ADVERTISEMENT

ಆಲ್ದೂರು: ಹೆದ್ದಾರಿಯಲ್ಲಿ ಜೀವ ತೆಗೆಯುವ ಗುಂಡಿ

ಪ್ರವಾಸಿಗರ ಪರದಾಟ; ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ನಿತ್ಯ ಬವಣೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 5:57 IST
Last Updated 15 ಜೂನ್ 2024, 5:57 IST
ಆಲ್ದೂರು ಸಮೀಪ ಬಿರಂಜಿ ಹೊಳೆ ಬಳಿ ಹೆದ್ದಾರಿಯ ಗುಂಡಿಯಲ್ಲಿ  ಮರದ ಕೊಂಬೆ ನೆಟ್ಟಿರುವುದು
ಆಲ್ದೂರು ಸಮೀಪ ಬಿರಂಜಿ ಹೊಳೆ ಬಳಿ ಹೆದ್ದಾರಿಯ ಗುಂಡಿಯಲ್ಲಿ  ಮರದ ಕೊಂಬೆ ನೆಟ್ಟಿರುವುದು   

ಆಲ್ದೂರು: ಚಿಕ್ಕಮಗಳೂರಿನಿಂದ ಶೃಂಗೇರಿ ತಾಲ್ಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ 27ರಲ್ಲಿ ಹೆಜ್ಜೆಗೊಂದರಂತೆ ಗುಂಡಿಗಳು ಬಿದ್ದಿದ್ದು,  ಸವಾರರು ಪರದಾಡುವಂತಾಗಿದೆ. 

ರಸ್ತೆಯ ಮಧ್ಯೆ ಇರುವ ಗುಂಡಿ ರಾತ್ರಿ ವೇಳೆ ಚಾಲಕರಿಗೆ ಕಾಣಲಿ ಎಂದು ಸಾರ್ವಜನಿಕರು ಗುಂಡಿಯಲ್ಲಿ ಮಣ್ಣು ಹಾಕಿ ಅದರಲ್ಲಿ ಮರದ ಟೊಂಗೆಯನ್ನು ಮುರಿದು ನೆಟ್ಟಿದ್ದಾರೆ. ಈ ಚಿತ್ರಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ರಸ್ತೆ ದುರವಸ್ಥೆಯ ಬಗ್ಗೆ  ಆಕ್ರೋಶ  ವ್ಯಕ್ತಪಡಿಸಿದ್ದಾರೆ.

ಆಲ್ದೂರು –  ದಿಣ್ಣೆಕೆರೆ – ಬಿಕೆರೆ ಭಾರತ್ ಪೆಟ್ರೋಲಿಯಂ –ಬಿರಂಜಿ ಹಳ್ಳದ ಸೇತುವೆ ಕೆಳ ಬಸ್‌ ನಿಲ್ದಾಣ –ಬನ್ನೂರು ಗ್ರಾಮದ ಮಧ್ಯದ ರಸ್ತೆಯಲ್ಲಿ ಪೂರ್ತಿ ಗುಂಡಿಗಳು ಬಿದ್ದಿವೆ.

ADVERTISEMENT

ಬಿಜೆಪಿ ಹೋಬಳಿ ಘಟಕದ ಅಧ್ಯಕ್ಷ ಬನ್ನೂರು ಸುದರ್ಶನ್  ಮಾತನಾಡಿ, ‘ಗುಂಡಿಗಳು ದೊಡ್ಡದಾಗಿದ್ದು, ಅಪಾಯಕಾರಿಯಾಗಿವೆ. ಹೆದ್ದಾರಿ ಪಕ್ಕದಲ್ಲೇ ಶಾಲೆ ಇದೆ. ವಿದ್ಯಾರ್ಥಿಗಳು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಆಸಕ್ತಿ ವಹಿಸಿ ಶೀಘ್ರ ದುರಸ್ತಿ ಮಾಡಿಸಬೇಕು’ ಎಂದು ಒತ್ತಾಯಿಸಿದರು.

ಹಗಲು ಹೊತ್ತಿನಲ್ಲಿ ರಸ್ತೆ ಗುಂಡಿಗಳು ಕಾಣಿಸುತ್ತವೆ. ಆದರೆ, ರಾತ್ರಿ ಇವು ಮಳೆ ನೀರು ತುಂಬಿಕೊಂಡು ಜೀವ ಬಲಿ ಪಡೆಯುವ ಗುಂಡಿಗಳಾಗುತ್ತವೆ. ಶೃಂಗೇರಿ, ಹೊರನಾಡು, ಹರಿಹರಪುರ, ರಂಭಾಪುರಿ ಪೀಠ ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರು ಈ ಮಾರ್ಗದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಜೀವ ಕಳೆದುಕೊಳ್ಳಬೇಕಾದ ಸ್ಥಿತಿ ಇದೆ. ತಿಂಗಳ ಹಿಂದೆ ಆಲ್ದೂರು ಆರ್‌ಎಸ್ ಶಾಲೆಯ ಮುಂಭಾಗ ರಸ್ತೆ ಅವ್ಯವಸ್ಥೆಯಿಂದ ಎರಡು ಬೈಕ್‌ಗಳ ನಡುವೆ  ಮುಖಾಮುಖಿ ಡಿಕ್ಕಿ ಸಂಭವಿಸಿ ಒಬ್ಬ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದ. ಆದಷ್ಟು ಬೇಗ ರಸ್ತೆ ದುರಸ್ತಿ ಕೈಗೊಳ್ಳಬೇಕು’ ಎಂದು ಸ್ಥಳೀಯರಾದ ಮಿಥುನ್ ಹಳಿಯೂರು, ಮಹೇಶ್ ಎ.ಟಿ, ಮೂರ್ತಿ.ಕೆ, ನಾಗರಾಜ್ ಎ.ಆರ್. ಒತ್ತಾಯಿಸಿದರು.

ರಾತ್ರಿ ವೇಳೆ ಗುಂಡಿ ಕಾಣಲಿ ಎಂದು ಚೀಲದಲ್ಲಿ ಮಣ್ಣು ತುಂಬಿ ಅದರಲ್ಲಿ ಮರದ ಕೊಂಬೆ ನೆಟ್ಟಿರುವುದು
ಈ ಹಿಂದೆಯೇ ಗುಂಡಿ ಮುಚ್ಚಲಾಗಿತ್ತು
‘ಈ ಹಿಂದೆಯೇ ದಂಬದಹಳ್ಳಿಯಿಂದ ರಸ್ತೆ ಗುಂಡಿಗಳನ್ನು ಮುಚ್ಚಲಾಗಿತ್ತು. ಇದೀಗ ಮತ್ತೆ ಮಳೆಯ ಪರಿಣಾಮದಿಂದಾಗಿ ರಸ್ತೆ ಗುಂಡಿ ಬಿದ್ದಿದೆ. ಮಳೆಗಾಲ ಆಗಿರುವುದರಿಂದ ಡಾಂಬರ್ ಪ್ಲಾಂಟ್‌ಗಳು ಮತ್ತು ಕಂಟ್ರಾಕ್ಟರ್‌ದಾರರು ಸಿಗುವುದಿಲ್ಲ . ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಚಿಂತಾಮಣಿ ಕಾಂಬ್ಳೆ ಪತ್ರಿಕೆಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.