ಲಾ ಭೂದಾಖಲೆಯೂ ಡಿಜಿಟಲ್

ಪೋಡಿ ದುರಸ್ತಿ ಮಾಡಲು ಅವಶ್ಯವಿರುವ 1-5 ನಮೂನೆಗಳನ್ನು ತಯಾರಿಸಲು ಕಾಗದದ ಕಡತಗಳನ್ನು ಬಳಸಲಾಗುತ್ತಿತ್ತು. ಆದರೆ ಅದು ಸಮರ್ಪಕವಾಗಿ ಆಗಲಿಲ್ಲ. ಕೆಲವು ಕಡತಗಳೇ ಕಾಣೆಯಾಗಿವೆ. ಆದ್ದರಿಂದ ಈಗ ಡಿಜಿಟಲ್‌ ಆ್ಯಪ್‌ ಮೂಲಕ ವೇಗವಾಗಿ ಕಡತಗಳನ್ನು ತಯಾರಿಸಲಾಗುತ್ತಿದೆ.  ಈ ಪ್ರಕ್ರಿಯೆ ಒಮ್ಮೆ ಪೂರ್ಣಗೊಂಡರೆ ದಾಖಲೆಗಳು ಸಂಪೂರ್ಣ ಡಿಜಿಟಲ್ ಆಗಲಿವೆ. ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವುದರಿಂದ ರೈತರು ಬೇಕೆಂದಾಗ ಮುದ್ರಿಸಿ ದೃಢೀಕರಿಸಿಕೊಡಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸುಲಿಗೆ ತಪ್ಪಲಿದೆ; ಸಮಯ ಉಳಿಯಲಿದೆ

ಸರ್ಕಾರವೇ ದುರಸ್ತಿ ಪೋಡಿಗೆ ಮುಂದಾಗಿರುವುದು ಸರಿಯಾಗಿದೆ. ಇದರಿಂದ ರೈತರ ಹಣ ಮತ್ತು ಸಮಯ ಎರಡೂ ಉಳಿಯಲಿದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಗುರುಶಾಂತಪ್ಪ ಹೇಳಿದರು. ದುರಸ್ತಿಗೆ ಅರ್ಜಿ ಸಲ್ಲಿಸಿದರೆ ರೈತರಿಂದ ಸುಲಿಗೆ ಮಾಡಲಾಗುತ್ತಿತ್ತು. ಸರ್ಕಾರವೇ ಅದನ್ನು ಮಾಡಿದರೆ ಅದು ತಪ್ಪಲಿದೆ. ಆದಷ್ಟು ಬೇಗ ಈ ಕಾರ್ಯಗಳನ್ನು ಅಧಿಕಾರಿಗಳು ಮಾಡಬೇಕು. ದುರಸ್ತಿ ವೇಳೆ ಮಂಜೂರಾತಿ ಅಕ್ರಮವೇ ಎಂಬುದನ್ನೂ ಪರಿಶೀಲಿಸಬೇಕು. ಅರ್ಹರಿಗೆ ಭೂಮಿ ಮಂಜೂರಾಗಿದ್ದರೆ ದುರಸ್ತಿ ಪೋಡಿ ಮಾಡಬೇಕು. ಅಕ್ರಮ ಮಂಜೂರಾತಿಯಾಗಿದ್ದರೆ ರದ್ದುಗೊಳಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.