ADVERTISEMENT

ಚಿಕ್ಕಮಗಳೂರು: ರೇವಣ್ಣ, ಪ್ರಜ್ವಲ್‌ಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಮೇ 2024, 14:27 IST
Last Updated 6 ಮೇ 2024, 14:27 IST
ಸಂಸದ ಪ್ರಜ್ವಲ್ ಮತ್ತು ಎಚ್‌.ಡಿ ರೇವಣ್ಣಗೆ  ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ದಲಿತ ಸಂಘಟನೆ ಒಕ್ಕೂಟದಿಂದ ಮುಖಂಡರು ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತಲ್ಲಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು
ಸಂಸದ ಪ್ರಜ್ವಲ್ ಮತ್ತು ಎಚ್‌.ಡಿ ರೇವಣ್ಣಗೆ  ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ದಲಿತ ಸಂಘಟನೆ ಒಕ್ಕೂಟದಿಂದ ಮುಖಂಡರು ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತಲ್ಲಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು   

ಚಿಕ್ಕಮಗಳೂರು: ‘ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಸಂತ್ರಸ್ತ ಮಹಿಳೆಯರಿಗೆ ಸರ್ಕಾರ ಸೂಕ್ತ ರಕ್ಷಣೆ ಒದಗಿಸಬೇಕು’ ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಆಜಾದ್ ಪಾರ್ಕ್ ವೃತ್ತದಲ್ಲಿ ಹೊಳೆನರಸೀಪುರ ಶಾಸಕ ಎಚ್‌.ಡಿ.ರೇವಣ್ಣ ಹಾಗೂ ಪುತ್ರ ಪ್ರಜ್ವಲ್‌ ಪ್ರತಿಕೃತಿಯನ್ನು ದಹಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹಾಸನದಲ್ಲಿ ಅಧಿಕಾರ ಮತ್ತು ಹಣದ ಮದದಿಂದ ಜನಪ್ರತಿನಿಧಿಗಳಾದ ಪ್ರಜ್ವಲ್ ಹಾಗೂ ರೇವಣ್ಣ ಅಮಾಯಕ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಚುನಾವಣೆ ಪೂರ್ವದಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಡಿಯೊಗಳು ಹರಿದಾಡಿವೆ. ರಾಜ್ಯ ಗುಪ್ತಚರ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸರ್ಕಾರದ ಗಮನಕ್ಕೆ ತರುವಲ್ಲಿ ವಿಫಲವಾಗಿದೆ ಎಂದರು.

ADVERTISEMENT

ಮನೆ ಕೆ‌ಲಸದವರು, ಸಹಾಯ ಕೇಳಲು ಹೋದವರು, ಅಸಹಾಯಕ ಮಹಿಳೆಯರನ್ನು ಬಲವಂತವಾಗಿ ಲೈಂಗಿಕ ಕೃತ್ಯಕ್ಕೆ ಬಳಸಿಕೊಂಡಿರುವ ನೂರಾರು ವಿಡಿಯೊಗಳ ಸಂಗ್ರಹ ಇವೆ. ಸತ್ಯಾಂಶ ಬಾಯಿಬಿಡುತ್ತಾರೆ ಎಂದು ಹೆದರಿ ಸಂತ್ರಸ್ತ ಮಹಿಳೆಯನ್ನೂ ಅಪಹರಣ ಮಾಡಿದ್ದಾರೆ. ನೀಚ ಕೃತ್ಯದ ಆರೋಪ ಹೊತ್ತಿರುವ ಇವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

‘ಬೇಟಿ ಬಚಾವ್‌, ಬೇಟಿ ಪಡಾವೋ’ ಎನ್ನುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಮೌನ ವಹಿಸಿದ್ದಾರೆ. ನೂರಾರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಚಕಾರವೆತ್ತುತ್ತಿಲ್ಲ. ಹಾಸನ ಸೇರಿದಂತೆ ನಾಡಿನ ಜನತೆ ಎಚ್ಚೆತ್ತುಕೊಂಡು ಕಠಿಣ ಶಿಕ್ಷೆಗೆ ಒತ್ತಾಯಿಸಿ ಇವರ ವಿರುದ್ಧ ಉಗ್ರ ಪ್ರತಿಭಟನೆ ಕೈಗೊಳ್ಳಬೇಕು. ಈ ಮೂಲಕ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ರಾಜ್ಯ ಸಮಿತಿ ಸದಸ್ಯ ವಸಂತ್‌ಕುಮಾರ್, ಅಂಬೇಡ್ಕರ್ ವೈಚಾರಿಕ ವೇದಿಕೆ ಜಿಲ್ಲಾಧ್ಯಕ್ಷ ಕೂದುವಳ್ಳಿ ಮಂಜು, ವಾಲ್ಮೀಕಿ ನಾಯಕ ಯುವಕ ಸಂಘಟನೆ ಅಧ್ಯಕ್ಷ ಜಗದೀಶ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುಶಾಂತಪ್ಪ, ಕೆಪಿಸಿಸಿ ವಕ್ತಾರ ಎಚ್‌.ಎಚ್.ದೇವರಾಜ್‌, ರವೀಶ್ ಕ್ಯಾತನಬೀಡು, ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ, ಹೊನ್ನೇಶ್, ಪರಮೇಶ್ ಪಾಲ್ಗೊಂಡಿದ್ದರು.

Cut-off box - ‘ಉನ್ನತ ಮಟ್ಟದ ತನಿಖೆ ನಡೆಯಬೇಕು’ ಆರೋಪಿಗಳಾಗಿರುವ ಸಂಸದ ಪ್ರಜ್ವಲ್ ಹಾಗೂ ಶಾಸಕ ರೇವಣ್ಣನನ್ನು ಕೂಡಲೇ ತಮ್ಮ ಸ್ಥಾನದಿಂದ ವಜಾಗೊಳಿಸಬೇಕು. ಅಲ್ಲದೇ ಪೊಲೀಸ್ ಸಮವಸ್ತ್ರ ಧರಿಸಿ ಕೃತ್ಯದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿ ಯಾರು ಎಂಬುದನ್ನು ಪತ್ತೆಹಚ್ಚಿ ಸೇವೆಯಿಂದ ಅಮಾನತುಪಡಿಸಬೇಕು. ಪ್ರಕರಣದ ದಿಕ್ಕುತಪ್ಪದಂತೆ ಉನ್ನತ ಮಟ್ಟದಿಂದ ತನಿಖೆ ನಡೆದು ಉಗ್ರ ಶಿಕ್ಷೆಯಾಗಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.