ADVERTISEMENT

ಆನೆ ಸೆರೆ ಕಾರ್ಯಾಚರಣೆಗೆ ಸಿದ್ಧತೆ: ಪುಂಡಾನೆ ಪತ್ತೆಗೆ ಟ್ರ್ಯಾಪ್ ಕ್ಯಾಮೆರಾ

ವಿಜಯಕುಮಾರ್ ಎಸ್.ಕೆ.
Published 7 ಮೇ 2024, 6:04 IST
Last Updated 7 ಮೇ 2024, 6:04 IST
ಅರಣ್ಯ ಇಲಾಖೆ ಈ ಹಿಂದೆ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮೆರಾಕ್ಕೆ ಸೆರೆ ಸಿಕ್ಕಿದ್ದ ಆನೆ
ಅರಣ್ಯ ಇಲಾಖೆ ಈ ಹಿಂದೆ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮೆರಾಕ್ಕೆ ಸೆರೆ ಸಿಕ್ಕಿದ್ದ ಆನೆ   

ಚಿಕ್ಕಮಗಳೂರು: ಕಾಡಾನೆ ಹಾವಳಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದು ವರ್ಷದ ಅವಧಿಯಲ್ಲಿ ಐದು ಜನ ಪ್ರಾಣ ಕಳೆದುಕೊಂಡಿದ್ದಾರೆ. ಭಾನುವಾರವೂ ಒಬ್ಬ ವ್ಯಕ್ತಿಯನ್ನು ಬಲಿ ಪಡೆದಿದ್ದು, ಆನೆಯ ಹುಡುಕಾಟಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕಂಚಿನಕಲ್ ದುರ್ಗದ ಕೂಲಿ ಕಾರ್ಮಿಕ ಕಿನ್ನಿ, ಡಿಸೆಂಬರ್ ತಿಂಗಳ ಆರಂಭದಲ್ಲಿ ಹೆಡದಾಳು ಗ್ರಾಮದಲ್ಲಿ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ಗಾಳಿ ಗಂಡಿ ಯುವತಿ ಮೀನಾ ಕಾಡಾನೆಯಿಂದ ಮೃತಪಟ್ಟಿದ್ದರು. ಈಗ ಅದೇ ಭಾಗದಲ್ಲಿ ಭಾನುವಾರವೂ ಆನೆ ದಾಳಿಗೆ ಆನಂದ ಪೂಜಾರಿ ಬಲಿಯಾಗಿದ್ದಾರೆ.

ಪುಂಡಾನೆ ಸೇರಿ ಐದು ಆನೆಗಳನ್ನು ಹಿಡಿದು ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಸರ್ಕಾರದಿಂದ ಅನುಮತಿ ಪಡೆದಿತ್ತು.  ಹಲವು ದಿನಗಳ ಕಾಲ ಕಾರ್ಯಾಚರಣೆ ನಡೆಸಿದರೂ ಪುಂಡಾನೆ ಪತ್ತೆಯಾಗಿರಲಿಲ್ಲ. ಬೇರೊಂದು  ಆನೆಯನ್ನು ಹಿಡಿದು ಸ್ಥಳಾಂತರ ಮಾಡಲಾಗಿತ್ತು. ಕಾರ್ಯಾಚರಣೆ ವೇಳೆ ಮತ್ತೊಂದು ಕಾಡಾನೆ ಕೂಡ ಮೃತಪಟ್ಟಿತ್ತು.

ADVERTISEMENT

ಹಲವು ರೀತಿಯ ಕಸರತ್ತನ್ನು ಅರಣ್ಯ ಇಲಾಖೆ ಆಗ ಮಾಡಿತ್ತು. ತಿಂಗಳು ಗಟ್ಟಲೆ ಹುಡುಕಾಡಿದರೂ ಆನೆ ಪತ್ತೆಯಾಗದಿದ್ದಾಗ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು. ಈಗ ಮತ್ತೊಮ್ಮೆ ಕಾರ್ಯಾಚರಣೆ ಆರಂಭಿಸಲು ತಯಾರಿ ನಡೆಸುತ್ತಿದ್ದಾರೆ.

ಈ ಹಿಂದೆ ಇಬ್ಬರ ಮೇಲೆ ದಾಳಿ ನಡೆಸಿದ್ದ ಆನೆಯೇ ಆನಂದ ಪೂಜಾರಿ ಅವರ ಮೇಲೆ ದಾಳಿ ನಡೆಸಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಭಾನುವಾರ ದಾಳಿ ನಡೆಸಿದ ಆನೆಯನ್ನು ಸ್ಥಳೀಯರೊಬ್ಬರು ನೋಡಿದ್ದು, ಅವರು ಹೇಳುವ ಮಾಹಿತಿ ಪ್ರಕಾರ ಬೇರೆ ಆನೆ ಇರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಈ ಭಾಗದಲ್ಲಿ ಟ್ರ್ಯಾಪ್‌ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇನ್ನಷ್ಟು ಕಡೆ ಕ್ಯಾಮರಾ ಅಳವಡಿಸಲಾಗುವುದು. ಪುಂಡಾನೆಯನ್ನು ಗುರುತಿಸಿದ ಬಳಿಕ ಕಾರ್ಯಾಚರಣೆ ಆರಂಭಿಸುವ ಬಗ್ಗೆ ಅರಣ್ಯ ಇಲಾಖೆ ಆಲೋಚನೆ ನಡೆಸಲಿದೆ ಎಂದು ಹೇಳುತ್ತಾರೆ.

ಬೀಟಮ್ಮ ಮತ್ತು ಭುವನೇಶ್ವರಿ ತಂಡದ ಆನೆಗಳು ಸದ್ಯಕ್ಕೆ ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಇಲ್ಲ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿವೆ. ಆದ್ದರಿಂದ ಈಗ ಕಂಚಿನಕಲ್ ದುರ್ಗ ಸುತ್ತಮುತ್ತ ಪುಂಡಾಟ ನಡೆಸಿರುವ ಆನೆಗಳೇ ಬೇರೆ. ಆದ್ದರಿಂದ ಈ ಆನೆಗಳ ಚಲನ ವಲನಗಳ ಮೇಲೆ ನಿಗಾ ಇಡಲಾಗಿದೆ ಎಂದು ಅವರು ವಿವರಿಸಿದರು. 

ಕಾಡಾನೆ ಹಿಡಿಯುವ ಕಾರ್ಯಾಚರಣೆ ಆರಂಭಿಸುವ ಕುರಿತು ಚರ್ಚಿಸಲಾಗುತ್ತಿದೆ. ಆನೆ ಯಾವುದು ಎಂಬುದನ್ನು ಗುರುತಿಸುವ ಕೆಲಸ ಆರಂಭವಾಗಿದೆ.
–ರಮೇಶ್‌ಬಾಬು ಉಪಅರಣ್ಯ ಸಂರಕ್ಷಣಾಧಿಕಾರಿ
ಗುಡ್ಡಗಾಡು ಪ್ರದೇಶವೇ ಸವಾಲು
ಕಂಚಿನಕಲ್ ದುರ್ಗ ಸುತ್ತಮತ್ತಲ ಭಾಗ ಕಡಿದಾದ ಗುಡ್ಡಗಾಡು ಪ್ರದೇಶವಾಗಿದ್ದು ಅಲ್ಲಿ ಆನೆಗಳ ಸೆರೆ ಕಾರ್ಯಾಚರಣೆ ನಡೆಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಸಮತಟ್ಟಾದ ಪ್ರದೇಶವಾದರೆ ಸೆರೆ ಕಾರ್ಯಾಚರಣೆ ಸುಲಭವಾಗಲಿದೆ. ಕಡಿದಾದ ಪ್ರದೇಶಕ್ಕೆ ಸಾಕಾನೆಗಳ ಸಹಿತ ತೆರಳಿ ಕಾರ್ಯಾಚರಣೆ ಕಷ್ಟ. ಆದ್ದರಿಂದ ಪುಂಡಾನೆ ಕಾಣಿಸಿಕೊಂಡರೂ ಅದು ಸುರಕ್ಷಿತ ಸ್ಥಳಕ್ಕೆ ಬರುವ ತನಕ ಕಾಯಬೇಕಾಗುತ್ತದೆ. ಅಲ್ಲಿಯ ತನಕ ಅದನ್ನು ಹಿಂಬಾಲಿಸಬೇಕಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.