ADVERTISEMENT

ವಿದ್ಯುತ್ ಕಡಿತ: 15 ವರ್ಷ ಹಿಂದಕ್ಕೆ ಹೋದ ಜೀವನಶೈಲಿ

ರವಿ ಕೆಳಂಗಡಿ
Published 18 ಜುಲೈ 2018, 10:51 IST
Last Updated 18 ಜುಲೈ 2018, 10:51 IST
ಕಳಸಕ್ಕೆ ವಿದ್ಯುತ್ ಪೂರೈಸುವ ಮಾರ್ಗದ ಮೇಲೆ ಮರಗಳು ಉರುಳಿ ಬಿದ್ದು ಆಗಿರುವ ಹಾನಿಯನ್ನು ಸುರಿಮಳೆಯಲ್ಲೇ ಸರಿಪಡಿಸುತ್ತಿರುವ ಮೆಸ್ಕಾಂ ಸಿಬ್ಬಂದಿ ಮತ್ತು ಮಳೆಗಾಲದ ವಿಶೇಷ ನಿರ್ವಹಣಾ ಸಿಬ್ಬಂದಿ.
ಕಳಸಕ್ಕೆ ವಿದ್ಯುತ್ ಪೂರೈಸುವ ಮಾರ್ಗದ ಮೇಲೆ ಮರಗಳು ಉರುಳಿ ಬಿದ್ದು ಆಗಿರುವ ಹಾನಿಯನ್ನು ಸುರಿಮಳೆಯಲ್ಲೇ ಸರಿಪಡಿಸುತ್ತಿರುವ ಮೆಸ್ಕಾಂ ಸಿಬ್ಬಂದಿ ಮತ್ತು ಮಳೆಗಾಲದ ವಿಶೇಷ ನಿರ್ವಹಣಾ ಸಿಬ್ಬಂದಿ.   

ಕಳಸ: ಹೋಬಳಿಯಾದ್ಯಂತ ಕಳೆದ 5 ದಿನಗಳಿಂದ ವಿದ್ಯುತ್ ಪೂರೈಕೆ ಬಹುತೇಕ ಸ್ಥಗಿತಗೊಂಡಿದ್ದು ಜನರು ತೀವ್ರ ಅನನುಕೂಲ ಎದುರಿಸುತ್ತಿದ್ದಾರೆ. ಆಷಾಢದ ಗಾಳಿಯು ಅನೇಕ ಮರಗಳನ್ನು ವಿದ್ಯುತ್ ವಿತರಣಾ ಜಾಲದ ಮೇಲೆಯೇ ಉರುಳಿಸುತ್ತಿದ್ದು ಸತತ ವಿದ್ಯುತ್ ಸಂಪರ್ಕ ಸದ್ಯಕ್ಕೆ ಅಸಾಧ್ಯವೇ ಆಗಿದೆ.

ದೈನಂದಿನ ಕೆಲಸಗಳಿಗೆಲ್ಲಾ ವಿದ್ಯುತ್ ಮೇಲೆ ಅವಲಂಬನೆ ಹೆಚ್ಚಿದ್ದು ವಿದ್ಯುತ್ ಪೂರೈಕೆ ನಿಂತ ಕೂಡಲೇ ಜನರ ದಿನನಿತ್ಯದ ಜೀವನವೇ ಏರುಪೇರಾಗುತ್ತಿದೆ. ಇದೀಗ ಬಹುತೇಕರ ಕೈಯಲ್ಲಿ ರಿಂಗಣಿಸುವ ಮೊಬೈಲ್‍ಗಳ ಬ್ಯಾಟರಿ ಚಾರ್ಜ್ ಮಾಡಲು ವಿದ್ಯುತ್ತಿಲ್ಲದೆ ಅವು ಸ್ವಿಚ್ ಆಫ್ ಆಗಿವೆ. ಹೋಬಳಿಯ ಬಹುತೇಕ ಜನರು ತಮ್ಮ ಆಪ್ತರು ಮತ್ತು ಗೆಳೆಯರ ಸಂಪರ್ಕಕ್ಕೆ ಸಿಗದಾಗಿದ್ದಾರೆ. ಇದರಿಂದ ಅನೇಕ ಕೆಲಸ ಕಾರ್ಯಕ್ಕೂ ತೊಡಕು ಉಂಟಾಗಿದೆ.

ನಿತ್ಯ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾ ಆ ಚಟಕ್ಕೆ ದಾಸರಾಗಿರುವವರಿಗಂತೂ ಒಂದರ್ಧ ದಿನ ಮೊಬೈಲ್ ಸ್ವಿಚ್ ಆಫ್ ಆದರೂ ಮಾನಸಿಕ ಕಸಿವಿಸಿಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಜನರು ದಿನದಲ್ಲಿ ಒಂದರ್ಧ ಗಂಟೆ ವಿದ್ಯುತ್ ಪೂರೈಕೆ ಬಂದಾಗಲೂ ಮೊದಲು ತಮ್ಮ ಮೊಬೈಲ್ ಫೋನ್‍ಗಳನ್ನು ಚಾರ್ಜ್ ಮಾಡಿಕೊಳ್ಳಲು ಆದ್ಯತೆ ನೀಡುತ್ತಿದ್ದಾರೆ. ಜನರೇಟರ್ ವ್ಯವಸ್ಥೆ ಇರುವ ವಾಣಿಜ್ಯ ಕೇಂದ್ರಗಳಲ್ಲಿ ಮೊಬೈಲ್ ಚಾರ್ಜ್ ಮಾಡಲು ಪೈಪೋಟಿ ಇದೆ.

ADVERTISEMENT

ಇನ್ನು ಮನೆಗಳಲ್ಲಿ ಇರುವ ಇನ್‍ವರ್ಟರ್‌ಗಳ ಜಾರ್ಜ್‌ ಮುಗಿದಿರುವುದರಿಂದ ಉಪಯೋಗಕ್ಕೆ ಬರದಂತಾಗಿವೆ. ವಿದ್ಯುತ್ ಇಲ್ಲದೆ ಅಡುಗೆ ಕೆಲಸದಲ್ಲಿ ಗೃಹಿಣಿಯರಿಗೆ ತೀವ್ರ ತೊಂದರೆ ಉಂಟಾಗಿದೆ. ಮಿಕ್ಸರ್ ಮತ್ತು ಗ್ರೈಂಡರ್ ಬಳಸಲಾರದೆ ಅಕ್ಕಿ ಕಡೆಯುವ ಕಲ್ಲಿಗೆ ಮತ್ತೆ ಕೆಲಸ ಸಿಕ್ಕಿದೆ. ಫ್ರಿಜ್‍ನಲ್ಲಿ ಇರಿಸಿದ ಆಹಾರವೆಲ್ಲಾ ಕೆಡುತ್ತಿದ್ದು ಗೃಹಿಣಿಯರಿಗೆ ತಲೆನೋವೇ ಆಗಿದೆ. ರಾತ್ರಿ ವೇಳೆ ದೀಪ ಮತ್ತು ಕ್ಯಾಂಡಲ್ ಬಳಸುವ ಹಳೆಯ ಪರ್ವದೆಡೆಗೆ ಮತ್ತೆ ಜನ ಮರಳಿದ್ದಾರೆ. ನೀರನ್ನು ಬಾವಿ ಅಥವಾ ಭೂಗತ ಟ್ಯಾಂಕಿನಿಂದ ಎತ್ತುವ ವಿದ್ಯುತ್ ಚಾಲಿತ ಪಂಪ್‍ಗಳು ಕೆಲಸ ಮಾಡದೆ ಮನೆಯ ಸದಸ್ಯರೆಲ್ಲರಿಗೂ ನೀರಿನ ಕೊರತೆ ಉಂಟಾಗಿದೆ. ನೀರನ್ನು ಹೊತ್ತುಕೊಂಡು ಬಚ್ಚಲಿಗೆ ಸಾಗುತ್ತಿದ್ದ ನೆನಪು ಈಗ ಮತ್ತೆ ಮರುಕಳಿಸುತ್ತಿದೆ.

ಹೋಬಳಿಯಲ್ಲಿ ಇರುವ ಕಾಫಿ ಪುಡಿ ಉದ್ಯಮ, ಕಬ್ಬಿಣದ ಗೇಟ್, ಕುಲುಮೆ, ಸ್ಟೀಲ್ ಕೆಲಸಗಳು ಮತ್ತಿತರ ಚಿಕ್ಕ ಪುಟ್ಟ ಉದ್ಯಮಗಳು ಕಳೆದ ವಾರದಿಂದ ಕೆಲಸ ಮಾಡಲಾರದೆ ಕೈಚೆಲ್ಲಿ ಕುಳಿತಿವೆ. ‘ವಿಪರೀತ ಗಾಳಿಯಿಂದ ಪ್ರತಿದಿನವೂ ಹಲವಾರು ಕಡೆಗಳಲ್ಲಿ ಮರಗಳು ಬಾಳೆಹೊನ್ನೂರು ಮತ್ತು ಕಳಸ ನಡುವಿನ 33 ಕೆ.ವಿ. ವಿದ್ಯುತ್ ಮಾರ್ಗದ ಮೇಲೆ ಉರುಳಿ ಬೀಳುತ್ತಿವೆ. ಚಿಕ್ಕಮಗಳೂರು- ಆಲ್ದೂರು-ಬಾಳೆಹೊನ್ನೂರು ಮಾರ್ಗದಲ್ಲೂ ಮರಗಳು ತಂತಿಯ ಮೇಲೆ ಬೀಳುತ್ತಿವೆ. ಹಲವೆಡೆ ವಿದ್ಯುತ್ ಟವರ್‌ಗಳೇ ಮುರಿದು ಬಿದ್ದಿವೆ’ ಎಂದು ಮೆಸ್ಕಾಂ ಕಿರಿಯ ಎಂಜಿನಿಯರ್ ಸೋಮಶೇಖರ್ ಹೇಳುತ್ತಾರೆ.

ಮೆಸ್ಕಾಂ ಸಿಬ್ಬಂದಿ ಮತ್ತು ಮಳೆಗಾಲದ ವಿಶೇಷ ಸಿಬ್ಬಂದಿ ಸುರಿಮಳೆಯಲ್ಲೂ ಈ ಮಾರ್ಗಗಳ ನಿರ್ವಹಣೆಗೆ ಪಡುತ್ತಿರುವ ಶ್ರಮ ಅಪಾರ. ಆದರೆ ಇದರ ಅರಿವು ಇಲ್ಲದೆ ವಿದ್ಯುತ್ ಪೂರೈಕೆ ಇಲ್ಲದ ಬಗ್ಗೆ ಮೆಸ್ಕಾಂ ಅನ್ನು ಶಪಿಸುತ್ತಿರುವವರ ಸಂಖ್ಯೆ ದೊಡ್ಡದೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.