ADVERTISEMENT

ನರಸಿಂಹರಾಜಪುರ | ಪರೋಕ್ಷ ಅಸ್ಪೃಶ್ಯತೆ ಆಚರಣೆ, ದೊರೆಯದ ಹಕ್ಕುಪತ್ರ: ಆರೋಪ

ನರಸಿಂಹರಾಜಪುರ: ತಾಲ್ಲೂಕು ಮಟ್ಟದ ಪರಿಶಿಷ್ಟರ ಕುಂದು ಕೊರತೆ ಸಭೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 14:09 IST
Last Updated 30 ಜೂನ್ 2024, 14:09 IST
ನರಸಿಂಹರಾಜಪುರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಪರಿಶಿಷ್ಟರ ಕುಂದು ಕೊರತೆ ಸಭೆ ನಡೆಯಿತು
ನರಸಿಂಹರಾಜಪುರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಪರಿಶಿಷ್ಟರ ಕುಂದು ಕೊರತೆ ಸಭೆ ನಡೆಯಿತು   

ನರಸಿಂಹರಾಜಪುರ: ‘ಈಗ ನೇರ ಅಸ್ಪೃಶ್ಯತೆ ಆಚರಣೆಗೆ ಅವಕಾಶವಿಲ್ಲದಿರುವ ಕಾರಣ, ಪರೋಕ್ಷ ಅಸ್ಪೃಶ್ಯತೆ ಆಚರಣೆ ಮತ್ತು ರಾಜಕೀಯ ಕಾರಣಕ್ಕಾಗಿ ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿಗಳಿಗೆ ಹಕ್ಕು ಪತ್ರ ನೀಡಿಲ್ಲ ಎಂದು ದಲಿತ ಸಂಘರ್ಷ ಸಮಿತಿಯ ಎಚ್.ಎಂ.ಮೃತ್ಯುಂಜಯ ಆರೋಪಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟರ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣ ಪಂಚಾಯಿತಿಯ 7ನೇ ವಾರ್ಡ್‌ನ ಗ್ರಾಮಠಾಣಾ ಪ್ರದೇಶದಲ್ಲಿ ಹಲವು ತಲೆಮಾರುಗಳಿಂದ ಪರಿಶಿಷ್ಟರು ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಇವರಿಗೆ ಹಕ್ಕು ಪತ್ರ ಕೊಡದಿರುವುದು ಪರೋಕ್ಷ ಅಸ್ಪೃಶ್ಯತೆ ಆಚರಣೆಯೇ ಎಂದು ಪ್ರಶ್ನಿಸಿದರು. ಈ ಬಗ್ಗೆ ಲಿಖಿತ ದೂರು ನೀಡಿ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.

ADVERTISEMENT

ವಾಲ್ಮೀಕಿ ಸಂಘದ ಕಾರ್ಯದರ್ಶಿ ನಾಗರಾಜ್ ಮಾತನಾಡಿ, ‘ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ 5 ವರ್ಷಗಳಿಂದ ನಿವೇಶನ ಕೊಡುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಎಸ್‌ಇಪಿ, ಟಿಎಸ್‌ಪಿ ಅನುದಾನಗಳ ಬಳಕೆ ಪರಿಶಿಷ್ಟರು ವಾಸವಾಗಿರುವ ಪ್ರದೇಶದ ಅಭಿವೃದ್ಧಿಗೆ ಬಳಕೆಯಾಗುತ್ತಿಲ್ಲ. ಕರ್ಕೇಶ್ವರ ಗ್ರಾಮದ ಗುಲಾಬಿ ಎಂಬುವರು ಅನಾಥರಾಗಿದ್ದು ಇವರ ಮನೆ ಸಂಪೂರ್ಣ ಬಿದ್ದು ಹೋಗಿದೆ ಕೇವಲ ₹1.20ಲಕ್ಷ ಬಿಡುಗಡೆಯಾಗಿದೆ ಇದು ಮನೆ ನಿರ್ಮಾಣಕ್ಕೆ ಸಾಕಾಗುವುದಿಲ್ಲ. ಹೆಚ್ಚಿನ ಅನುದಾನ ಕೊಡಿಸಿ ಎಂದು ಮನವಿ ಮಾಡಿದರು.

ಪರಿಶಿಷ್ಟ ಮುಖಂಡ ಮಂಜುನಾಥ್ ಮಾತನಾಡಿ, ‘ಫಾರಂ ನಂ. 50, 53, 94ಸಿ, 94ಸಿಸಿಗೆ ಸಂಬಂಧಿಸಿದ ಸರ್ಕಾರ ಆದೇಶ ಹೊರಡಿಸಿರುವ ಮೂಲ ಸುತ್ತೊಲೆಗಳ ಪ್ರತಿಯು ತಾಲ್ಲೂಕು ಕಚೇರಿಯಲ್ಲಿ ನೀಡುತ್ತಿಲ್ಲ. ಇದರ ಮೂಲ ಪ್ರತಿ ಕೊಡಿಸಿಕೊಡಬೇಕು. ಪರಿಶಿಷ್ಟ ಕಾಲೋನಿಯಲ್ಲೇ  ಸಭೆ ಆಯೋಜಿಸಿದರೆ ಅನುಕೂಲವಾಗುತ್ತದೆ. ಜಾತಿ ನಿಂದನೆ ಪ್ರಕರಣಗಳು ದಾಖಲಾದಾಗ ಅದರ ಪ್ರತಿ ಒದಗಿಸುವ ಕೆಲಸ ಮಾಡಬೇಕು ಎಂದರು. 1930ರ ಮಹಾರಾಜರ ಕಾಲದ ಆದೇಶ ತೋರಿಸಿ ಕಂದಾಯ ಜಮೀನನ್ನು ಅರಣ್ಯ ಎಂದು ಘೋಷಿಸಲಾಗಿದೆ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿಯಿಂದ ದೂರವಿರುವ ಪರಿಶಿಷ್ಟರ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡುತ್ತಿಲ್ಲ ಎಂದರು.

ಪಟ್ಟಣವೂ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ 15 ವರ್ಷಗಳಿಂದಲೂ ನಿವೇಶನರಹಿತ ಪರಿಶಿಷ್ಟರಿಗೆ, ಬಡವರಿಗೆ ಒಂದೂ ನಿವೇಶನ ನೀಡಿಲ್ಲ. ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದವರಿಗೂ ಹಕ್ಕು ಪತ್ರ ನೀಡಿಲ್ಲ. 94ಸಿ, ಫಾರಂ 50, 53 ಅಡಿ ಅರ್ಜಿಸಲ್ಲಿಸಿರುವ ಪರಿಶಿಷ್ಟರ ಅರ್ಜಿಗಳು ವಿಲೇವಾರಿಯಾಗದೆ ಉಳಿದಿವೆ. ಪಟ್ಟಣದ ಮೇದರ ಬೀದಿ ಸಮುದಾಯಕ್ಕೆ ಸೇರಿದ 2ಎಕರೆ ಸ್ಮಶಾನಕ್ಕೆ ಹಕ್ಕುಪತ್ರ ನೀಡಿಲ್ಲ ಎಂದು ಶೆಟ್ಟಿಕೊಪ್ಪ ಎಂ.ಮಹೇಶ್ ದೂರಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲೂ ವಿದ್ಯಾರ್ಥಿಗಳಿಂದ ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಮುಖಂಡರಾದ ರಾಜೇಶ, ಪವಿತ್ರ ದೂರಿದರು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಆರ್‌ಟಿಇ ಅಡಿ ದಾಖಲಾದ ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳಿಂದ ಸಮವಸ್ತ್ರ ಹಾಗೂ ಮತ್ತಿತರ ಉದ್ದೇಶಕ್ಕೆ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಮಂಜುನಾಥ್, ಶ್ರೀನಾಥ್ ದೂರಿದರು.

ತಾಲ್ಲೂಕಿನ ಸೂಸಲವಾನಿ ಗ್ರಾಮದಲ್ಲಿ 100 ವರ್ಷಗಳ ಹಿಂದೆ ಕೇರಳದಿಂದ ವಲಸೆ ಬಂದು ವಾಸವಾಗಿರುವ ಪರಿಶಿಷ್ಟ ಜಾತಿಯ ಪುಲಯ(ಪೊಲಯನ್) ಹೆಸರು ಹಿಂದಿನ ಜಾತಿಗಣತಿ ಪಟ್ಟಿಯಲ್ಲಿ ಬಿಟ್ಟುಹೋಗಿದ್ದು ಸರ್ಕಾರಿ ಸೌಲಭ್ಯ ದೊರೆಯುತ್ತಿಲ್ಲ. ಇವರ ಜಾತಿಯನ್ನು ಜಾತಿಪಟ್ಟಿಯಲ್ಲಿ ಸೇರಿಸಲು ಕ್ರಮ ಕೈಗೊಳ್ಳಬೇಕೆಂದು ಪರಿಶಿಷ್ಟ ಮುಖಂಡರಾದ ಡಿ.ರಾಮು, ಎಚ್.ಎಂ.ಶಿವಣ್ಣ ಮನವಿ ಮಾಡಿದರು.

ನ್ಯಾಯಾಲಯದ ಆದೇಶವಿದೆ ಎಂದು ಅರಣ್ಯ ಇಲಾಖೆಯವರು ಆಲ್ದಾರ ಗ್ರಾಮದಲ್ಲಿ ಪರಿಶಿಷ್ಟರಿಗೆ ಸೇರಿದ ಜಮೀನಿನಲ್ಲಿ ಬೆಳೆದ ಬೆಳೆ ನಾಶ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ಚಿತ್ರಪ್ಪ ಯರಬಾಳ ದೂರಿದರು.

ತಹಶೀಲ್ದಾರ್ ತನುಜಾ ಟಿ.ಸವದತ್ತಿ, ಪೊಲೀಸ್ ಇನ್‌ಸ್ಪೆಕ್ಟರ್‌ ಗುರುದತ್ ಕಾಮಂತ್, ಸಬ್‌ಇನ್‌ಸ್ಪೆಕ್ಟರ್‌ ನಿರಂಜನಗೌಡ, ಬಾಳೆಹೊನ್ನೂರು ಸಬ್‌ಇನ್‌ಸ್ಪೆಕ್ಟರ್‌ ರವಿ ಇದ್ದರು.

ಶೀರ್ಷದಲ್ಲೇ ಜನಸಂಪರ್ಕ ಸಭೆ

ಸಭೆಯಲ್ಲಿ ಪ್ರಸ್ತಾಪಿಸಿರುವ ಸಮಸ್ಯೆಗಳನ್ನು ಪೊಲೀಸ್ ಇಲಾಖೆಯ ಮೂಲಕ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಬಗೆಹರಿಸಲು ಕ್ರಮ ವಹಿಸಲಾಗುವುದು. ಜಿಲ್ಲಾಧಿಕಾರಿ ಜತೆ ಚರ್ಚಿಸಿ ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಜನ ಸಂಪರ್ಕ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.