ADVERTISEMENT

ಪರಿಶಿಷ್ಟರ ಮೀಸಲು ಅನುದಾನ ದುರ್ಬಳಕೆ ಖಂಡಿಸಿ ಪ್ರತಿಭಟನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ, ವಿವಿಧ ಸಂಘಟನೆಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 14:37 IST
Last Updated 26 ಜುಲೈ 2024, 14:37 IST
ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ  ಬಿಎಸ್‌ಪಿ ಹಾಗೂ ವಿವಿಧ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು
ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ  ಬಿಎಸ್‌ಪಿ ಹಾಗೂ ವಿವಿಧ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು   

ಚಿಕ್ಕಮಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪ‍ರಿಶಿಷ್ಟ ಪಂಗಡದ ಅಭಿವೃದ್ಧಿಯ ಮೀಸಲು ಅನುದಾನ(ಎಸ್‌ಸಿಸಿಪಿ, ಟಿಎಸ್‌ಪಿ) ದುರ್ಬಳಕೆ ಮಾಡಿಕೊಂಡಿರುವುದನ್ನು ಖಂಡಿಸಿ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಆಜಾದ್ ಪಾರ್ಕ್ ವೃತ್ತದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ದುರ್ಬಳಕೆಯಾಗಿರುವ ಅನುದಾನವನ್ನು ವಾಪಸ್‌ ಸಮುದಾಯದ ಅಭಿವೃದ್ಧಿಗೆ ನೀಡಬೇಕು ಎಂದು ಆಗ್ರಹಿಸಿದರು.

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ‘ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ವಿವಿಧ ಯೋಜನೆಯಡಿ ಸಬಲೀಕರಣಕ್ಕೆ ವಿಶೇಷ ಅನುದಾನ ಕಾಯ್ದೆ ಜಾರಿಗೆ ತಂದಿದೆ. ಆದರೆ, ರಾಜ್ಯ ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿ ಗ್ಯಾರಂಟಿ ಯೋಜನೆಗಳಿಗೆ ಸಮುದಾಯದ ಹಣವನ್ನು ದುರ್ಬಳಕೆ ಮಾಡಿಕೊಂಡು ಅನ್ಯಾಯ ಮಾಡಿದೆ’ ಎಂದು ಆರೋಪಿಸಿದರು.

ADVERTISEMENT

‘ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ವಿನಾಶಕ್ಕೆ ಮುಂದಾಗಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಭೋವಿ ನಿಗಮದಲ್ಲಿಯೂ ಕೋಟ್ಯಂತರ ಅವ್ಯವಹಾರದ ಹಗರಣ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥವಾಗಿ ಅಧಿಕಾರ ನಡೆಸಲು ಆಗದಿದ್ದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ’ ಎಂದು ಆಗ್ರಹಿಸಿದರು.

ಈವರೆಗೂ ಅಧಿಕಾರ ನಡೆಸಿದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ದಲಿತ ವಿರೋಧಿ ನೀತಿಯನ್ನೇ ಅನುಸರಿಸಿಕೊಂಡು ಬಂದಿವೆ. ಸಮುದಾಯದ ವಿಶೇಷ ಮೀಸಲು ಅನುದಾನವನ್ನು ಹಲವು ಇಲಾಖೆಗಳಲ್ಲಿ ಸಮರ್ಪಕವಾಗಿ ಬಳಕೆ ಮಾಡಿಲ್ಲ. ಈ ಮೂಲಕ ಸಮುದಾಯವನ್ನು ಮತ್ತಷ್ಟು ಹಿಂದುಳಿಯುವಂತೆ ಮಾಡಲೂ ಕಾರಣರಾಗಿದ್ದಾರೆ ಎಂದು ಕಿಡಿಕಾರಿದರು.

ಸರ್ಕಾರ ಆಯಾ ಆರ್ಥಿಕ ವರ್ಷದ ವಿಶೇಷ ಅನುದಾನವನ್ನು ಸಮುದಾಯದ ಮಕ್ಕಳ ಉನ್ನತ ಶಿಕ್ಷಣ, ಸ್ವಯಂ ಉದ್ಯೋಗ, ಭೂರಹಿತರಿಗೆ ಜಮೀನು ಮೊದಲಾದ ಯೋಜನೆಗಳಡಿ ಸವಲತ್ತು ನೀಡಲು ಬಳಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿ ದ್ರೋಹ ಎಸಗಿದೆ. ರಾಜ್ಯಪಾಲರು ಮಧ್ಯಪ್ರವೇಶಿಸಿ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಪರಿಶಿಷ್ಟರ ಮೀಸಲು ಹಣವನ್ನು ಅನ್ಯ ಉದ್ದೇಶಗಳಿಗೆ ಮಾಡಿಕೊಂಡಿರುವವರ ವಿರುದ್ಧ ಕಾಯ್ದೆಯಂತೆ ಶಿಕ್ಷೆಗೆ ಗುರಿಪಡಿಸಬೇಕು. ಹಣವನ್ನು ಖಾತೆಗೆ ವಾಪಸ್ ಮರಳಿಸಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ ಹಾಗೂ ಬೋವಿ ಅಭಿವೃದ್ಧಿ ನಿಗಮದಲ್ಲೂ ಅವ್ಯವಹಾರ ನಡೆದಿರುವ ಅನುಮಾನವಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಪರಿಶಿಷ್ಟರ ಕಲ್ಯಾಣಕ್ಕೆ ಇದ್ದ ಹಲವು ಯೋಜನೆಗಳಿಗೆ ಕತ್ತರಿ ಹಾಕಿದ್ದು, ಅವುಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸಿ.ರಾಜೇಗೌಡ, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಬಿಎಸ್‌ಪಿ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಬಿ.ಸುಧಾ, ಗಂಗಾಧರ್, ವಸಂತ್‌, ಮಂಜುಳಾ, ಹುಣಸೇಮಕ್ಕಿ ಲಕ್ಷ್ಮಣ, ಕೋಟೆ ಜಗದೀಶ್, ಜಮ್‌ಷಿದ್‌ ಖಾನ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.