ADVERTISEMENT

ಒಂದು ಜಿಲ್ಲೆ ಒಂದು ತಾಣ: ಕೆಮ್ಮಣ್ಣುಗುಂಡಿ ಅಭಿವೃದ್ಧಿಗೆ ತಯಾರಿ

ವಿಜಯಕುಮಾರ್‌ ಎಸ್‌.ಕೆ
Published 24 ಆಗಸ್ಟ್ 2024, 6:28 IST
Last Updated 24 ಆಗಸ್ಟ್ 2024, 6:28 IST
ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ ಪ್ರವಾಸಿ ತಾಣ
ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ ಪ್ರವಾಸಿ ತಾಣ   

ಚಿಕ್ಕಮಗಳೂರು: ಕೆಮ್ಮಣ್ಣುಗುಂಡಿ ಗಿರಿಧಾಮ ಪ್ರವಾಸಿಗರ ನೆಚ್ಚಿನ ತಾಣ. ಈ ಸುಂದರ ತಾಣವನ್ನು ಬೇರೆ ಬೇರೆ ಇಲಾಖೆಗಳು ಪ್ರತ್ಯೇಕವಾಗಿ ನಿರ್ವಹಿಸುತ್ತಿದ್ದು, ‘ಒಂದು ಜಿಲ್ಲೆ ಒಂದು ತಾಣ’ ಯೋಜನೆಯಡಿ ಇನ್ನಷ್ಟು ಸುಂದರ ತಾಣವಾಗಿಸಲು ಸರ್ಕಾರ ಮುಂದಾಗಿದೆ.

ಪಶ್ಚಿಮಘಟ್ಟದ ಸಾಲಿನಲ್ಲಿರುವ ಕೆಮ್ಮಣ್ಣುಗುಂಡಿ ಸಮುದ್ರಮಟ್ಟದಿಂದ 4,702 ಅಡಿ ಎತ್ತರದಲ್ಲಿದೆ. ಭದ್ರಾ ಹುಲಿ ರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಿದೆ. ಬೇಸಿಗೆಯಲ್ಲೂ ತಂಪಾದ ಗಾಳಿ, ಅದರ ಜತೆಗೆ ಇರುವ ಹೂವಿನ ತೋಟ, ಉದ್ಯಾನ ಇವೆಲ್ಲವೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಹ‌ಲವು ಚಲನಚಿತ್ರಗಳು ಚಿತ್ರೀಕರಣಗೊಂಡಿರುವ ಈ ತಾಣವನ್ನು ಇನ್ನಷ್ಟು ಸುಂದರಗೊಳಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಸದ್ಯ ತೋಟಗಾರಿಕೆ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆಗಳು ಪ್ರತ್ಯೇಕವಾಗಿ ನಿರ್ವಹಣೆ ಮಾಡುತ್ತಿವೆ. ಹೂದೋಟವನ್ನು ತೋಟಗಾರಿಕೆ ಇಲಾಖೆ ನಿರ್ವಹಿಸಿದರೆ, ಝಡ್‌ ಪಾಯಿಂಟ್ ಚಾರಣ ಮತ್ತು ಹೆಬ್ಬೆ ಜಲಪಾತ ಜೀಪ್ ರೈಡಿಂಗ್  ಅರಣ್ಯ ಇಲಾಖೆ ನೋಡಿಕೊಳ್ಳುತ್ತಿದೆ. ಲೋಕೋಪಯೋಗಿ ಇಲಾಖೆ ವಸತಿ ಗೃಹ ಕೂಡ ಇದ್ದು, ರಸ್ತೆಯನ್ನೂ ನಿರ್ವಹಣೆ ಮಾಡುತ್ತಿದೆ. 

ADVERTISEMENT

ಎಲ್ಲಾ ಇಲಾಖೆಗಳು ಸೇರಿ ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಸಿ ಮಾದರಿ) ಮತ್ತಷ್ಟು ಅಭಿವೃದ್ಧಿಪಡಿಸುವ ಯೋಜನೆಯನ್ನು ಅಧಿಕಾರಿಗಳು ಸಿದ್ಧಪಡಿಸುತ್ತಿದ್ದಾರೆ. ಒಂದು ಜಿಲ್ಲೆ ಒಂದು ತಾಣ ಯೋಜನೆಗೆ ಕೆಮ್ಮಣ್ಣುಗುಂಡಿ ಆಯ್ಕೆ ಮಾಡಿಕೊಳ್ಳಲಾಗಿದೆ. ವಾಸಿಗರನ್ನು ಇನ್ನಷ್ಟು ಸೆಳೆಯಲು ಸ್ಕೈವಾಕ್, ಜಿಪ್‌ಲೈನ್, ಪ್ಯಾರಾಗ್ಲೈಡಿಂಗ್ ರೀತಿಯ ಸಾಹಸ ಪ್ರವಾಸೋದ್ಯಮ ತಾಣ ಮಾಡಬಹುದೆ ಎಂಬ ಚಿಂತನೆಯನ್ನೂ ಅಧಿಕಾರಿಗಳು ಮಾಡಿದ್ದಾರೆ. ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ರೂಪುರೇಷೆ ಸಿದ್ಧಪಡಿಸುವುದು ಬಾಕಿ ಇದೆ.

ಪ್ರವಾಸೋದ್ಯಮ ಇಲಾಖೆಯ 15 ಎಕರೆ ಜಾಗವಿದ್ದು, ಇಲ್ಲಿ ಯೋಗ ಕೇಂದ್ರ, ಆಯುರ್ವೇದ ಚಿಕಿತ್ಸಾ ಕೇಂದ್ರ ತೆರೆಯುವ ಆಲೋಚನೆಗಳೂ ಸರ್ಕಾರದ ಮುಂದಿವೆ. ‌ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ಪ್ರವಾಸಿ ತಾಣ ಅಭಿವೃದ್ಧಿಪಡಿಸುವುದರಿಂದ ಸರ್ಕಾರದಿಂದ ಅನುದಾನ ಕೋರುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಒಂದು ಜಿಲ್ಲೆ ಒಂದು ತಾಣ ಯೋಜನೆಗೆ ಕೆಮ್ಮಣ್ಣುಗುಂಡಿ ಆಯ್ಕೆಯಾಗಿದೆ. ಸಂಬಂಧಪಟ್ಟ ಎಲ್ಲಾ ಇಲಾಖೆಗಳೂ ಸಭೆ ನಡೆಸಿ ಅಭಿವೃದ್ಧಿಯ ರೂಪುರೇಷೆ ಸಿದ್ಧಪಡಿಸಲಾಗುವುದು
–ಎಂ.ಆರ್.ಲೋಹಿತ್ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ

ರಸ್ತೆ ಅಭಿವೃದ್ಧಿಗೆ ತೊಡಕು:

ಪ್ರಾಧಿಕಾರವೇ ಪರಿಹಾರ ಕೆಮ್ಮಣ್ಣುಗುಂಡಿಗೆ ಹಾಲಿ ಇರುವ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡಲು ಸಾಧ್ಯವೇ ಇಲ್ಲದಷ್ಟು ಹಾಳಾಗಿದೆ. ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಈ ರಸ್ತೆ ಇರುವುದರಿಂದ ಅಭಿವೃದ್ಧಿಗೆ ತೊಡಕಾಗಿದೆ. ಲಿಂಗದಹಳ್ಳಿಯಿಂದ ಬಳ್ಳಾವರ ಕಲ್ಲತ್ತಗಿರಿ ಜಲಪಾತದ ಮಾರ್ಗವಾಗಿ ಕೆಮ್ಮಣ್ಣುಗುಂಡಿಗೆ ಬರುವ ರಸ್ತೆ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ತನಕ ಉತ್ತಮವಾಗಿದೆ. ಚೆಕ್‌ಪೋಸ್ಟ್‌ನಲ್ಲಿ ಹಣ ಪಾವತಿಸಿ ಟಿಕೆಟ್ ಪಡೆದು ಮುಂದೆ ಸಾಗಿದರೆ ತೋಟಗಾರಿಕೆ ಇಲಾಖೆಯ ಹೂದೋಟ ತಲುಪಲು ಒಂದೂವರೆ ಕಿಲೋ ಮೀಟರ್‌ ಕ್ರಮಿಸುವುದು ಸಾಹಸದ ಕೆಲಸ. ಈ ರಸ್ತೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಹಾದು ಹೋಗುವುದರಿಂದ ಅಭಿವೃದ್ಧಿ ಸಾಧ್ಯವಾಗಿಲ್ಲ. ಎಲ್ಲಾ ಇಲಾಖೆಗಳ ಜಾಗ ಅಲ್ಲಲ್ಲೇ ಇರುವುದರಿಂದ ಅನುಮತಿಗಳಿಗಾಗಿ ಕಾಯುವುದು ತಡವಾಗುತ್ತಿದೆ. ಕೆಮ್ಮಣ್ಣುಗುಂಡಿ ಪ್ರವಾಸಿ ತಾಣಕ್ಕೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಿಕೊಂಡರೆ ಅಭಿವೃದ್ಧಿ ಸುಲಭ ಎಂದು ಸ್ಥಳೀಯರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.