ಚಿಕ್ಕಮಗಳೂರು: ವಾರಾಂತ್ಯ ಬಂದರೆ ಚಿಕ್ಕಮಗಳೂರಿನ ಪ್ರಕೃತಿಯ ಸೊಬಗು ಸವಿಯುವ ಖುಷಿ ಪ್ರವಾಸಿಗರಿಗೆ. ಇದರಿಂದ ಉಂಟಾಗುವ ವಾಹನ ದಟ್ಟಣೆ ನಿಭಾಯಿಸುವುದು ತಲೆನೋವು ಮಾತ್ರ ಪೊಲೀಸರಿಗೆ. ಈ ತಲೆನೋವು ಕೊಂಚ ಕಡಿಮೆ ಮಾಡಲು ಕೈಮರದಲ್ಲಿರುವ ಚೆಕ್‌ಪೋಸ್ಟ್ ಸ್ಥಳ ಬದಲಿಸುವ ಪ್ರಯತ್ನಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.
ಚಂದ್ರದ್ರೋಣ ಪರ್ವತ ಶ್ರೇಣಿಯ ಮುಳ್ಳಯ್ಯನಗಿರಿ ಮತ್ತು ಸುತ್ತಮುತ್ತಲ ಗಿರಿಶ್ರೇಣಿಯಲ್ಲಿ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಾರಾಂತ್ಯದಲ್ಲಿ ಸಾವಿರಾರು ವಾಹನಗಳು ಗಿರಿ ಏರುತ್ತಿದ್ದು, ವಾಹನ ದಟ್ಟಣೆ ಉಂಟಾಗುತ್ತಿದೆ. ದಟ್ಟಣೆ ನಡುವೆ ಸಿಲುಕಿ ಪ್ರವಾಸಿಗರು ಪರದಾಡುತ್ತಿದ್ದು, ನಿಯಂತ್ರಿಸುವ ಕೆಲಸ ಪೊಲೀಸರನ್ನೂ ಹೈರಾಣಾಗಿಸಿದೆ.
ಗಿರಿ ಏರಲು ಪ್ರವಾಸಿಗರು ತಮ್ಮ ಖಾಸಗಿ ವಾಹನಗಳ ಬಳಕೆ ಅನಿವಾರ್ಯವಾಗಿದೆ. ಸರ್ಕಾರಿ ಬಸ್ ಅಥವಾ ಬೇರೆ ವಾಹನದ ವ್ಯವಸ್ಥೆ ಇಲ್ಲ. ಖಾಸಗಿ ವಾಹನಗಳಲ್ಲಿ ತೆರಳಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಫೋಟೊ ತೆಗೆಸಿಕೊಳ್ಳುವ ಬರದಲ್ಲಿ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದಾರೆ. ಅಲ್ಲದೇ ಮದ್ಯದ ಬಾಟಲಿ ಮತ್ತು ನೀರಿನ ಪ್ಲಾಸ್ಟಿಕ್ ಬಾಟಲಿ ಬಿಸಾಡಿ ಪರಿಸರಕ್ಕೂ ಹಾನಿ ಉಂಟು ಮಾಡುತ್ತಿದ್ದಾರೆ.
ಅಲ್ಲಂಪುರ ಬಳಿ ವಾಹನ ನಿಲುಗಡೆ ತಾಣ ನಿರ್ಮಾಮಿಸಿ ಖಾಸಗಿ ವಾಹನಗಳು ಗಿರಿ ಏರುವುದನ್ನು ತಡೆಯುವ ಯೋಜನೆ ನನೆಗುದಿಗೆ ಬಿದ್ದಿದೆ. ಪ್ರವಾಸಿಗರಿಗೆ ಹೊರೆಯಾಗದಂತೆ ದರ ನಿಗದಿ ಮಾಡಿ ಪಾಸ್ ನೀಡುವುದು ಯೋಜನೆಯ ಉದ್ದೇಶ. ಅದಕ್ಕಾಗಿ ಅಲ್ಲಂಪುರ ಸಮೀಪ ಎರಡು ಕಡೆ ವಾಹನ ನಿಲುಗಡೆಯ ತಾಣ ನಿರ್ಮಿಸಲು ಜಾಗವನ್ನೂ ಗುರುತು ಮಾಡಿತ್ತು. ಜಾಗ ಪಡೆಯಲು ಒಂದಿಲ್ಲೊಂದು ತೊಡಕು ಎದುರಾಗುತ್ತಲೇ ಇದ್ದು, ನಿವಾರಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಗೊಂದಲಗಳು ಮತ್ತು ವಿವಾದಗಳು ಬಗೆಹರಿಯಲು ಇನ್ನೂ ಸಾಕಷ್ಟು ದಿನಗಳು ಬೇಕಾಗುತ್ತವೆ.
ಸದ್ಯ ವಾರಾಂತ್ಯದ ದಿನಗಳಲ್ಲಿ ಕೈಮರ ಬಳಿ ಇರುವ ಚೆಕ್‌ಪೋಸ್ಟ್‌ಗಳಲ್ಲೇ ವಾಹನಗಳನ್ನು ತಡೆಯುತ್ತಿರುವುದರಿಂದ ಚಿಕ್ಕಮಗಳೂರು–ತರೀಕೆರೆ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಆದ್ದರಿಂದ ಕೈಮರ ಚೆಕ್‌ಪೋಸ್ಟ್‌ನನ್ನು ಮುಳ್ಳಯ್ಯನಗಿರಿ ರಸ್ತೆಯಲ್ಲಿ ಸ್ವಲ್ಪ ದೂರ ಮುಂದಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಂಡಿದೆ. ಅದಕ್ಕಾಗಿ ತಿಪ್ಪನಹಳ್ಳಿ ಎಸ್ಟೇಟ್ ಕ್ರಾಸ್ ಬಳಿ ಜಾಗವನ್ನೂ ಗುರುತು ಮಾಡಿದೆ.
ಸೀತಾಳಯ್ಯನಗಿರಿಯಲ್ಲೂ ನಿಲುಗಡೆ ತಾಣ
ಸೀತಾಳಯ್ಯನಗಿರಿಯಲ್ಲಿ ಈಗಾಗಲೇ ಇರುವ ನಿಲಗಡೆ ತಾಣದಲ್ಲೇ ಖಾಸಗಿ ವಾಹನಗಳನ್ನು ತಡೆದು ಅಲ್ಲಿಂದ ಪ್ರವಾಸಿಗರನ್ನು ಜೀಪ್‌ಗಳಲ್ಲಿ ಕರೆದೊಯ್ಯವ ಉದ್ದೇಶವನ್ನೂ ಜಿಲ್ಲಾಡಳಿತ ಹೊಂದಿದೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಮೂಲಕ ಜೀಪ್‌ಗಳಿಗೆ ಪಾಸ್‌ಗಳನ್ನು ವಿತರಿಸಲು ಮುಂದಾಗಿದೆ.
ಸೀತಾಳಯ್ಯನಗಿರಿಯಿಂದ ಮುಳ್ಳಯ್ಯನಗಿರಿ ತನಕ ಕಿರಿದಾದ ರಸ್ತೆಯಲ್ಲಿ ಖಾಸಗಿ ವಾಹನಗಳು ತೆರಳುವುದು ಕಷ್ಟ. ಅಲ್ಲದೇ ವಾಹನಗಳನ್ನು ಸರಾಗವಾಗಿ ತಿರುಗಿಸಲು ಸಾಧ್ಯವಾಗದೆ ದಟ್ಟಣೆಗೂ ಕಾರಣವಾಗುತ್ತಿದೆ. ಆದ್ದರಿಂದ ಸೀತಾಳಯ್ಯನಗಿರಿಯಲ್ಲೇ ಎಲ್ಲಾ ಖಾಸಗಿ ವಾಹನಗಳನ್ನು(ಕಾರು ವ್ಯಾನ್ ಮಿನಿ ಬಸ್) ತಡೆದು ಕನಿಷ್ಠ ಪ್ರಯಾಣ ದರ ನಿಗದಿ ಮಾಡಿ ಜೀಪ್‌ಗಳಲ್ಲಿ ಕರೆದೊಯ್ಯುವುದು ಈ ಯೋಜನೆಯ ಉದ್ದೇಶ. ಎಷ್ಟು ವಾಹನಗಳನ್ನು ನಿಲ್ಲಿಸಲು ಸಾಧ್ಯ ಎಂಬುದನ್ನು ಪರಿಶೀಲಿಸಿ ಒಮ್ಮೆಗೆ ಅಷ್ಟೇ ವಾಹನಗಳನ್ನು ಗಿರಿಭಾಗಕ್ಕೆ ತೆರಳಲು ಅವಕಾಶ ಕಲ್ಪಿಸಲಾಗುತ್ತದೆ. ವಾಹನಗಳು ವಾಪಸ್ ಬಂದಂತೆ ಗಿರಿಯ ಕೆಳಗೆ ಕಾಯುತ್ತಿರುವ ವಾಹನಗನ್ನು ಬಿಡುಲು ತಯಾರಿ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.